ಕುಮಟಾ: ಮನುಷ್ಯ ಸಂಬಂಧ ಮರೆತು ನಾವು ಸಾಹಿತ್ಯ, ಕಲೆ, ರಂಗಭೂಮಿಯ ಬಗ್ಗೆ ಮಾತನಾಡುವುದು ಅವಾಸ್ತವಿಕವಾಗುತ್ತದೆ. ‘ಹಣತೆ’ ಇಂಥ ಸಂವೇದನೆಯನ್ನು ಜನರಲ್ಲಿ ಮೂಡಿಸುವಲ್ಲಿ ಕಾಳಜಿ ವಹಿಸುತ್ತ ಜಿಲ್ಲೆಯಾದ್ಯಂತ ಬೆಳಕು ಚೆಲ್ಲುವ ದೀಪಸ್ತಂಭವಾಗಿ ಎತ್ತರದಲ್ಲಿ ನಿಲ್ಲಲಿ ಎಂದು ಹಿರಿಯ ರಂಗಕರ್ಮಿ ಕಾಸರಗೋಡು ಚಿನ್ನಾ ನುಡಿದರು. ಪಟ್ಟಣದ ಸಮುದಾಯ ಭವನದಲ್ಲಿ ಹಣತೆ ಸಾಹಿತ್ಯಕ, ಸಾಂಸ್ಕೃತಿಕ ಜಗಲಿ ಕುಮಟಾ ಘಟಕವನ್ನು ಉದ್ಘಾಟಿಸಿ ಮಾತನಾಡುತ್ತ, ನಾವೆಲ್ಲ ಇಂದು ದ್ವೀಪವಾಗುತ್ತಿದ್ದೇವೆಯೇ ಹೊರತು ಬೆಳಕು ಹಂಚುವ ದೀಪವಾಗುತ್ತಿಲ್ಲ. ಇದು ಆರೋಗ್ಯಕರ ಬೆಳವಣಿಗೆ ಅಲ್ಲ. ಉತ್ತರ ಕನ್ನಡದಲ್ಲಿ ಸಾಂಘಿಕ ಹೋರಾಟದ ಛಲ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿರುವುದು ವಿಷಾದದ ಸಂಗತಿ. ಈ ಬಗ್ಗೆ ಜಿಲ್ಲೆಯಲ್ಲಿ ಹಣತೆಯಂಥ ಸಂಘಟನೆಗಳು ಚಿಂತನೆ ನಡೆಸಬೇಕು ಎಂದು ಚಿನ್ನಾ ಅಭಿಪ್ರಾಯಪಟ್ಟರು.
ಮುಖ್ಯಅತಿಥಿಯಾಗಿ ಪಾಲ್ಗೊಂಡ ಹಿರಿಯ ರಂಗಕರ್ಮಿ ಪೂರ್ಣಿಮಾ ಗಾಂವಕರ ನಾಯಕ ಅವರು ಮಾತನಾಡಿ ಉತ್ತರ ಕನ್ನಡದ ನೆಲ ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ ಸತ್ವಯುತವಾಗಿದೆ. ಇಲ್ಲಿ ಶ್ರೀಮಂತ ಫಸಲು ತಗೆಯುವತ್ತ ಹೊಸ ತಲೆಮಾರು ಚಿಂತನ ಮಂಥನ ನಡೆಸಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಣತೆ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಜೀವಂತಿಕೆ ಕಳೆದುಕೊಂಡ ಬದುಕಿಗೆ ಹಣತೆ ಹಚ್ಚುವ ನೆಪದಲ್ಲಿ ಸಡಗರ ಅನುಭವಿಸಲು ಈ ಸಂಘಟನೆಯನ್ನು ಗೆಳೆಯರೆಲ್ಲ ಸೇರಿ ಕಟ್ಟಿಕೊಂಡಿದ್ದೇವೆ. ಹಣತೆ ಹಚ್ಚುವುದರ ಹಿಂದೆ ಯಾವ ಜಾಣ ಉಪಾಯವೂ ಇಲ್ಲ. ಇದು ಸಹಜವಾಗಿ ವೈಚಾರಿಕ ಬೆಳಕು ಚೆಲ್ಲುವ ಹಣತೆ ಅಷ್ಟೇ ಎಂದು ಹೇಳಿದರು.
ಹಣತೆ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಅವರು ತಾಲೂಕಾಧ್ಯಕ್ಷ ಪ್ರಕಾಶ ನಾಯ್ಕ ಅವರಿಗೆ ಬೆಳಗುವ ಹಣತೆ ನೀಡಿ ಕುಮಟಾ ತಾಲೂಕು ಘಟಕದ ಜವಾಬ್ದಾರಿ ನೀಡಿದರು.
ಹಣತೆ ಜಿಲ್ಲಾ ಪ್ರಧಾನ ಸಂಚಾಲಕ ಎನ್. ಜಯಚಂದ್ರನ್ ಪ್ರಾಸ್ತಾವಿಕ ಮಾತನಾಡಿದರು.
ಹಣತೆ ತಾಲೂಕಾಧ್ಯಕ್ಷ ಪ್ರಕಾಶ ನಾಯ್ಕ ಅಳ್ವೆದಂಡೆ ಸ್ವಾಗತಿಸಿದರು. ಬಳಗದ ಸದಸ್ಯರಾದ ಉದಯ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಪ್ರಶಾಂತ ಗಾವಡಿ ಆಶಯ ಗೀತೆ ಹಾಡಿದರು. ಸೂರ್ಯಕಾಂತ್ ಭಟ್ಟ ಕೂಜಳ್ಳಿ ಅವರು ವಂದಿಸಿದರು.