ಕುಮಟಾ : ನಮ್ಮ ನಾಡು, ನುಡಿಯ ಬಗ್ಗೆ ಬರಿ ಅಭಿಮಾನವಿದ್ದರೆ ಸಾಲದು ನಾಡಿಗಾಗಿ ನಾವು ತ್ಯಾಗ ಮತ್ತು ಸೇವೆ ಸಲ್ಲಿಸಬೇಕು ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ಜಿ.ಎಲ್. ಹೆಗಡೆ ಹೇಳಿದರು.
ತಾಲೂಕಿನ ಕೋನಳ್ಳಿಯ ಶ್ರೀ ವನದುರ್ಗಾ ಸಭಾಭವನದಲ್ಲಿ ಪಂ. ಷಡಕ್ಷರಿ ಗವಾಯಿ ವೇದಿಕೆಯಲ್ಲಿ ಬುಧವಾರ ಆಯೋಜಿಸಿದ 9ನೇ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ಸಾಹಿತ್ಯದ ಕೃಷಿ ಬೆಳವಣಿಗೆಗೆ ಕೇವಲ ಸಂಘಟನೆ ಸಾಲದು. ಬದಲಾಗಿ ದೊಡ್ಡ ಪರಂಪರೆ ಬೆಳೆಯಬೇಕಾಗಿದೆ. ಕನ್ನಡ ನಮ್ಮೆಲ್ಲರ ಜೀವಾಳವಾಗಿದ್ದು, ಭಾರತದ ಸಂಸ್ಕ್ರತಿ ಕನ್ನಡದ ಮೇಲೆ ನಿಂತಿದೆ. ಭಾಷೆಯಲ್ಲಿ ಮೇಲು-ಕೀಳು ಎಂಬುದಿಲ್ಲ. ಉಳಿದ ಭಾಷೆಗಳನ್ನು ಗೌರವಿಸುವ ಮೂಲಕ ಕನ್ನಡ ಭಾಷೆಯ ಬೆಳವಣಿಗೆಗೆ ನಾವೆಲ್ಲರೂ ಕಟಿಬದ್ಧರಾಗಬೇಕು. ರಾಜ್ಯದ ಹಳ್ಳಿಗಳ ಮೂಲೆ ಮೂಲೆಗಳಲ್ಲಿ ಕನ್ನಡ ಹಾಸುಹೊಕ್ಕಾಗಿದ್ದು, ಆದರೆ ನಗರ ಪ್ರದೇಶಗಳಲ್ಲಿ ಕನ್ನಡ ಹುಡುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಬೇಸರದ ಸಂಗತಿಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಭಾಷೆಗೆ ಸೌಂದರ್ಯವಿದೆ. ಭಾಷೆಯನ್ನು ಗೌರವಸುವುದು ಎಂದರೆ ಆ ಭಾಷೆಯನ್ನು ಮಾತನಾಡುವ ಜನರನ್ನು ಗೌರವಿಸಿದಂತೆ. ಇಂದು ಓದುವ ಪರಿಪಾಠ ನಿಂತು ಹೋಗಿದೆ. ಪಂಪ, ಕುಮಾರವ್ಯಾಸರಾದಿಯಾಗಿ ಪ್ರಸಿದ್ದ ಸಾಹಿತಿಗಳ ಕಾವ್ಯವನ್ನು ವಾಚಿಸುವ ಕೆಲಸವನ್ನು ಪರಿಷತ್ತು‌ ಮಾಡಬೇಕು. ಆ ಮೂಲಕ ಸಾಹಿತ್ಯ ಅಭಿರುಚಿಯನ್ನು