ಕುಮಟಾ : ಇತ್ತೀಚಿನ ದಿನಗಳಲ್ಲಿ ನಾವು ಪಾಶ್ಚಾತ್ಯ ಆಹಾರ ಸಂಸ್ಕೃತಿಗಳ ದಾಸರಾಗುತ್ತಿದ್ದೇವೆ. ಆದರೆ
ನಮ್ಮ ಆಹಾರ ವ್ಯವಸ್ಥೆ ಸರಿಯಾಗದಿದ್ದಲ್ಲಿ ನಮ್ಮ ಬದುಕು ಸೋಲುತ್ತದೆ ಎಂದು ಖ್ಯಾತ ಆಯುರ್ವೇದ ವೈದ್ಯರಾದ ಡಾ. ನಾಗರಾಜ ಭಟ್ಟ ಹೇಳಿದರು ಅವರು ತಾಲೂಕಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸರಸ್ವತಿ ವಿದ್ಯಾ ಕೇಂದ್ರದಲ್ಲಿ ಮಾತೆಯರಿಗಾಗಿ ಆರೋಗ್ಯ~ ಅರಿವು ಕಾರ್ಯಕ್ರಮದಲ್ಲಿ ಮಾತೆಯರಿಗೆ ಆಹಾರ, ಆರೋಗ್ಯ, ಸಂಸ್ಕಾರದ ಕುರಿತಾಗಿ ಮಾಹಿತಿಯನ್ನು ನೀಡಿ ಮಾತನಾಡಿದರು.
ಜೀವನ ನಿಂತಿರುವುದು ಆರೋಗ್ಯದ ಮೇಲೆ, ಆರೋಗ್ಯ ನಿಂತಿರುವುದು ಆಹಾರದ ಮೇಲೆ ಹಾಗಾಗಿ ಸೂಕ್ತ ಆಹಾರ ವ್ಯವಸ್ಥೆ ರೂಪಿಸಿಕೊಳ್ಳುವ ಅಗತ್ಯತೆ ಇದೆ. ದೈಹಿಕ ಆರೋಗ್ಯ ಹಾಗೂ ಮಾನಸಿಕ ಆರೋಗ್ಯದ ಸ್ವಾಸ್ಥ್ಯ ಕಾಪಾಡಿಕೊಳ್ಳಬೇಕು ಎಂದರು ಸ್ವಸ್ಥ ಆಹಾರದ ವ್ಯವಸ್ಥೆ ರೂಪಿಸಿಕೊಳ್ಳಬೇಕು ಎಂದರು. ಬಾಲ್ಯಾವಸ್ಥೆಯಲ್ಲಿಯೇ ಕಾಣಿಸಿಕೊಳ್ಳುತ್ತಿರುವ ಸಕ್ಕರೆ ಖಾಯಿಲೆ, ಮಹಿಳೆಯರಲ್ಲಿ ಮುಟ್ಟಿನ ಸಮಸ್ಯೆ, ಕ್ಯಾನ್ಸರ್ ರೋಗಕ್ಕೆ ಬಲಿಯಾಗುತ್ತಿರುವ ಪರಿಸ್ಥಿತಿಯ ಬಗ್ಗೆ ಉದಾಹರಣೆಯೊಂದಿಗೆ ವಿವರಿಸಿದ ಅವರು. ಬದುಕಿನಲ್ಲಿ ಜೇನು ಹುಳುವಿನಂತೆ ಬದುಕಬೇಕು ಕೇವಲ ನೊಣದಂತೆ ಬದುಕು ಸಾಗಿಸುವಂತಾಗಬಾರದು ಆವಾಗ ಮಾತ್ರ ಧನಾತ್ಮಕ ಬದಲಾವಣೆ ಸಾಧ್ಯ ಎಂದು ಅವರು ವಿವರಿಸಿದರು.
ಶ್ರೀಮಂತನಾಗಲು ಹಲವಾರು ಅವಕಾಶಗಳಿದೆ, ಕೇವಲ ಹಣದಿಂದ ಮಾತ್ರ ಶ್ರೀಮಂತರಾಗುವಂತೆ ಹೇಳುವ ಬದಲು ಮಕ್ಕಳು ಮನುಷ್ಯತ್ವದಲ್ಲಿ ಹಾಗೂ ಮೌಲಿಕ ಬದುಕಿನಲ್ಲಿ ಶ್ರೀಮಂತರಾಗುವಂತೆ ಮಾಡಬೇಕು ಎಂದು ಪಾಲಕರಿಗೆ ತಿಳಿ ಹೇಳಿದರು.
ವೈದ್ಯರ ಮಾತುಗಳಿಗೆ ಪ್ರತಿಕ್ರಿಯೆ ನೀಡಿದ ಮಾತೆಯರು ಇಂತಹ ಕಾರ್ಯಕ್ರಮಗಳು ಉತ್ತಮ ಸಂಸ್ಕಾರ ಹಾಗೂ ಆಹಾರ ಆರೋಗ್ಯದ ಬಗ್ಗೆ ಅರಿವು ಮೂಡಿಸಿಕೊಳ್ಳಲು ಕಾರಣವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಶಿಕ್ಷಕ ಗಣೇಶ ಜೋಶಿ ಉಪನ್ಯಾಸಕರನ್ನು ಪರಿಚಯಿಸಿ, ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಮುಖ್ಯಶಿಕ್ಷಕಿ ಸುಜಾತಾ ನಾಯ್ಕ, ಸಾವಿತ್ರಿ ಹೆಗಡೆ ಹಾಗೂ ಶೈಕ್ಷಣಿಕ ಸಲಹೆಗಾರರಾದ ಆರ್.ಹೆಚ್ ದೇಶಭಂಡಾರಿ ವೇದಿಕೆಯಲ್ಲಿದ್ದರು.