ಬೆಂಗಳೂರು: ಈ ಬಾರಿ SSLC ವಾರ್ಷಿಕ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ 26 ಗ್ರೇಸ್ ಮಾರ್ಕ್ಸ್ (ಕೃಪಾಂಕ) ಪಡೆಯುವ ಅವಕಾಶವಿದೆ. ಈ ಶೈಕ್ಷಣಿಕ ವರ್ಷದಲ್ಲಿ ಕೊರೊನಾದ ಹೊಡೆತ ಅಷ್ಟೊಂದು ತೀವ್ರವಾಗಿ ಬಾಧಿಸದಿದ್ದರೂ ಕೊರೊನಾ ಪ್ರಭಾವದ ಶೈಕ್ಷಣಿಕ ವರ್ಷ ವೆಂದು ಪರಿಗಣಿಸಿ ಗ್ರೇಸ್ ಮಾರ್ಕ್ಸ್ ನೀಡಲು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ನಿರ್ಧರಿಸಿದೆ.ಕೊರೊನಾದ ಸಮಯದಲ್ಲಿ ಕಲಿಕೆ ಮೇಲಾಗಿರುವ ಪರಿಣಾಮದಿಂದ ಮಕ್ಕಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಳ್ಳದ ಕಾರಣದಿಂದ ಕೃಪಾಂಕ ನೀಡಲಾಗುತ್ತಿದೆ. ಒಟ್ಟಾರೆ ಕನಿಷ್ಠ ಅಂಕಗಳನ್ನು ಗಳಿಸುವ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಶೇ.10 ಕೃಪಾಂಕ ನೀಡಿ ಉತ್ತೀರ್ಣಗೊಳಿಸುವುದು ಮಂಡಳಿಯ ಉದ್ದೇಶ.
ಎಸೆಸೆಲ್ಸಿಯ 6 ವಿಷಯಗಳ ಪೈಕಿ 3 ವಿಷಯಗಳಲ್ಲಿ ಉತ್ತೀರ್ಣರಾಗಿದ್ದರೆ, ಉಳಿದ 3 ವಿಷಯಗಳಿಗೆ ತಲಾ ಶೇ. 10ರಷ್ಟು ಆದರೆ ಒಟ್ಟು 26 ಅಂಕ ಮೀರದಂತೆ ಕೃಪಾಂಕ ದೊರೆಯಲಿದೆ. ಪ್ರಥಮ ಭಾಷೆಯಲ್ಲಿ ಗರಿಷ್ಠ 10 ಅಂಕ ಮತ್ತು ಉಳಿದ ವಿಷಯಗಳಲ್ಲಿ ಗರಿಷ್ಠ 8 ಅಂಕವನ್ನು ಕೃಪಾಂಕದ ರೂಪದಲ್ಲಿ ಪಡೆಯಬಹುದಾಗಿದೆ.