ಹೆಚ್ಚಿಸಬೇಕು ಎಂದು ಕಿವಿಮಾತು ಹೇಳಿದ ಅವರು, ನಮ್ಮ ಜಿಲ್ಲೆ ಹಲವಾರು ಯೋಜನೆಗಳಿಗೆ ನಮ್ಮ ನೆಲ ತ್ಯಾಗ ಮಾಡಿದ ಜಿಲ್ಲೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಆದರೆ ಉಳಿದ ಜಿಲ್ಲೆಗಳನ್ನು ಹೊಲಿಕೆ ಮಾಡಿದರೆ ಅಭಿವೃದ್ಧಿಯಲ್ಲಿ ಬಹಳಷ್ಟು ಹಿಂದಿದ್ದೇವೆ. ನಮ್ಮ ಜಿಲ್ಲೆ ಎಂಬ ಅಭಿಮಾನದ ಜೊತೆಗೆ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಸಾಂಸ್ಕೃತಿಕ, ಸಾಹಿತ್ಯದ ವೇದಿಕೆ ನಿರ್ಮಿಸುವುದು ಖಂಡಿತ ಅಗತ್ಯವಿದ್ದು, ಪ್ರತಿ ತಾಲೂಕಿನಲ್ಲಿ “ಕಾವ್ಯ ವಾಚನ” ಕಾರ್ಯಕ್ರಮಗಳನ್ನು ಏರ್ಪಡಿಸಿ, ಪ್ರತಿಯೊಬ್ಬರಲ್ಲಿಯೂ ಕಾವ್ಯದ ಅಭಿರುಚಿಯನ್ನು ಹುಟ್ಟಿಸುವಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ ಕಾರ್ಯೋನ್ಮುಖವಾಗಬೇಕು ಎಂದು ಸಲಹೆ ನೀಡಿದರು.

ಯಕ್ಷಗಾನದಲ್ಲಿ ಶುದ್ಧ ಕನ್ನಡ ಭಾಷೆ ಬಳಕೆಯಾಗುತ್ತದೆ. ಬೇರೆ ಭಾಷೆಗಳಿಗೆ ಅವಕಾಶವಿಲ್ಲ. ಗ್ರಾಮೀಣ ಭಾಗದ ಅನೇಕ ಯಕ್ಷಗಾನ ಕಲಾವಿದರು, ಅರ್ಥಧಾರಿಗಳು ಶುದ್ಧ ಕನ್ನಡದಲ್ಲಿ ಭಾಷೆ ಬಳಕೆ ಮಾಡುತ್ತಾರೆ. ಅವರ್ಯಾರು ಯುನಿವರ್ಸಿಟಿಗಳಲ್ಲಿ ಓದಿದವರಲ್ಲ. ಸಾಹಿತ್ಯವನ್ನು ಚೆನ್ನಾಗಿ ಅರ್ಥೈಸಿಕೊಂಡು ಅದನ್ನು ವೇದಿಕೆಯಲ್ಲಿ ಅಭಿವ್ಯಕ್ತಿಗೊಳಿಸುತ್ತಾರೆ ಎಂದರು.

ನಮ್ಮ ಜಿಲ್ಲೆಯನ್ನು ಎರಡು ಜಿಲ್ಲೆಯನ್ನಾಗಿ ಮಾಡಿದರೆ ಮಾಡಲಿ. ನಮ್ಮ ಈ ವ್ಯಾಪ್ತಿಗೆ ಬರುವ ಪ್ರದೇಶಕ್ಕೆ ಉತ್ತರ ಕನ್ನಡ ಎಂಬ ಹೆಸರೇ ಇರಲಿ ಎಂದು ಅವರು ಸ್ಥಳದ ಕುರಿತಾದ ಅಭಿಮಾನದ ಮಾತುಗಳನ್ನು ಹಂಚಿಕೊಂಡರು.

