ಕುಮಟಾ : “ಸ್ವಸ್ಥ ಆರೋಗ್ಯ ಪರಿಪಾಲನೆಯಲ್ಲಿ ಹಲ್ಲುಗಳ ಪಾತ್ರವೂ ಬಹುಮುಖ್ಯವಾಗಿದ್ದು ಅಸಮತೋಲನ ಆಹಾರ ಸೇವನೆ, ತಂಬಾಕು ಮತ್ತು ಗುಟ್ಕಾ ಮುಂತಾದ ಸೇವನೆಯಿಂದ ದಂತಕ್ಷಯವನ್ನು ಆಹ್ವಾನಿಸಿಕೊಂಡಂತಾಗುವುದಲ್ಲದೇ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆಯದಿದ್ದಲ್ಲಿ ಅನಾರೋಗ್ಯ ಉಲ್ಬಣಿಸಿ ಪ್ರಾಣಪಾಯವಾಗುವವರೆಗಿನ ಸಂಭವವೂ ಇದೆ.ಬಾಯಿ ಮತ್ತು ಹಲ್ಲಿನ ಸ್ವಚ್ಛತೆಯ ಬಗ್ಗೆ ಪ್ರತಿಯೋರ್ವರೂ ಪ್ರತಿದಿನವೂ ಲಕ್ಷ್ಯವಹಿಸಿ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು” ಎಂದು ಜಿಲ್ಲೆಯ ಜನಪ್ರಿಯ ದಂತ ತಜ್ಞ ಡಾ.ಡಿ.ಡಿ.ನಾಯಕ ಅವರು ಅಭಿಪ್ರಾಯಿಸಿದರು .
ಕುಮಟಾ ವಿವೇಕ ನಗರ ವಿಕಾಸ ಸಂಘವು ಶಾರದಾ ನಿಲಯ ಸರಕಾರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರವಿವಾರ ಹಮ್ಮಿಕೊಂಡಿದ್ದ ‘ಮಾಸಿಕ ಕಾರ್ಯಕ್ರಮ’ದಲ್ಲಿ ಅವರು ಪಾಲ್ಗೊಂಡು “ದಂತಕ್ಷಯ ರೋಗ ತಡೆಯುವಿಕೆ ಮತ್ತು ವಸಡುಗಳ ರಕ್ಷಣೆ” ಕುರಿತಾಗಿ ಉಪನ್ಯಾಸ ನೀಡಿದರು.ಬಾಯಿಯ ದುರ್ವಾಸನೆ ತಡೆಯುವ ಕ್ರಮಗಳ ಕುರಿತು ವಿವರಿಸಿ,ಪ್ರಾತ್ಯಕ್ಷಿಕೆಗಳ ಮೂಲಕ ಟೂಥ್ ಬ್ರಶ್ ನ್ನು ಬಳಸುವ ವಿಧಾನ ಮತ್ತು ಫ್ಲೋರೈಡ್ ಇರುವ ಟೂಥ್ ಪೇಸ್ಟ್ ಗಳನ್ನೇ ಉಪಯೋಗಿಸಬೇಕಾದ ಅಗತ್ಯತೆ ಕುರಿತು ಸವಿಸ್ತಾರವಾಗಿ ತಿಳಿಸುತ್ತ, ಸಂದೇಹಯುತ ಪ್ರಶ್ನೆಗಳಿಗೆ ಸಭಿಕರ ಮನಮುಟ್ಟುವಂತೆ ಸಮರ್ಪಕ ಮಾರ್ಗದರ್ಶನ ನೀಡಿದರು.
ವೇದಿಕೆಯಲ್ಲಿ ಡಾ.ಡಿ.ಡಿ.ನಾಯಕ ರವರ ಧರ್ಮಪತ್ನಿ ಡಾ.ವನಮಾಲಾ ನಾಯಕ ಮತ್ತು ಸಭಾಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಡಾ.ಎಮ್.ಆರ್.ನಾಯಕ ಉಪಸ್ಥಿತರಿದ್ದರು.
ಸುದೀರ್ಘ ವೃತ್ತಿ ಜೀವನದ ಶ್ರೇಷ್ಠ ಸಾಧನೆಗಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಡಿ.ಡಿ.ನಾಯಕ ರವರನ್ನು ಈ ಸಂದರ್ಭದಲ್ಲಿ ಸಂಘದ ಪರವಾಗಿ ಸನ್ಮಾನಿಸಲಾಯಿತು.
ಆರಂಭದಲ್ಲಿ ವಿವೇಕ ನಗರ ವಿಕಾಸ ಸಂಘದ ನಿರ್ದೇಶಕ ಜಯದೇವ ಬಳಗಂಡಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯದರ್ಶಿ ಡಾ.ಡಿ.ಡಿ.ಭಟ್ಟ ಕಾರ್ಯಕ್ರಮ ನಿರೂಪಿಸಿದರು.ಉಪಾಧ್ಯಕ್ಷ ಎಸ್.ಆಯ್.ನಾಯ್ಕ ವಂದಿಸಿದರು.ಸಂಜಯ ಪಂಡಿತ ನಿರ್ವಹಿಸಿದರು. ಸಭೆಯಲ್ಲಿ ಪಾಲ್ಗೊಂಡ ಸ್ಥಾನಿಕರು ಇಂತಹ ಜನೋಪಯೋಗಿ ಕಾರ್ಯಕ್ರಮ ಸಂಘಟನಾ ಕಾರ್ಯಗಳಿಗಾಗಿ ಸಂಘದ ಕುರಿತು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.