ಯಲ್ಲಾಪುರ: ನಾವು ಮಾಡಿದ ದಾನ- ಧರ್ಮಾದಿಗಳು ಮಾತ್ರ ನಮ್ಮ ಬೆನ್ನಿಗೆ ನಿಲ್ಲುತ್ತವೆ. ಅದರಲ್ಲೂ ಮಂದಿರ, ಕೆರೆ, ಸರೋವರಗಳ ನಿರ್ಮಾಣಕ್ಕೆ ನೀಡಿದ ಮತ್ತು ಅನ್ನದಾನ ಅತ್ಯಂತ ಶ್ರೇಷ್ಠವಾದುದು ಎಂದು ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಮಠಾಧೀಶ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಹೇಳಿದರು. ಅವರು ಬೀಗಾರ-ತಾರಗಾರಿನ ಶ್ರೀಲಕ್ಷ್ಮಿನರಸಿಂಹ ದೇವಸ್ಥಾನದ ನೂತನ ಶಿಲಾಮಯ ಮಂದಿರದ ಪ್ರತಿಷ್ಟಾಪನಾ ಮಹೋತ್ಸವದ ಸಾನಿಧ್ಯವಹಿಸಿ, ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲ ಸಾಹಿತ್ಯ ಪುರಸ್ಕೃತ ತಮ್ಮಣ್ಣ ಕೋಮಾರ ಬೀಗಾರ ಅವರನ್ನು ಸನ್ಮಾನಿಸಿ, ಆಶೀರ್ವಚನ ನೀಡಿದರು.
ಯಜ್ಞ-ಯಾಗಾದಿಗಳಿಗೆ ನೀಡಿದ ದಾನವೂ ನಮ್ಮನ್ನು ಹಿಂಬಾಲಿಸಿಕೊಂಡು ಬರುತ್ತದೆ. ಅದು ನಮ್ಮ ಸ್ವಂತ ದುಡಿಮೆಯಿಂದ ಬಂದಿದ್ದಾಗಿರಬೇಕು ಎಂದು ಹೇಳಿದರು. ಹಳ್ಳಿಯ ಯುವಕರು ದೇಶ-ವಿದೇಶದ ಮಹಾನಗರಗಳಿಗೆ ವಲಸೆಹೊಗುತ್ತಿದ್ದಾರೆ. ಇದು ಹಳ್ಳಿಗಳಿಗೆ ಆತಂಕದ ವಿಷಯ. ದೇವಸ್ಥಾನ ನಿರ್ಮಿಸುವುದು ಕಷ್ಟವಾದರೂ ನಿರ್ಮಿಸುತ್ತಿದ್ದೀರಿ. ಆದರೆ ಅದರ ಜೊತೆ ಪೂಜೆ ವಿಧಿ-ವಿಧಾನಗಳು ಮುಂದಿನ ತಲೆಮಾರಿಗೂ ಮುಂದುವರಿಯುವಂತಾಗಬೇಕು ಎಂದು ಹೇಳಿದರು.
ಧರ್ಮಸ್ಥಳ ಸಂಘದ ಯೋಜನಾಧಿಕಾರಿ ಹನುಮಂತ ನಾಯ್ಕ ಮಾತನಾಡಿ, ಪೂಜ್ಯ ಹೆಗ್ಗಡೆಯವರು ಎಲ್ಲ ಮಂದಿರಗಳಿಗೂ ಆರ್ಥಿಕ ನೆರವು ನೀಡುತ್ತಾ ಬಂದಿದ್ದಾರೆ. ದೈವೀ ಸಂಕಲ್ಪದಿಂದ ಮಾತ್ರ ಇಂತಹ ಉತ್ತಮ ಮಂದಿರ ನಿರ್ಮಾಣವಾಗಲು ಸಾಧ್ಯ ಎಂದರು.
ಸಚಿವ ಶಿವರಾಮ ಹೆಬ್ಬಾರ್ ಮಾತನಾಡಿ, ಇಲ್ಲಿ ಸುಂದರವಾದ ಮಂದಿರ ನಿರ್ಮಾಣಕ್ಕೆ ಎಲ್ಲರೂ ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ. ಈ ಪ್ರದೇಶದ ಜನರಲ್ಲಿ ಸದಾ ಶ್ರದ್ದೆ, ವಿಶ್ವಾಸ, ಪ್ರೀತಿಯನ್ನು ಕಾಣಬಹುದು. ನಿಮ್ಮ ಊರಿನ ಅಭಿವೃದ್ಧಿಗಾಗಿ ನಾನು ಎಲ್ಲ ರೀತಿಯ ನೆರವನ್ನು ನೀಡಲು ಬದ್ಧನಾಗಿದ್ದೇನೆ ಎಂದರು.
ಗುಜರಾತ್ ರಾಜ್ಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ನರಸಿಂಹ ಕೋಮಾರ, ಸ್ವರ್ಣವಲ್ಲಿ ಮಠದ ವ್ಯವಸ್ಥಾಪಕ ಎಸ್.ಎನ್.ಗಾಂವ್ಕರ್ ಉಪಸ್ಥಿತರಿದ್ದರು.