ಲೇಖಕ ಸಿ.ಡಿ.ಪಡುವಣಿ ರಚಿಸಿದ “ಬಿಂಬ” ಕವನ ಸಂಕಲನ ಕೃತಿಯನ್ನು ಲೋಕಾರ್ಪಣೆಗೊಳಿಸಿ, ಶಾಸಕ ದಿನಕರ ಶೆಟ್ಟಿ ಮಾತನಾಡಿ ಕನ್ನಡದ ಮೊಟ್ಟ ಮೊದಲ ರಾಜಧಾನಿ ನಮ್ಮ ಉತ್ತರ ಕನ್ನಡ ಜಿಲ್ಲೆಯ ಬನವಾಸಿ. ಆದಿ ಕವಿ ಪಂಪನನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಕೀರ್ತಿ ನಮ್ಮ ಜಿಲ್ಲೆ ಸಲ್ಲುತ್ತದೆ. ಕನ್ನಡ ಉಳಿಸಿ, ಬೆಳೆಸುವುದು ಕನ್ನಡಿಗರಾದ ನಮ್ಮೆಲ್ಲರ ಕರ್ತವ್ಯ. ಆ ನಿಟ್ಟಿನಲ್ಲಿ ನಾವೆಲ್ಲರು ಪ್ರಯತ್ನಿಸೋಣ ಎಂದರು. ನಮ್ಮಲ್ಲಿರುವ ಮೇಲು-ಕೀಳು ಎಂಬ ಬೇಧ-ಭಾವ ಮರೆತು ಕನ್ನಡ ಭಾಷೆಯ ಬೆಳವಣಿಗೆಗೆ ನಾವೆಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕಿದೆ. ಕನ್ನಡದ ೮ ಕವಿಗಳಿಗೆ ದೇಶದ ಅತ್ಯುನ್ನತ ಗೌರವವಾದ ಜ್ಞಾನಪೀಠ ಪ್ರಶಸ್ತಿ ಲಭಿಸಿರುವುದು ಕನ್ನಡಿಗರ ಹಿರಿಮೆ ದೇಶಮಟ್ಟದಲ್ಲಿ ಬೆಳಗಿದೆ. ಪ್ರತಿ ಶಾಲಾ-ಕಾಲೇಜುಗಳಲ್ಲಿ ಮತ್ತು ಉನ್ನತ ವ್ಯಾಸಂಗದಲ್ಲಿ ಇಂಗ್ಲಿಷ್ ಭಾಷೆಯ ಜತೆ ಕನ್ನಡವನ್ನು ಕಡ್ಡಾಯಗೊಳಿಸಲು ಸರ್ಕಾರ ಕಾನೂನು ಜಾರಿಗೊಳಿಸಬೇಕು. ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷೆ ಮಾನ್ಯತೆ ಲಭಿಸಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರ ಎಂದ ಅವರು, ಕನ್ನಡದ ಭಾಷೆಯ ಮೇರೆ ಅಪಾರ ಪ್ರೀತಿಯಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿ ಕಾರ್ಯಕ್ರಮಗಳಲ್ಲಿಯೂ ಬೆನ್ನೆಲುಬಾಗಿ ನಿಲ್ಲುತ್ತೇನೆ ಎಂದು ಭರವಸೆ ನೀಡಿದರು.

