ಕುಮಟಾ : ತಾಲೂಕಿನ ಹೊಳೆಯಗದ್ದೆ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಸಮಿತಿಯ ಅಧ್ಯಕ್ಷ, ಧಾರೇಶ್ವರ ವ್ಯವಸಾಯ ಸೇವಾ ಸಹಕಾರಿ ಸಂಘದ ನಿಕಟಪೂರ್ವ ಅಧ್ಯಕ್ಷ, ಅಡಿಕೆ ಸೊಸೈಟಿಯ ನಿರ್ದೇಶಕ, ರೈತ ಮೋರ್ಚಾದಲ್ಲಿ ಜಿಲ್ಲಾ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಮೂಡ್ಕಳಿ ಗಣಪತಿ ವೆಂಕಟರಮಣ ಹೆಗಡೆ (88) ಇವರು ಕೊನೆಯುಸಿರೆಳೆದಿದ್ದಾರೆ.
ಶಿಸ್ತಿನ ಜೀವನಕ್ಕೆ ಹೆಸರಾಗಿ, ಸಾಮಾಜಿಕ ಜವಾಬ್ದಾರಿಯ ಹರಿಕಾರರಾಗಿ, ಸಮಾಜ ಸಂಘಟನೆಯಲ್ಲಿ, ದುರ್ಬಲರ ಏಳಿಗೆಯಲ್ಲಿ, ಅಸಹಾಯಕರಿಗೆ ಹೆಗಲಿಗೆ ಹೆಗಲು ಕೊಟ್ಟು ಬದುಕಿನದ್ದಕ್ಕೂ ಸಮಾಜ ಸೇವೆಗೆ ತಮ್ಮನ್ನ ತಾವು ತೊಡಗಿಸಿಕೊಂಡವರಾದ ಇವರು ಹಾಸ್ಯಗಾರರೆಂದೇ ಕುಮಟಾ ತಾಲೂಕಿನ ತುಂಬೆಲ್ಲ ಚಿರಪರಿಚಿತರಾದವರು. ಕೃಷಿಕ ಕುಟುಂಬದಲ್ಲಿ ಜನಿಸಿ ಸ್ವತಃ ಕೃಷಿಕರಾಗಿ ಉತ್ತಮ ಕೃಷಿಕ ಪ್ರಶಸ್ತಿಗೆ ಭಾಜನರಾಗಿದ್ದರು. ಇವರು ಇಬ್ಬರು ಪುತ್ರರು ಹಾಗೂ ಕುಟುಂಬದವರನ್ನು ಅಗಲಿದ್ದಾರೆ.
ಎಲ್ಲರನ್ನು ಪ್ರೀತಿಸುವ, ಗೌರವಿಸುವ ಸರಳ ಸಜ್ಜನರಾಗಿದ್ದರು. ಅವರ ನಿಧನ ನಮ್ಮೂರಿಗೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಅಭಿವೃದ್ಧಿ ಹಾಗೂ ಸುತ್ತಲಿನ ಪರಿಸರವನ್ನು ಸಂಪನ್ನಗೊಳಿಸಿದ ಪುಣ್ಯಾತ್ಮರಾಗಿದ್ದರು.
ತಮ್ಮ ಮನೆಗೆ ಬರುವ ಕೆಲಸದ ಅಳುಗಳಿಗೂ ಆಸರೆಯಾಗಿ ಅವರ ಪ್ರೀತಿಗೆ ಪಾತ್ರರಾಗಿ ಹಾಸಿಗಾರ ಒಡೆಯರೆಂದೇ ಒಕ್ಕಲು ಮಕ್ಕಳ ಧ್ವನಿಯಾಗಿದ್ದರು. ತಮ್ಮ ಹಾಸ್ಯ ಭರಿತ ಮಾತಿನೊಂದಿಗೆ ಎಂಥವರ ಮನಸ್ಸನ್ನು ಗೆಲ್ಲುವ ಆಕರ್ಷಕ ವ್ಯಕ್ತಿತ್ವ ಗಣಪತಿ ಹೆಗಡೆಯವರದಾಗಿತ್ತು. ಕೃಷಿಕ ಕುಟುಂಬದಲ್ಲಿ ಜನಿಸಿ ಸ್ವತಃ ಕೃಷಿಕರಾಗಿ ಆದರ್ಶದ ಬದುಕಿನೊಂದಿಗೆ ಸಮಾಜಕ್ಕೆ ಮಾದರಿಯಾಗಿದ್ದರು.