ಕುಮಟಾ :  ಡಬಲ್ ಇಂಜಿನ್ ಸರ್ಕಾದಿಂದ ಎಲ್ಲಾ ಫಲಾನುಭವಿಗಳಿಗೆ ಅನುದಾನ ಸಿಕ್ಕಿದೆ. ಒಂದು ಜಿಲ್ಲೆಯಲ್ಲಿ ಇಷ್ಟು ಜನ ಫಲಾನುಭವಿಗಳು ಸಿಗುವುದಾದರೆ ಸರ್ಕಾರದ ಕಾರ್ಯದ ಬಗ್ಗೆ ಚಿಂತನೆ ಮಾಡಿ , ನಾವು ಹೊಸ ಯೋಜನೆ ನೀಡಲು ಬಂದಿಲ್ಲ ಮಾಡಿದ್ದನ್ನು ಹೇಳಿಕೊಳ್ಳಲು ಬಂದಿದ್ದೇವೆ. ಯಾವುದೇ ಗೊಡವೆಗಳಿಗೆ ಹೋಗದೆ ಸಮಾಜದ ಕೊಟ್ಟಕೊನೆಯ ವ್ಯಕ್ತಿಗಳಿಗೆ ಸೌಲತ್ತು ಸಿಗುವಂತೆ ಮಾಡಿದ್ದೇವೆ ಎಂದು  ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ ಹೇಳಿದರು. ಅವರು ಕುಮಟಾದಲ್ಲಿ ನಡೆದ ಉತ್ತರಕನ್ನಡ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ ಇವರ ಸಂಯುಕ್ತ ಆಶ್ರಯದಲ್ಲಿ ಹಲ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭ ಮತ್ತು ಫಲಾನುಭವಿಗಳ ಸೌಲಭ್ಯ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಲ್ಲ ವಿಧದ ಸೌಕರ್ಯಗಳನ್ನು ಒದಗಿಸಲು ಹಾಗೂ ಜನತೆಯ ಕಷ್ಟವನ್ನು ನೀಗಿಲು ನಮ್ಮ ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡಿದ ಅದನ್ನು ಅಲ್ಲಗಳೆಯಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ, ಇಷ್ಟೆಲ್ಲಾ ಕೆಲಸ ಮಾಡಿಸಿಕೊಟ್ಟ ಶಾಸಕರ ಕೈ ಬಲಪಡಿಸಬೇಕಾದ ಅಗತ್ಯತೆ ಇದೆ. ಇದಕ್ಕೆ ಜನರ ಬೆಂಬಲ ಅಗತ್ಯವಾಗಿದೆ ಎಂದು ಮನವಿ ಮಾಡಿದರು.

ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಉತ್ತರಕನ್ನಡವನ್ನು ಕಾಡುತ್ತಿದ್ದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಸರ್ಕಾರ ಪ್ರಯತ್ನ ಮಾಡಿದೆ. ಶುದ್ಧ ಕುಡಿಯುವ ನೀರಿನ ಸಮಸ್ಯೆ ಇದ್ದ ಸ್ಥಳ ಗುರ್ತಿಸಿ 80,000 ಮನೆ‌ಮನೆಗೆ ಗಂಗೆಯನ್ನು ಕೊಡುವ ಯೋಜನೆ ನಮ್ಮ ಸರಕಾರದಿಂದ ಆಗಿದೆ. ಮನೆ ಮನೆಗೆ ಗಂಗೆ ಕಾರ್ಯಕ್ರಮ ನಡೆಸಿದ್ದು ಸಮಾಧಾನ ತಂದಿದೆ. ಸರ್ಕಾರ ತಾಯಿಯಿದ್ದಂತೆ, ಅರ್ಜಿ ಹಾಕದೆ ಫಲಾನುಭವಿಗಳ ಖಾತೆಗೆ ಯಾವುದೇ ಅನುದಾನ ಬರುವುದಿಲ್ಲ ಆದರೆ ಉತ್ತರಕನ್ನಡದ 1 ಲಕ್ಷ 68 ಸಾವಿರ ಮನೆಗೆ ಕಿಸಾನ್ ಸನ್ಮಾನ್ ಯೋಜನೆಯ ಅಡಿಯಲ್ಲಿ 168 ಕೋಟಿ 80 ಲಕ್ಷ ರೂಪಾಯಿ ಅನುದಾನ ಬಂದಿದೆ ಎಂದರು.