RELATED ARTICLES  ಹಿಂದೂ ಜಾಗರಣಾ ವೇದಿಕೆಯಿಂದ ನವರಾತ್ರಿ ಅಂಗವಾಗಿ ಆಯುಧ ಪೂಜೆ ಹಾಗೂ ದುರ್ಗಾದೌಡ

ಸಮ್ಮೇಳನಾಧ್ಯಕ್ಷ ಹಾಗೂ ಹಿರಿಯ ಸಾಹಿತಿ ಡಾ.ಎಂ.ಎಚ್.ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ,
ಭಾಷೆಗಳು ಬೆಳೆಯಲು ಪ್ರಖರ ವಿಚಾರಗಳು ಬರಬೇಕು, ಅನೇಕ ವರ್ಷಗಳಿಂದ ನಮ್ಮ ಸುತ್ತ ಅನೇಕ ಗುಪ್ತಗಾಮಿನಿಯಾಗಿ ವೈಚಾರಿಕ ಹಳ್ಳ ಹರಿದಿದೆ ಎಂದು ಅಭಿಪ್ರಾಯಪಟ್ಟರು. ಸಮಾಜ ಹಾಗೂ ಬದುಕು ಅತ್ಯಂತ ಜಂಜಡವಾದುದು, ಬದಲಾವಣೆ ಒಂಮ್ಮಿಂದೊಮ್ಮಲೇ ಸಾಧ್ಯವೇ ಇಲ್ಲ, ಬರವಣಿಗೆಯಿಂದ ಬದಲಾವಣೆ ಸಾಧ್ಯ ಆದರೆ ಅದಕ್ಕೆ ಅದರದೇ ಕಾಲದ ಅಗತ್ಯತೆ ಇದೆ ಎಂದು ಅವರು ವಿವರಿಸಿದರು. ಕಾಲಿಗೆ ನೋವಾದಾಗ ಕೋಲು ಹಿಡಿದು ನಡೆವುದು ಸಹಜ ಆದರೆ ನೋವು ಇಲ್ಲವಾದಾಗಲೂ ಕೋಲು ಊರಿ ನಡೆವ ರೂಢಿ ತಪ್ಪಿಸಿಕೊಳ್ಳಬೇಕು ಎಂದು ಮಾರ್ಮಿಕವಾಗಿ ಮಾತನಾಡಿದರು. ಉತ್ತರಕನ್ನಡದ ಹಲವರಿಗೆ ಒಂದು ಎಕರೆಗಿಂತ ಕಡಿಮೆ ಭೂಮಿ ಇದೆ ಹೀಗಾಗಿ ಬೇರೆ ಪ್ರದೇಶಗಳಿಗೆ ಜನರು ವಲಸೆಹೋಗುವುದು ಸಾಮಾನ್ಯವಾಗಿದೆ. ಆದರೆ ನಮ್ಮ ನೆಲದ ಬಗ್ಗೆ ಅಭಿಮಾನ ಎಲ್ಲರಲ್ಲಿಯೂ ಮೂಡಬೇಕು ಎಂದು ಅಭಿಪ್ರಾಯಪಟ್ಟರು. ಎಲ್ಲ ಭಾಷೆಗಳನ್ನು ಪ್ರೀತಿಸಬೇಕು ಆದರೆ ನಮ್ಮ ಭಾಷೆ ಕುರಿತಾಗಿ ಅಭಿಮಾನ ಇರಬೇಕು. ಇಂಗ್ಲೀಷ್ ಹಿಂದಿ ತೆಲುಗು ತಮಿಳು ಎಲ್ಲ ಭಾಷೆಗಳನ್ನು ಕಲಿತರು ನಮ್ಮ ಭಾಷೆಯನ್ನು ಬದುಕಿಗೆ ಬಳಸಿಕೊಂಡಾಗ ಮಾತ್ರ ಕನ್ನಡವು ಶ್ರೀಮಂತವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಶ್ರೇಷ್ಠ ಸಾಹಿತ್ಯ ಸೃಷ್ಟಿಯಾಗುವ ಪ್ರಕ್ರಿಯೆಯಲ್ಲಿ ಪತ್ರಿಕಾ ಸಾಹಿತ್ಯದ ಕೊಡುಗೆ ಉಲ್ಲೇಖನೀಯವಾದದ್ದು ಮುದ್ರಣ ಮಾಧ್ಯಮವಾಗಿರುವ ಪತ್ರಿಕಾ ವರದಿಗಳು, ಲೇಖನಗಳು ಒಂದು ರೀತಿಯ ನಿತ್ಯ ಸಾಹಿತ್ಯವೆಂದೇ ಪರಿಗಣಿಸಬೇಕಾಗುತ್ತದೆ ಎಂದು ಅವರು ವಿವರಿಸಿದರು.
