ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಕುರಿತು ಬಜೆಟ್‌ನಲ್ಲಿ ಘೋಷಣೆ ಮಾಡದ ರಾಜ್ಯ ಸರ್ಕಾರದ ಧೋರಣೆ ವಿರೋಧಿಸಿ, ಹೊಸ ಪಿಂಚಣಿ ನೀತಿ ರದ್ದಿತಿಗೆ ಆಗ್ರಹಿಸಿ ನೌಕರರು ಮುಷ್ಕರಕ್ಕೆ ಮುಂದಾಗಿದ್ದಾರೆ. 5.11 ಲಕ್ಷ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಧುಮುಕಿದ್ದಾರೆ. ಇದರಿಂದ ತಾಲೂಕಿನ ಬಹುತೇಕ ಶಾಲೆಗಳು ಕಚೇರಿಗಳು ಬಂದಾಗಿದ್ದವು.
ಮುಷ್ಕರ ಮಾಡುವ ಅನಿವಾರ್ಯತೆ ಎದುರಾಗಿದೆ.
ನಮಗೆ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯಗಳನ್ನು ನಿಗದಿತ ಅವಧಿಯಲ್ಲಿ ನೀಡದೇ ಇರುವುದರಿಂದ ಅನಿವಾರ್ಯವಾಗಿ ಮುಷ್ಕರದ ಹಾದಿ ಹಿಡಿದಿದ್ದೇವೆ. 7 ನೇ ವೇತನ ಆಯೋಗ ಹಾಗೂ ಹಳೆಯ ಪಿಂಚಣಿ ಯೋಜನೆ ಜಾರಿಗಾಗಿ ಒತ್ತಾಯಿಸಿ ಈ ಹೋರಾಟ ನಡೆಯುತ್ತಿದೆ. ನಾವು ಪ್ರಾಥಮಿಕ ಶಾಲಾ ಶಿಕ್ಷಕರೂ ಇದರಲ್ಲಿ ಭಾಗವಹಿಸುತ್ತಿದ್ದು ಇಂದಿನಿಂದ ಕುಮಟಾದ ಎಲ್ಲಾ ಶಾಲೆಗಳೂ ತಮ್ಮ ಚಟುವಟಿಕೆಗಳನ್ನು ಸ್ಥಗಿತಗೊಳಿಸಿವೆ. ಇದರಿಂದ ವಿದ್ಯಾರ್ಥಿಗಳಿಗೆ, ಪಾಲಕರಿಗೆ ಹಾಗೂ ಸಾರ್ವಜನಿಕರಿಗೆ ಆಗುತ್ತಿರುವ ಅನಾನುಕೂಲಕ್ಕೆ ನಾವು ವಿಷಾದ ವ್ಯಕ್ತಪಡಿಸುತ್ತಾ ಅವರೆಲ್ಲರ ಬೆಂಬಲವನ್ನು ಕೋರುತ್ತಿದ್ದೇವೆ. ಸಮಸ್ಯೆ ಶೀಘ್ರದಲ್ಲಿ ಬಗೆಹರಿಯಲಿದೆ ಎಂಬ ವಿಶ್ವಾಸ ನಮಗಿದೆ ಎಂದು ತಾಲೂಕಾ ಶಿಕ್ಷಕರ ಸಂಘದ ಅಧ್ಯಕ್ಷ ರವೀಂದ್ರ ಭಟ್ಟ ಸೂರಿ ತಿಳಿಸಿದ್ದಾರೆ.