13 ಸಾವಿರ ಮನೆಗೆ ಬೆಳಕು ಯೋಜನೆಯ ಅಡಿಯಲ್ಲಿ ಬೆಳಕು ನೀಡಲಾಗಿದೆ. ಇನ್ನೂ 1000 ಮನೆಗಳಿಗೆ ಕೊಡುವುದು ಇದ್ದು, ವಿದ್ಯುತ್ ಇಲ್ಲದ ಮನೆ ಇರದಂತೆ ಎಲ್ಲಾ ಮನೆಗೆ ವಿದ್ಯುತ್ ಕೊಡುವ ಕೆಲಸ ಮಾಡಬೇಕೆಂದು ಯೋಚನೆ ಇದೆ ಎಂದರು. ಮೀನುಗಾಗರಿಗೆ, ಟೇಲರ್ ಗಳಿಗೆ, ನೇಕಾರರಿಗೆ ಹೀಗೆ ಎಲ್ಲರಿಗೂ ವಿದ್ಯಾನಿಧಿ ಯೋಜನೆ ಸಿಕ್ಕಿದೆ. 2022-23 ರಲ್ಲಿ 3,000 ಶೌಚಾಲಯ ನೀಡಿದ್ದು ಇದರ ಅನುಷ್ಟಾನ ಆದರೆ ಉತ್ತರಕನ್ನಡ ಬಯಲು ಶೌಚಾಲಯ ಮುಕ್ತ ಜಿಲ್ಲೆಯಾಗಿ ಹೊರಹೊಮ್ಮಲಿದೆ‌. 2,500 ಬಡವರಿಗೆ ಮನೆ ನೀಡಲಾಗಿದೆ. ಸಮಾಜದ ಕಟ್ಟಕಡೆಯ ಜನರಿಗೆ ಪ.ಜಾತಿ, ಪ.ಪಂಗಡದ ಜನರಿಗೆ ದ್ವಿಚಕ್ರ ವಾಹನವನ್ನು 28,000 ಜನರಿಗೆ ನೀಡಿದ್ದೇವೆ. 12,000 ಹೊಲಿಗೆ ಯಂತ್ರ ವಿತರಿಸಿದ್ದೇವೆ ಎಂದರು. ಎಲ್ಲೆಡೆಯಲ್ಲಿ ನಿಗಮ ಮಂಡಳಿಗಳ ಕೂಗು ಕೇಳಿಬಂದಿತ್ತು, ಆ ಸಂದರ್ಭದಲ್ಲಿ
ಉತ್ತರಕನ್ನಡದ ನಾಮಧಾರಿಗಳು ನಿಗಮಮಂಡಳಿಗಾಗಿ ಅರ್ಜಿ ಸಲ್ಲಿಸಿದ್ದರು, ಅದಕ್ಕಾಗಿ ನಾರಾಯಣ ಗುರು ನಿಗಮ‌ ಸ್ಥಾಪನೆ ಮಾಡಿದ್ದೇವೆ ಎಂದರು. ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಜನರ ಮನ ತಲುಪುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ಅವರು ಬಣ್ಣಿಸಿದ್ದರು. ಕುಮಟಾದಲ್ಲಿ ನಡೆಯುತ್ತಿರುವ ಕಾರ್ಯಕ್ರಮ ಎಲ್ಲ ಕಾರ್ಯಕ್ರಮಗಳಿಗಿಂತ ಭಿನ್ನವಾಗಿದ್ದು ಅತ್ಯಂತ ಯಶಸ್ವಿಯಾದ ಸಂಯೋಜನೆ ಇಲ್ಲಿ ನಡೆದಿರುವುದು ಸಂತೋಷದ ವಿಚಾರ ಎಂದು ಕಾರ್ಯಕ್ರಮ ಸಂಘಟಕರ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

RELATED ARTICLES  ದೀವಗಿಯಲ್ಲಿ ಬಿಜೆಪಿ ಪಕ್ಷ ಸೇರಿದ ನೂರಕ್ಕೂ ಅಧಿಕ ಕಾರ್ಯಕರ್ತರು: ಬಲ ಹೆಚ್ಚಿಸಿಕೊಳ್ಳುತ್ತಿದೆ ಬಿಜೆಪಿ.

ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ ಭಯೋತ್ಪಾದನೆಯನ್ನು ಎದುರಿಸುವ ಶಕ್ತಿ ಕೊಟ್ಟ, ಶಿಕ್ಷಣ, ಕೈಗಾರಿಕೆ ಹಾಗೂ ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಿ ಮೋದಿಯವರ ನೇತ್ರತ್ವದಲ್ಲಿ ಜಗತ್ತಿಗೇ ದಾರಿ ತೋರಿಸುವವಾರುತ್ತಿದ್ದೇವೆ. ನೊಬೆಲ್ ಶಾಂತಿ ಪ್ರಶಸ್ತಿ ನೀಡಲು ಭಾರತವನ್ನು ಕೇಳುವಂತಾಗುತ್ತಿದೆ. ಯಾವ ಕ್ಷೇತ್ರವನ್ನು ನೋಡಿದರೂ ಭಾರತದ ಒಂದು ಛಾಪು ಅಲ್ಲಿ ಕಾಣುತ್ತಿದೆ. ನರೇಂದ್ರ ಮೋದಿ ನಮ್ಮ ಪ್ರಧಾನಿಯಾದ ನಂತರ ನಾವು ಯಾರೆಂಬುದು ನಮಗೆ ಅರಿವಾಗುತ್ತಿದೆ. ಕುರಿಮಂದೆಯಂತಿದ್ದ ನಮ್ಮನ್ನು ಸಿಂಹದ ಮರಿಗಳಾಗಿ ಶಕ್ತಿ ಪ್ರಕಟವಾಗುವಂತೆ‌ ಮಾಡಿದ ನರೇಂದ್ರ ಮೋದಿ ನಮಗೆ ನಮ್ಮತನದ ಅರಿವನ್ನು ಮಾಡಿಸಿಕೊಟ್ಟವರು ಎಂದರು.

ರೇಲ್ವೆ ಸ್ಟೇಷನ್ ನಲ್ಲಿ ಚಹಾ ಮಾರುತ್ತಿದ್ದವರು ಪ್ರಧಾನಿಯಾಗುವಷ್ಟು, ಪ.ಪಂಗಡದ ಮಹಿಳೆಯೊಬ್ಬಳು ರಾಷ್ಟ್ರಪತಿಯಾಗುವಷ್ಟು ಪ್ರಜಾಪ್ರಭುತ್ವ ನಮ್ಮದಿದೆ. ಅದನ್ನು ಉಳಿಸಿಕೊಂಡು ಹೋಗಬೇಕಾಗಿದೆ. ನಮ್ಮ ಸರ್ಕಾರದಲ್ಲಿ ಹಿಂದೆಂದೂ ಕಾಣದಷ್ಟು ಅಭಿವೃದ್ಧಿ ಆಗಿದೆ, ಸರ್ಕಾರದ ಜೊತೆಗೆ ನಾವೂ ಒಂದಾಗಿ ಸರ್ಕಾರದ ಅನುದಾನ ಅರ್ಹ ಎಲ್ಲರಿಗೂ ತಲುಪುವಂತೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದ ಅವರು. ಜಿಲ್ಲೆಯ ಜನರ ಕಷ್ಟಕ್ಕೆ ಸ್ಪಂದಿಸಿ ಎಲ್ಲಾ ಸೌಕರ್ಯ ಮಾಡಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಜನತೆ ನಮಗೆ ಬೆಂಬಲವಾಗಿ ನಿಲ್ಲಬೇಕು ಎಂದರು.