ಪ್ರಾಕೃತಿಕ ಸೌಂದರ್ಯದ ಖಣಿಯಾದ ಹಾಗೂ ತನ್ನದೇ ಆದ ಇತಿಹಾಸ ಹೊಂದಿರುವ ಇಂತಹ ಸ್ಥಳಗಳಲ್ಲಿ ಸಾಹಿತ್ಯ ಸಮ್ಮೇಳನಗಳನ್ನು ಹಮ್ಮಿಕೊಳ್ಳುವುದರ ಮೂಲಕ ಹಳ್ಳಿಹಳ್ಳಿಗೂ ಸಾಹಿತ್ಯ ಪರಿಷತ್ತು ಹೋಗುವಂತಹ ಕಾರ್ಯ ಮಾಡಿರುವುದು ಪ್ರಶಂಸನಿಯ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎನ್.ವಾಸರೆ ಆಶಯನುಡಿಯನ್ನಾಡಿ, ಧರ್ಮ, ಜಾತಿ, ನುಡಿ, ಭಾಷೆ ಮತ್ತಿತರ ಸಂಘರ್ಷಗಳ ನಡುವೆ ಬದುಕುತ್ತಿದ್ದೇವೆ. ಇದನ್ನು ದೂರ ಮಾಡಿ ಬಾಂಧವ್ಯದ ಬದುಕು ಕಟ್ಟುವ ಕೆಲಸ ಮಾಡಬೇಕಾಗಿದ್ದು, ಇಂದು ಬದುಕಿಗೆ ಹತ್ತಿರವಿರುವ ಬರಹಗಳನ್ನು ಬರೆಯಬೇಕಾಗಿದೆ. ಗಡಿ, ಭಾಷೆ, ನುಡಿಯ ವಿಚಾರಕ್ಕೆ ಕಚ್ಚಾಡುತ್ತಿರುವ ನಮ್ಮನ್ನು ಕೂಡಿಸಿ ಒಲಿಸಬೇಕಾಗಿದೆ. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ ಈಗಾಗಲೇ ನಾಡಿನಲ್ಲಿ ಕನ್ನಡಕ್ಕಾಗಿ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಗ್ರಾಮೀಣ ಭಾಗಗಳಲ್ಲಿರುವ ಕನ್ನಡದ ಪ್ರೀತಿ, ಸಂಸ್ಕೃತಿ ನಗರ ಭಾಗದಲ್ಲಿಲ್ಲ. ಸಾಹಿತ್ಯ ಪರಿಷತ್ ಯಾರೊಬ್ಬರ ಸ್ವತ್ತಲ್ಲ. ಕನ್ನಡಿಗರ ಪ್ರಾಥಮಿಕ ಸಂಸ್ಥೆಯಾಗಿದ್ದು, ಕರ್ನಾಟಕದ ಕನ್ನಡಿಗರ ಆಸ್ತಿ ಎಂದರು.

