ಯಲ್ಲಾಪುರ: ತಾಲೂಕಿನ ಉಮ್ಮಚಗಿ ಗ್ರಾಪಂ ವ್ಯಾಪ್ತಿಯ ಬಾಳೆಗದ್ದೆಯ ಹುಲಿದೇವರ ದೇವಸ್ಥಾನದ ಮೇಲೆ ಮರವೊಂದು ಬಿದ್ದು ದೇವಸ್ಥಾನಕ್ಕೆ ಹಾನಿಯಾದ ಘಟನೆ ಇತ್ತೀಚೆಗೆ ಸಂಭವಿಸಿದೆ. ಯಾರೋ ಕಿಡಿಗೇಡಿಗಳು ಹಚ್ಚಿದ ಬೆಂಕಿ ಬಾಳೆಗದ್ದೆಯ ತಿಮ್ಮನ ಮನೆ ಭಾಗದಲ್ಲಿ ರಾತ್ರಿ ಪೂರ್ತಿ ರುದ್ರನರ್ತನ ನಡೆಸಿತ್ತು. ಅಪಾರ ಪ್ರಮಾಣದ ಗಿಡಮರಗಳನ್ನು ಸುಟ್ಟಿದ್ದಲ್ಲದೆ, ರೈತರ ಹೊಲ, ಗದ್ದೆಗಳಿಗೂ ವ್ಯಾಪಿಸುವ ಭಯ ಹುಟ್ಟಿಸಿತ್ತು.
ಮಲ್ಲಾಪುರದ ಪಿ.ವಿ.ಹೆಗಡೆಯವರ ಕುಟುಂಬಕ್ಕೆ ಸೇರಿದ ಜಮೀನಿನ ಸುತ್ತಲೂ ಅಳವಡಿಸಲಾಗಿದ್ದ ಬಲೆಗಳನ್ನು ಕೂಡ ಇದೇ ಬೆಂಕಿ ಆಹುತಿ ತೆಗೆದುಕೊಂಡಿದ್ದಲ್ಲದೇ, ಬಾಳೆಗದ್ದೆಯ ಟಿ.ವಿ.ಹೆಗಡೆಯವರ ಕರಡದ ಬೇಣಕ್ಕೂ ನುಗ್ಗಿ ಹಾನಿ ಮಾಡಿತ್ತು. ಹತ್ತಿರವೇ ಇದ್ದ ದೊಡ್ಡ ಬಿಲ್ಕಂಬಿ ಮರಕ್ಕೂ ತಗುಲಿದ ಬೆಂಕಿ ಆ ಮರವನ್ನು ದೇವಸ್ಥಾನದ ಮೇಲೆ ಬೀಳುವಂತೆ ಮಾಡಿತ್ತು. ಮರ ಬಿದ್ದ ಪರಿಣಾಮವಾಗಿ ದೇವಸ್ಥಾನದ ಛಾವಣಿಯ ಸಿಮೆಂಟ್ ಸೀಟ್ ಮತ್ತು ಅದಕ್ಕೆ ಬಳಸಿದ್ದ ಕಬ್ಬಿಣದ ಸಾಮಗ್ರಿಗಳು ಹಾಳಾಗಿದ್ದು, ಪಕ್ಕದಲ್ಲಿರುವ ವಿದ್ಯುತ್ ಮಾರ್ಗವೂ ಹರಿದು ಬಿದ್ದಿದೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ದೇವಸ್ಥಾನ ಸಮಿತಿಯ ಅಧ್ಯಕ್ಷ ಉದಯ ಭಟ್ಟ ಕಲ್ಲಳ್ಳಿ, ಉಮ್ಮಚಗಿ ಗ್ರಾ.ಪಂ.ನ ಸ್ಥಳೀಯ ಸದಸ್ಯ ಗ.ರಾ.ಭಟ್ಟ, ಪಿ.ಡಿ.ಒ. ಜಿ.ಜಿ.ಶೆಟ್ಟಿ, ಗ್ರಾ.ಪಂ.ನ ಇನ್ನೋರ್ವ ಸದಸ್ಯ ಕುಪ್ಪಯ ಸಂಚಾರಿ ಮೊದಲಾದವರು ಭೇಟಿ ನೀಡಿ ಪರಿಶೀಲಿಸಿದ್ದಾರೆ.