ಕಾರವಾರ ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯಕ್ ಮಾತನಾಡಿ ಸತ್ಯದ ಕಾಲ ನಡೆಯುತ್ತಿದೆ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದೆ, ಬಡವರಿಗೆ ಸೂರು ಸಿಕ್ಕಿದೆ, ಕುಡಿಯುವ ಶುದ್ಧ ನೀರು ಪೂರೈಕೆಯಾಗುತ್ತಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ಮಾಣಕ್ಕೆ ಸರಕಾರ ಮುಂದಾಗಿರುವುದು ಹೆಮ್ಮೆಯ ವಿಚಾರ ಎಂದರು.

ಭಟ್ಕಳ ಹೊನ್ನಾವರ ಶಾಸಕ ಸುನೀಲ್ ನಾಯ್ಕ ಮಾತನಾಡಿ, ನೈಜ ಅಗತ್ಯತೆ ಇರುವವರು ಫಲಾನುಭವಿಗಳಾಗಿದ್ದಾರೆ ಎಂಬುದು ಸಮಾಧಾನ ತಂದಿದೆ. ಫಲಾನುಭವಿಗಳನ್ನು ಒಂದೆಡೆ ಸೇರಿಸಿ ಕಾರ್ಯಕ್ರಮ‌ಮಾಡುತ್ತಿರುವುದು ವಿಶೇಷ. ಜನರ ನಾಡಿ ಮಿಡಿತದ ಜೊತೆಗೆ ಸರ್ಕಾರ ಕೆಲಸಮಾಡುತ್ತಿದೆ ಎಂದರು. ಒಂದು ಪಕ್ಷದಿಂದ ಸುಳ್ಳಿನ ಆಶ್ವಾಸನೆ ಕೊಡಲಾಗುತ್ತಿದೆ. ಮನೆನೆಗೆ ಹೋಗಿ ಆಧಾರ ಕಾರ್ಡ ಪಡೆದು ಗ್ಯಾರಂಟಿ ಕಾರ್ಡ ಕೊಡುವುದಾಗಿ ಜನರಿಗೆ ಹೇಳುತ್ತಿದ್ದಾರೆ. ಆದರೆ ಅದನ್ನು ನಂಬಬೇಡಿ ಮೋಸದ ಜಾಲ ಇದು ಎಂದರು.

RELATED ARTICLES  Latest Update : ಗ್ರಾಮ ಪಂಚಾಯತ ಚುನಾವಣೆಯಲ್ಲಿ ಗೆದ್ದವರಾರು..?

ಕುಮಟಾ ಹೊನ್ನಾವರ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಮಾತನಾಡಿ, ಕುಮಟಾದ ಮಣಕಿ ಮೈದಾನದಲ್ಲಿ ಒಂದು ಐತಿಹಾಸಿಕ ಕಾರ್ಯಕ್ರಮ ನಡೆಯುತ್ತಿದೆ. ಯಾರು ಬ್ಯಾಕ್ ನಲ್ಲಿ ಖಾತೆ ಹೊಂದಿಲ್ಲವೋ ಅಂತವರಿಂದ ಜನ್ ಧನ್ ಖಾತೆ ಮಾಡಿಸಿ ಎಲ್ಲಾ ಸರ್ಕಾರದ ಸೌಲಭ್ಯವೂ ಅದೇ ಖಾತೆಗೆ ಬರುವಂತೆ ಮಾಡಿದರು. ನರೇಂದ್ರ ಮೋದಿಯವರು ಬಂದ ನಂತರ ಕಿಸಾನ್ ಸಮ್ಮಾನ ಯೋಜನೆ ತಂದರು. ಚೆಕ್ ಮೂಲಕ ಹಣ ನೀಡಲಾಗುತ್ತಿದ್ದ ಪದ್ದತಿ ನೇರವಾಗಿ ಖಾತೆಗೆ ಬರುವಂತೆ ಆಯಿತು ಇದು ಜನತೆಗೆ ಅನುಕೂಲವಾಗಿದೆ ಎಂದರು. ಕೊರೋನಾ ಸಂದರ್ಭದಲ್ಲಿ ಕೆ.ಎಸ್.ಆರ್.ಟಿ.ಸಿ ಹಾಗೂ ಶಿಕ್ಷಕರಿಗೆ ನೂರರಷ್ಟು ಸಂಬಳ ನೀಡಿದ್ದು ನಮ್ಮ‌ ಸರಕಾರದ ಹೆಮ್ಮೆ, ಇಡೀ ಜಗತ್ತಿಗೆ ಲಸಿಕೆ ನೀಡುವಂತೆ ಮಾಡಿದ ಪ್ರಧಾನಿ ನಮ್ಮವರು, ಮೋದಿಯವರು ಉಚಿತವಾಗಿ ಲಸಿಕೆ ನೀಡುವ ಮೂಲಕ ನಾವೆಲ್ಲರೂ ಫಲಾನುಭವಿಗಳಾಗುವಂತೆ ಮಾಡಿದರು ಎಂದರು.