ಕ.ಸಾ.ಪ ತಾಲೂಕಾಧ್ಯಕ್ಷ ಸುಬ್ಬಯ್ಯ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ರಾಷ್ಟ್ರ ಧ್ವಜಾರೋಹಣವನ್ನು ತಹಸೀಲ್ದಾರ ವಿವೇಕ ಶೇಣ್ವಿ ನೆರವೇರಿಸಿದರು. ಪುಸ್ತಕಗಳ ಮಳಿಗೆಯನ್ನು ಕ.ಸಾ.ಪ ಮಾಜಿ ಜಿಲ್ಲಾಧ್ಯಕ್ಷ ರೋಹಿದಾಸ ನಾಯಕ ಉದ್ಘಾಟಿಸಿದರು. ಕೂಜಳ್ಳಿ ಗ್ರಾ.ಪಂ ಅಧ್ಯಕ್ಷ ಗಜಾನನ ನಾಯ್ಕ ಉದ್ಘಾಟಿಸಿದರು. ಬಿ.ಇ.ಓ ರಾಜೇಂದ್ರ ಭಟ್ಟ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಮಹಾಬಲಮೂರ್ತಿ ಕೊಡ್ಲಕೆರೆ ಧ್ವಜ ಹಸ್ತಾಂತರಿಸಿದರು. ತಾ.ಪಂ ಪ್ರಭಾರಿ ಕಾರ್ಯನಿರ್ವಹಣಾಧಿಕಾರಿ ನಾಗರತ್ನಾ ನಾಯಕ, ಪಿ.ಐ ತಿಮ್ಮಪ್ಪ ನಾಯ್ಕ, ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಆನಂದು ಗಾಂವ್ಕರ, ತಾಲೂಕಾ ಶಿಕ್ಷಕರ ಸಂಘದ ಅಧ್ಯಕ್ಷ ರವೀಂದ್ರ ಭಟ್ಟ ಸೂರಿ, ತಾಲೂಕಾ ವನದುರ್ಗಾ ಸಭಾಭವನದ ಅಧ್ಯಕ್ಷ ಎಚ್.ಆರ್.ನಾಯ್ಕ, ಸಾಹಿತಿಗಳಾದ ಡಾ.ಶ್ರೀಧರ ಬಳಗಾರ, ಪುಟ್ಟು ಕುಲಕರ್ಣಿ, ಬೀರಣ್ಣ ನಾಯಕ, ಎನ್.ಆರ್.ಗಜು, ಲೇಖಕ ಸಿ.ಡಿ.ಪಡುವಣಿ, ಉಪಸ್ಥಿತರಿದ್ದರು. ಅಘನಾಶಿನಿ ಸರ್ಕಾರಿ ಪ್ರೌಢಶಾಲೆ ಮುಖ್ಯಾಧ್ಯಾಪಕಿ ಮಮತಾ ನಾಯ್ಕ ಪುಸ್ತಕವನ್ನು ಪರಿಚಯಿಸಿದರು. ಕ.ಸಾ.ಪ ಜಿಲ್ಲಾ ಪದಾಧಿಕಾರಿ ಪಿ.ಎಂ.ಮುಕ್ರಿ ಸಮ್ಮೇಳನಾಧ್ಯಕ್ಷರನ್ನು ಪರಿಚಯಿಸಿದರು.ಕ.ಸಾ.ಪ ಜಿಲ್ಲಾ ಗೌರವ ಕಾರ್ಯದರ್ಶಿ ಪಿ.ಆರ್.ನಾಯ್ಕ ಸ್ವಾಗತಿಸಿದರು. ಉಪನ್ಯಾಸಕ ಗಿರೀಶ ವನ್ನಳ್ಳಿ, ಶಿಕ್ಷಕ ನಾಗರಾಜ ಶೆಟ್ಟಿ ನಿರೂಪಿಸಿದರು. ಊರಕೇರಿಯ ರಾಮನಾಥ ಪ್ರೌಢಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಉಪನ್ಯಾಸಕ ಪ್ರಮೋದ ನಾಯ್ಕ ವಂದಿಸಿದರು.

RELATED ARTICLES  ಮರು ಮೌಲ್ಯಮಾಪನದಲ್ಲಿ 625 ಕ್ಕೆ 625 ಅಂಕ : ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಸಂಜನಾ ಭಟ್ಟ : ಕೊಂಕಣಕ್ಕೆ ಇನ್ನೊಂದು ಹೆಮ್ಮೆ.

ಮೆರವಣಿಗೆ ಮೂಲಕ ಸಮ್ಮೇಳನ ಅಧ್ಯಕ್ಷರು ಹಾಗೂ ಅತಿಥಿಗಳನ್ನು ಕರೆತರಲಾಯಿತು. ವಿದ್ಯಾರ್ಥಿಗಳು ಕನ್ನಡದ ಧ್ವಜ ಹಿಡಿದು ಕನ್ನಡದ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯ ರಂಗು ಹೆಚ್ಚಿಸಿದರು. ಎಲ್ಲರಿಗೂ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು, ಪುಸ್ತಕ ಮಳಿಗೆಗಳು ಗಮನ ಸೆಳೆದವು.

