ಹೊನ್ನಾವರ: ತಾಲೂಕಿನ ವಿವಿಧಡೆ ಮನೆ ಹಾಗೂ ಬೈಕ್ ಕಳ್ಳತನದ ಆರೋಪಿ ಲಕ್ಷ್ಮೀಶ್ವರ ಗದಗ ಮೂಲದ ಹನುಮಂತ ತೊಳಪ್ಪ ಕೊಂಚ ಕೊರವ ಎಂಬುವನನ್ನು ಹೊನ್ನಾವರ ಪೊಲೀಸರು ಸೋಮವಾರದಂದು ಕ್ಷಿಪ್ರಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ತಾಲೂಕಿನ ಖರ್ವಾ ಗ್ರಾಮದ ದಿಬ್ಬಣಗಲ್ ಬಳಿಯ ಹಳಗೇರಮಕ್ಕಿಯ ಕೃಷ್ಣಮೂರ್ತಿ ಭಟ್ ಎಂಬುವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಅಡುಗೆ ಕೋಣೆಯ ಮೇಲ್ದಾವಣಿಯ ಹಂಚು ತೆಗೆದು ಒಳಹೊಕ್ಕಿ ನಗದು ಹಣವನ್ನು ಕಳುವ ಮಾಡಿದ್ದ. ಈ ಕುರಿತು ಕೃಷ್ಣಮೂರ್ತಿ ಭಟ್ ಅವರು ಸೋಮವಾರದಂದು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕ್ಷಿಪ್ರಕಾರ್ಯಾಚರಣೆ ನಡೆಸಿದ ಹೊನ್ನಾವರ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಈತ ಸಾಗರದಿಂದ ವ್ಯಕ್ತಿಯೊಬ್ಬರ ಬೈಕ್ ಕದ್ದು ತಂದಿರುವುದು ಈ ವೇಳೆ ಪತ್ತೆಯಾಗಿದೆ.