ಕುಮಟಾ : ನನ್ನ ಶಾಸಕತ್ವದ ಅವಧಿಯಲ್ಲಿ ಮಂಜೂರಾದಂತಹ ಮಿನಿ ವಿಧಾನಸೌಧ, ಡಿಗ್ರಿ ಕಾಲೇಜು, ಐಟಿಐ ಕಾಲೇಜು ಹಾಗೂ ಗೋಕರ್ಣ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಇವುಗಳು ಲೋಕಾರ್ಪಣೆಗೊಳ್ಳಲಿದ್ದು, ಸಂತೋಷದ ವಿಷಯವಾಗಿದೆ ಎಂದು ಮಾಜಿ ಶಾಸಕರಾದ ಶಾರದಾ ಶೆಟ್ಟಿ ಹೇಳಿದ್ದಾರೆ. ಬಿ.ಜೆ.ಪಿ ಪ್ರಮುಖರ ವಿರುದ್ಧ ಮಾತಿನ ಛಾಟಿ ಬೀಸಿದ ಅವರು, ಈಗಿನ ಸಂದರ್ಭದಲ್ಲಿ ಜನರ ಸಮಸ್ಯೆ ಆಲಿಸಿ, ಸರ್ಕಾರ ಮಟ್ಟದಲ್ಲಿ ವಿವಿಧ ಹಂತಗಳಲ್ಲಿ ಚರ್ಚಿಸಿ, ಅಧಿಕಾರಿಗಳು, ಮಂತ್ರಿಗಳು, ಮುಖ್ಯಮಂತ್ರಿಳೊಂದಿಗೆ ಚರ್ಚಿಸಿ, ವಿಧಾನನಸೌಧದ ಮೆಟ್ಟಿಲುಗಳನ್ನು ಹಲವಾರು ಬಾರಿ ಹತ್ತಿ ಇಳಿದು ಕಾಮಗಾರಿ ಮಂಜೂರು ಮಾಡುವುದಕ್ಕಿಂತ, ಕೇವಲ ಮಂಜೂರಾದ ಕಾಮಗಾರಿಯನ್ನು ಮುಂದುವರೆಸಿಕೊಂಡು ಹೋಗುವುದನ್ನೇ ದೊಡ್ಡದೆಂಬಂತೆ ಬಿಂಬಿಸಿಕೊಳ್ಳುವ ಜನರಿದ್ದಾರೆ. ಈ ಎಲ್ಲಾ ಕಟ್ಟಡಗಳನ್ನು ಉದ್ಘಾಟನೆಮಾಡಲಿರುವ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರುಸಚಿವರು, ಉದ್ಘಾಟನಾ ಸಮಯದಲ್ಲಿ ಕಾಮಗಾರಿಯನ್ನು ಮಂಜೂರು ಮಾಡಿಸಿದವರ ಹೆಸರನ್ನು ಸ್ಮರಿಸುವುದು ಶಿಷ್ಠಾಚಾರ. ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ಅದನ್ನು ಪಾಲಿಸುತ್ತಾರೆನ್ನುವುದು ನನ್ನ ನಂಬಿಕೆ ಎಂದಿದ್ದಾರೆ.
ತಾಲೂಕಿನ ಎಲ್ಲ ಆಡಳಿತವನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ ಅಂದಿನ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರಲ್ಲಿ ಬೇಡಿಕೆಯಿಟ್ಟು , ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಆರ್.ವಿ.ದೇಶಪಾಂಡೆಯವರ ಸಹಕಾರದಿಂದ 3 ಎಕರೆ ಜಾಗ ಹಾಗೂ 10 ಕೋಟಿ ರೂಪಾಯಿ ಅನುದಾನವನ್ನು ಮಿನಿ ವಿಧಾನಸೌಧಕ್ಕಾಗಿ ಮಂಜೂರು ಮಾಡಿದ್ದೆ. ಅದೇ ರೀತಿ ವಿದ್ಯಾರ್ಥಿಗಳ ಶಿಕ್ಷಣ ದೃಷ್ಟಿಯಿಂದ ಕುಮಟಾದಲ್ಲಿ ಡಿಗ್ರಿ ಕಾಲೇಜು ನಿರ್ಮಾಣಕ್ಕಾಗಿ ಜಾಗ ಮತ್ತು 2 ಕೋಟಿ ಅನುದಾನ, ಕುಮಟಾದಲ್ಲಿ ಐಟಿಐ ಕಾಲೇಜು ಮಂಜೂರಿ ಹಾಗೂ ಗೋಕರ್ಣ ನಾಡುಮಾಸ್ಕೇರಿಯಲ್ಲಿ ಕಿತ್ತೂರು ಚನ್ನಮ್ಮ ವಸತಿ ಶಾಲೆಗಾಗಿ 4 ಎಕರೆ ಜಾಗ ಹಾಗೂ ಅನುದಾನ ಮಂಜೂರು ಮಾಡಿಸಿರುತ್ತೇನೆ ಎಂದರು.
ನಂತರ ನಡೆದ ರಾಜಕೀಯ ವಿದ್ಯಮಾನಗಳಿಂದ ನಾನು ಚುನಾವಣೆಯಲ್ಲಿ ಸೋತು, ನಂತರ ಬಂದ ಶಾಸಕರು ಕಾಮಗಾರಿಗಳನ್ನು ಮುಂದುವರೆಸಿಕೊಂಡು ಬಂದಿರುತ್ತಾರೆ. ನಾನು ಚುನಾವಣೆಯಲ್ಲಿ ಸೋತರೂ, ನಮ್ಮ ಸರ್ಕಾರ ಹಾಗೂ ನನ್ನ ಅವಧಿಯಲ್ಲಿ ಆದಂತಹ ಈ ಯೋಜನೆಗಳು ಈಗ ಲೋಕಾರ್ಪಣೆಗೊಂಡು ಜನರ ಉಪಯೋಗಕ್ಕೆ ಬರುತ್ತಿರುವುದು ಸಂತೋಷದ ವಿಷಯ ಎಂದು ಅವರು ಅಭಿಪ್ರಾಯಪಟ್ಟರು.