ವಿಚಾರ ಗೋಷ್ಠಿ
ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಡಿ.ಡಿ ಭಟ್ಟ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಚಾರ ಗೋಷ್ಠಿಯಲ್ಲಿ ಪರಿವರ್ತನಾಶೀಲ ಸಾಹಿತ್ಯ ಮತ್ತು ಸ್ಥಳೀಯ ಸಾಹಿತ್ಯದ ಬಗ್ಗೆ ಕೊನಳ್ಳಿ ರಾಜೀವ ನಾಯ್ಕ ವಿಷಯ ಮಂಡಿಸಿದರು ಹಾಗೂ ತಾಲೂಕಿನ ಐತಿಹಾಸಿಕ ಹಿನ್ನೆಲೆ ಮತ್ತು ಪ್ರಚಲಿತ ವಿದ್ಯಮಾನಗಳಬಗ್ಗೆ ಎಚ್.ಎಸ್ ಗುನಗ ವಿಷಯ ಮಂಡಿಸಿದರು. ವೇದಿಕೆಯಲ್ಲಿ ಸುರೇಶ ಭಟ್ಟ, ದಯಾನಂದ ದೇಶಭಂಡಾರಿ ಇದ್ದರು.

ಕವಿ-ಕಾವ್ಯ-ಸಮಯ
ಹಿರಿಯ ಸಾಹಿತಿ ಕೆ.ಎಚ್ ಪ್ರಭು ಅವರ ಅಧ್ಯಕ್ಷತೆಯಲ್ಲಿ ನಡೆದ ಎರಡನೇ ಗೋಷ್ಠಿಯಲ್ಲಿ ಕವಿತಾ ವಾಚನ ಕಾರ್ಯಕ್ರಮ ನಡೆಯಿತು. ಟಿ.ಜಿ ಭಟ್ಟ ಹಾಸಣಗಿ ಆಶಯನುಡಿಗಳನ್ನು ಆಡಿದರು. 20 ಕ್ಕೂ ಅಧಿಕ ಯುವ ಕವಿಗಳು ಹಾಗೂ ಹಿರಿಯ ಸಾಹಿತಿಗಳು ಕವಿತೆಯ ವಾಚನ ಮಾಡಿ ಗಮನ ಸೆಳೆದರು.

ಸಮ್ಮೇಳನಾಧ್ಯಕ್ಷರ ಜೊತೆ ಸಂವಾದ
ನಿವೃತ್ತ ಪ್ರಾಧ್ಯಾಪಕ ಎಮ್.ಆರ್ ನಾಯಕ ಅವರ ಅಧ್ಯಕ್ಷತೆಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರವೀಣ ಹೆಗಡೆಯವರ ಉಪಸ್ಥಿತಿಯಲ್ಲಿ ಸಮ್ಮೇಳನಾಧ್ಯಕ್ಷರ ಜೊತೆ ಸಂವಾದ ಕಾರ್ಯಕ್ರಮ ನಡೆಯಿತು. ಸೂರ್ಯಕಾಂತ ನಾಯಕ, ಶ್ರೀಧರ ನಾಯ್ಕ, ಶ್ರೀಧರ ಗೌಡ ಉಪ್ಪಿನಗಣಪತಿ, ಮಂಜುನಾಥ ಬರ್ಗಿ, ಆನಂದ ಶೆಟ್ಟಿ, ಸಂಧ್ಯಾ ಭಟ್ಟ ಸಂವಾದದಲ್ಲಿ ಭಾಗವಹಿಸಿದರು.

