ಕುಮಟಾ: ತಾಲೂಕಿನ ಮಣಕಿ ಮೈದಾನದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಮಟ್ಟದ “ಫಲಾನುಭವಿಗಳ ಸಮಾವೇಶ” ದಲ್ಲಿ ಶಿಕ್ಷಣ ಇಲಾಖೆಯ ಮಳಿಗೆ ಸಾರ್ವಜನಿಕರ ಗಮನ ಸೆಳೆಯಿತು. ಶಿಕ್ಷಣ ಇಲಾಖೆಯ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಲನಗದ್ದೆ ಹಾಗೂ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಸಹಯೋಗದಲ್ಲಿ ಅತ್ಯಂತ ವ್ಯವಸ್ಥಿತವಾಗಿ ರೂಪಿಸಿದ್ದ ಮಳಿಗೆಗೆ ವಿಧಾನಸಭಾ ಸಭಾಪತಿಗಳಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ, ಉತ್ತರಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಕಾರ್ಮಿಕ ಸಚಿವರಾದ ಶ್ರೀ ಶಿವರಾಮ ಹೆಬ್ಬಾರ, ಕನ್ನಡ ಸಂಸ್ಕೃತಿ ಸಚಿವರಾದ ಶ್ರೀ ಸುನೀಲ್ ಕುಮಾರ, ವಿಧಾನ ಪರಿಷತ ಸದಸ್ಯರಾದ ಶ್ರೀ ಶಾಂತಾರಾಮ ಸಿದ್ಧಿ, ಶಾಸಕರಾದ ಶ್ರೀ ದಿನಕರ ಶೆಟ್ಟಿ, ರೂಪಾಲಿ ನಾಯ್ಕ, ಸುನೀಲ ನಾಯ್ಕ ಮುಂತಾದವರು ಭೇಟಿ ನೀಡಿದರು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಲನಗದ್ದೆಯ ಶಿಕ್ಷಕರಾದ ರವೀಂದ್ರ ಭಟ್ಟ ಸೂರಿ ಹಾಗೂ ಮಂಗಲಾ ನಾಯ್ಕ ಕಲಿಕಾ ಹಬ್ಬದ ಉದ್ದೇಶ ,ವ್ಯಾಪ್ತಿ, ಕಾರ್ನರ್ ಗಳಲ್ಲಿ ನಡೆಯುವ ಚಟುವಟಿಕೆ, ವಿದ್ಯಾರ್ಥಿಗಳಿಗೆ ಇದರಿಂದಾಗುವ ಉಪಯೋಗಗಳ ಕುರಿತು ವಿವರಿಸಿದರು. ಕೊಂಕಣ ಎಜ್ಯುಕೇಶನ್ ನ ವಿದ್ಯಾರ್ಥಿಗಳು ತಾವೇ ರಚಿಸಿದ ಮಾದರಿಗಳನ್ನು ಪ್ರದರ್ಶಿಸಿ ಅದರ ಕಾರ್ಯವನ್ನು ಪರಿಚಯಿಸಿದರು. ಕಲಿಕಾ ಚೇತರಿಕೆ ವಿಭಾಗವನ್ನು ವಿನಾಯಕ ನಾಯ್ಕ ನಿರ್ವಹಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ರಾಜೇಂದ್ರ ಭಟ್ಟ, ಕ್ಷೇತ್ರ ಸಮನ್ವಯಾಧಿಕಾರಿ ಶ್ರೀಮತಿ ರೇಖಾ ನಾಯ್ಕ, ಮಾರ್ಗದರ್ಶನ ನೀಡಿದರು. ತಾಲೂಕಿನ ಅನುಷ್ಠಾನಾಧಿಕಾರಿಗಳು ಸಹಕರಿಸಿದರು.