ನನ್ನ ಕ್ಷೇತ್ರದಲ್ಲಿ ನಾಲ್ಕು ವರ್ಷದಲ್ಲಿ ೨ ಸಾವಿರ ಕೋಟಿ ಅನುದಾನ ಕೊಟ್ಟಿದ್ದಾರೆ. 480 ಕೋಟಿ ರೂಪಾಯಿ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಾಗಿದೆ. 6 ತಿಂಗಳಿನಲ್ಲಿ ಐ.ಟಿ.ಐ ಕಾಲೇಜು ಸ್ಥಾಪನೆಗೆ ಅಗತ್ಯ ವ್ಯವಸ್ಥೆ ಮಾಡಿಕೊಟ್ಟಿದ್ದೇವೆ. 169 ಕೋಟಿ ಹಣ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಟೆಂಡರ್ ಆಗಿದೆ ಇಂದಿಲ್ಲಿ ಇದರ ಜೊತೆಗೆ ಇತರ ಎಲ್ಲಾ ಕಾರ್ಯಕ್ರಮದ ಶಂಕುಸ್ಥಾಪನೆ ಮಾಡಿದ್ದೇವೆ. ನಾನು ಇಟ್ಟ ಬೇಡಿಕೆಗಳನ್ನು ಅನುಮೋದಿಸಿದ ಮುಖ್ಯಮಂತ್ರಿ ಬೊಮ್ಮಾಯಿಯವರಿಗೆ ಧನ್ಯವಾದ ಎಂದರು.

ವೇದಿಕೆಯಲ್ಲಿ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಶಾಂತರಾಮ ಸಿದ್ದಿ, ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿಯ ಅಧ್ಯಕ್ಷ ಗೋವಿಂದ ನಾಯ್ಕ, ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಇದರ ಉಪಾಧ್ಯಕ್ಷರಾದ ಪ್ರಮೋದ ಹೆಗಡೆ,  ಕುಮಟಾ ಪುರಸಭೆಯ ಅಧ್ಯಕ್ಷರಾದ ಅನುರಾಧಾ ಬಾಳೇರಿ, ಉಪಾಧ್ಯಕ್ಷೆ ಸುಮತಿ ಭಟ್ಟ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಎನ್ ವಿಷ್ಣುವರ್ಧನ್, ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕುಮಾರ ಕಾಂದೂ, ಸಹಾಯಕ ಆಯುಕ್ರಾದ ರಾಘವೇಂದ್ರ ಜಗಲಾಸರ ಇತರರು ವೇದಿಕೆಯಲ್ಲಿದ್ದರು.

ಫಲಾನುಭವಿಗಳಿಗೆ ವೇದಿಕೆಯಲ್ಲಿ ಸಾಂಕೇತಿಕವಾಗಿ ಪತ್ರಗಳು, ಹೊಲಿಗೆ ಯಂತ್ರ, ದ್ವಿಚಕ್ರ ವಾಹನ, ಬಡ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಹಾಗೂ ವಿವಿಧ ಇಲಾಖಾ ಫಲಾನುಭವಿಗಳಿಗೆ ಅಗತ್ಯ ಪರಿಕರಗಳನ್ನು ವಿತರಿಸಲಾಯಿತು. ವಿವಿಧ ಇಲಾಖೆಗಳಿಂದ ಹಾಕಲಾಗಿದ್ದ ಮಳಿಗೆಗಳು ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದವು.