ಅಂಕೋಲಾ : ಟಯರ್ ಪಂಚರ್ ಆಗಿದೆ ಎಂದು ರಸ್ತೆಯ ಅಂಚಿಗೆ ನಿಲ್ಲಿಸಿ, ದುರಸ್ಥಿ ಕಾರ್ಯ ನಡೆಸುತ್ತಿದ್ದಾಗ, ಜೋರಾಗಿ ಬಂದ ಇನ್ನೊಂದು ಟ್ಯಾಂಕರ್ ಲಾರಿಯ ಚಕ್ರಗಳು ರಸ್ತೆಯಂಚಿನಲ್ಲಿ ಫಂಕ್ಚರ್ ತೆಗೆಯುತ್ತಿದ್ದ ಲಾರಿ ಕ್ಲೀನರ್ ನ ಮೇಲೆ ಹಾದು ಆತ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ರಾ.ಹೆ. 63 ರ ಯಲ್ಲಾಪುರ ಅಂಕೋಲಾ ಮಾರ್ಗಮಧ್ಯೆ ಸುಂಕಸಾಳ ( ವಜ್ರಳ್ಳಿ. ಕಳಸದಮಕ್ಕಿ ) ಬಳಿ ಸಂಭವಿಸಿದೆ.
ಘಟನೆಯಿಂದ ಲಾರಿ ಕ್ಲೀನರ್ ಓರ್ವ ಸ್ಥಳದಲ್ಲೇ ಮೃತಪಟ್ಟರೆ, ಲಾರಿ ಮಾಲಕ ಕಾಲಿಗೆ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಘಟನೆ ನಡುರಾತ್ರಿ 1.30 ರ ಸುಮಾರಿಗೆ ನಡೆದಿದೆ. ಹಾವೇರಿ ರಾಣೇಬೆನ್ನೂರು ಮೂಲದ ಬಸವರಾಜ (22 ) ಮೃತ ದುರ್ದೈವಿಯಾಗಿದ್ದಾನೆ. ಹಾವೇರಿಯಿಂದ ಸಿಮೆಂಟ್ ಶೀಟ್ ಗಳನ್ನು ಗೋವಾ ಕಡೆ ಸಾಗಿಸುತ್ತಿದ್ದ ಲಾರಿ ಯಲ್ಲಾಪುರ ಮಾರ್ಗವಾಗಿ ಅಂಕೋಲಾ ಕಡೆ ಬರುತ್ತಿದ್ದಾಗ ದಾರಿ ಮಧ್ಯೆ ಲಾರಿಯ ಟೈಯರ್ ಪಂಚರ್ ಆಗಿದೆ. ಈ ವೇಳೆ ತಮ್ಮ ವಾಹನವನ್ನು ರಸ್ತೆಯಂಚಿಗೆ
ನಿಲ್ಲಿಸಿ ಸರಿಪಡಿಸುತ್ತಿದ್ದಾಗ ಈ ಘಟನೆ ನಡೆದಿದ್ದು ಬಸವರಾಜ ಈತನ ಮೇಲೆ ವಾಹನ ಹಾದು ಹೋಗಿದೆ ಎನ್ನಲಾಗಿದ್ದು, ಅದರ ಪರಿಣಾಮ ಗಂಭೀರ ಗಾಯಗೊಂಡು ಆತ ಸ್ಥಳದಲ್ಲಿಯೇ ಮೃತಪಟ್ಟರೆ, ಪಕ್ಕದಲ್ಲಿಯೆ ಇದ್ದ ಲಾರಿ ಮಾಲಕ ಲಿಂಗರಾಜ್ ಈತನಿಗೂ ಟ್ಯಾಂಕರ್ ಲಾರಿ ಬಡಿದ ಪರಿಣಾಮ ಆತನ ಎಡ ಕಾಲಿಗೆ ಪೆಟ್ಟು ಬಿದ್ದು ಆಸ್ಪತ್ರೆಗೆ ದಾಖಲಿಸುವಂತಾಗಿದೆ.
ಅಪಘಾತ ಪಡಿಸಿದ ಟ್ಯಾಂಕರ್ ಲಾರಿ ಚಾಲಕ ತನ್ನ ವಾಹನವನ್ನು ನಿಲ್ಲಿಸದೇ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಪೊಲೀಸರು ಸ್ಥಳ ಪರಿಶೀಲಿಸಿ ಕಾನೂನು ಕ್ರಮ ಮುಂದುವರೆಸಿದ್ದಾರೆ.