ಕುಮಟಾ : ಪತ್ರಕರ್ತರನ್ನು ಸಮ್ಮೇಳನಾಧ್ಯಕ್ಷರು ತಮ್ಮ ಭಾಷಣದಲ್ಲಿ ನಿತ್ಯ ಸಾಹಿತಿಗಳೆಂದು ನಮೂದಿಸಿದ್ದಾರೆ. ಇವತ್ತಿನ ಕಾಲಘಟ್ಟದಲ್ಲಿ ಮುಂದಿನ ಪಿಳೀಗೆಯ ಪತ್ರಕರ್ತರಾಗಿ ಬರುವ ಭಾಷಾ ಬಳಕೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಸಾಹಿತ್ಯ ಸಮ್ಮೇಳನಗಳು ಸಂವಾದ-ಗೋಷ್ಠಿ ಮುಂತಾದವುಗಳ ಮೂಲಕ ಗಮನಹರಿಸಬೇಕಾದ ಅಗತ್ಯ ಕಂಡುಬಂದಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಪ್ರವೀಣ ಹೆಗಡೆ ಹೇಳಿದರು. ಅವರು ತಾಲೂಕಿನ ಕೋನಳ್ಳಿಯ ವನದುರ್ಗಾ ಸಭಾಭವನದಲ್ಲಿ ಪಂ.ಷಡಕ್ಷರಿ ಗವಾಯಿ ವೇದಿಕೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಕುಮಟಾ ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ ನಡೆದ ಕುಮಟಾ ತಾಲೂಕಾ ೯ ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರ ಜತೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

RELATED ARTICLES  ನೀರುಪಾಲದ ವಿದ್ಯಾರ್ಥಿ : ಶವವಾಗಿ ಪತ್ತೆ.


ಇಂದಿನ ಪರಿಸ್ಥಿತಿಯಲ್ಲಿ ಪತ್ರಕರ್ತರಿಗೆ ಅಧ್ಯಯನ ಮತ್ತು ಸಾಹಿತ್ಯ ಕೃಷಿಗೆ ಸಮಯ ಸಿಗದು. ಆರ್ಥಿಕ ಮೂಲಗಳಾದ ಜಾಹೀರಾತು ಮತ್ತು ಅದಕ್ಕೆ ಸಂಬಂಧಿಸಿದ ಹಣ ವಸೂಲಿಗೆ ಹೆಚ್ಚಿನ ಆದ್ಯತೆ ನೀಡುವ ಪ್ರಸಂಗವಿದೆ. ಆದರೆ ಅಧ್ಯಯನ ಮತ್ತು ಭಾಷಾ ಬಳಕೆ ಸೂಕ್ತವಾಗಿದ್ದರೆ ಜನರನ್ನು ತಲುಪುವುದು ಮತ್ತು ಸಮಾಜದ ಭಾಷಾ ಶುದ್ಧತೆಗೆ ಅನುಕೂಲವಾಗುತ್ತದೆ ಎಂದ ಅವರು, ಈಗಾಗಲೇ ಕನ್ನಡ ಭಾಷಾ ಬಳಕೆಯಲ್ಲಿ ಆಂಗ್ಲ ಪದಗಳು ಸ್ಥಾನ ಪಡೆಯುತ್ತ, ಭಾಷೆ ಕ್ಷೀಣವಾಗ ತೊಡಗಿದೆ. ೧೦ ವಾಕ್ಯಗಳನ್ನು ಆಂಗ್ಲ ಪದ ಬಳಸದೇ, ಬರೆಯುವ ಸವಾಲನ್ನು ಪ್ರತಿಯೊಬ್ಬರೂ ಸ್ವೀಕರಿಸಿದರೆ ಆಗ ಕನ್ನಡ ಶಬ್ಧಗಳನ್ನು ಜೀವಂತವಿಡುವುದಕ್ಕೆ ಸಾಧ್ಯ. ಕನ್ನಡ ಹೋರಾಟಗಾರರು ಎಂದು ಹೇಳಿಕೊಳ್ಳುವವರು ಈ ಸವಾಲನ್ನು ಮೊದಲು ಸ್ವೀಕರಿಸಲಿ. ಕನ್ನಡ ಹೋರಾಟ ಮಾಡುತ್ತೇನೆ ಎಂದು ಹೇಳುವವರು ಮೊದಲು ಶುದ್ಧ ಕನ್ನಡ ಭಾಷೆಯನ್ನು ಕಲಿತು ಆಮೇಲೆ ಕನ್ನಡ ಉಳಿಸುವ ಹೋರಾಟ ಮಾಡಲಿ ಎಂದರು.

RELATED ARTICLES  ದಯಾನಿಲಯ ಶಾಲಾ ವಿದ್ಯಾರ್ಥಿಗಳ ಸಾಧನೆ.

ನಿವೃತ್ತ ಪ್ರಾಧ್ಯಾಪಕ ಎಂ.ಆರ್.ನಾಯಕ ಆಶಯನುಡಿಗಳನ್ನಾಡಿದರು. ಸಂವಾದದಲ್ಲಿ ಸೂರ್ಯಕಾಂತ ನಾಯಕ, ಡಾ.ಶ್ರೀಧರ ನಾಯ್ಕ, ಡಾ.ಶ್ರೀಧರ ಗೌಡ ಉಪ್ಪಿನಗಣಪತಿ, ಮಂಜುನಾಥ ಬರ್ಗಿ, ಆನಂದ ಶೆಟ್ಟಿ, ಸಂಧ್ಯಾ ಭಟ್ಟ ಪಾಲ್ಗೊಂಡು ಸಮ್ಮೇಳನಾಧ್ಯಕ್ಷ ಡಾ.ಎಂ.ಎಚ್.ನಾಯ್ಕ ಬಳಿ ಉತ್ತರ ಪಡೆದರು. ಕ.ಸಾ.ಪ ತಾಲೂಕಾ ಕಾರ್ಯಕಾರಿಣಿ ಸದಸ್ಯ ಯೋಗೀಶ ಪಟಗಾರ ಸ್ವಾಗತಿಸಿ, ವಂದಿಸಿದರು. ಶಿಕ್ಷಕ ಎಂ.ಎಂ.ನಾಯ್ಕ ನಿರೂಪಿಸಿದರು.