ಜಿಲ್ಲಾ ಕ.ಸಾ.ಪ ದ ಅಧ್ಯಕ್ಷರಾದ ಬಿ.ಎನ್. ವಾಸರೆಯವರ ಅಧ್ಯಕ್ಷತೆಯಲ್ಲಿ ನಡೆದ ಸನ್ಮಾನ ಮತ್ತು ಸಮಾರೋಪ ಸಮಾರಂಭದಲ್ಲಿ ನಿವೃತ್ತ ಮುಖ್ಯಾಧ್ಯಾಪಕರಾದ ಅರುಣ ಉಭಯಕರ ಸಮಾರೋಪ ನುಡಿಗಳನ್ನು ಆಡಿದರು.

ಸಮ್ಮೇಳನಾಧ್ಯಕ್ಷರಾದ ಡಾ. ಎಮ್.ಎಚ್ ನಾಯ್ಕ ಅವರು ಮಾತನಾಡಿ ದೇಶ ಭಾಷೆಯ ಬಗ್ಗೆ ಜನರನ್ನು ತೊಡಗಿಸುವುದು ಸಾಮಾನ್ಯದ ಕಾರ್ಯವಲ್ಲ. ಸ್ಥಳೀಯ ಲಭ್ಯತೆಯ ಸಾಹಿತ್ಯಾಸಕ್ತರನ್ನು ಹಸಿರು ಪರಿಸರದ ನಡುವೆ ತಂದಿರುವ ಸಂಯೋಜಕರ ಕಾರ್ಯ ಮೆಚ್ಚುವಂತಹುದ್ದು ಎಂದು ಅಭಿಪ್ರಾಯಪಟ್ಟರು.

ಸಮಾರೋಪ ಸಮಾರಂಭ
ಶ್ರೀಮತಿ ಶಾರದಾ ಶೆಟ್ಟಿ, ರತ್ನಾಕರ ನಾಯ್ಕ, ಪ್ರದೀಪ ನಾಯಕ, ವೀಣಾ ಸೂರಜ್ ನಾಯ್ಕ ಸೋನಿ, ಸೂರಜ್ ನಾಯ್ಕ ಸೋನಿ, ನಾಗರಾಜ ನಾಯ್ಕ ಇತರರು ವೇದಿಕೆಯಲ್ಲಿದ್ದರು. ಗೋವಿಂದ ನಾಯ್ಕ (ಯಕ್ಷಗಾನ), ಕೃಷ್ಣ ಕಲ್ಕೋಡ (ನಾಟಿ ವೈದ್ಯ) ಪಾಂಡುರಂಗ ಗಣಪತಿ ನಾಯ್ಕ (ಹಳಗನ್ನಡ ವಾಚಕ), ವೆಂಕಟೇಶ ಪ್ರಭು (ಕ್ರೀಡೆ), ರಾಘವೇಂದ್ರ ದೀವಗಿ (ಕ್ರೀಡೆ), ಎಚ್.ಎಸ್ ಗಜಾನನ(ಮತ್ಸ್ಯೋದ್ಯಮ), ಶಾರದಾ ಭಟ್ಟ(ಸಾಹಿತ್ಯ), ಎಚ್.ಎಸ್ ಪಟಗಾರ (ಶಿಕ್ಷಣ), ರಾಘು ದೇಶಭಂಡಾರಿ (ಶಿಲ್ಪಕಲೆ), ಸಿರಿಲ್ ಲೋಪಿಸ್(ಸಾಮಾಜಿಕ ಸೇವೆ) ಇವರುಗಳ ಸಾಧನೆ ಪರಿಗಣಿಸಿ ವೇದಿಕೆಯಲ್ಲಿ ಗೌರವಿಸಲಾಯಿತು. ಕ.ಸಾ.ಪ ಕಾರ್ಯದಲ್ಲಿ ಪ್ರಮೋದ ನಾಯ್ಕ ನಿರ್ಣಯ ಮಂಡನೆ ಮಾಡಿದರು.