ಕುಮಟಾ : ಮಕ್ಕಳು ವಿದ್ಯಾರ್ಥಿ ಜೀವನದಲ್ಲಿ ಕೇವಲ ಅಂಕಗಳಿಗೆ ಮಾತ್ರ ಮಹತ್ವ ನೀಡದೆ ಜೀವನ ಕೌಶಲ್ಯ ರೂಢಿಸಿಕೊಳ್ಳುವತ್ತ ಚಿತ್ತ ಕೇಂದ್ರೀಕರಿಸಬೇಕು ಎಂದು ರಂಗ ಕಲಾವಿದ ಹಾಗು ಸಿಂಚನ ವಾಹಿನಿಯ ಮುಖ್ಯಸ್ಥ ಕೃಷ್ಣಾನಂದ ಭಟ್ಟ ಉಪ್ಲೆ ಅಭಿಪ್ರಾಯಪಟ್ಟರು. ಅವರು ಮೂರೂರು ಪ್ರಗತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬೇಸಿಗೆ ಶಿಬಿರ “ಕಲಿಕಾ ಸ್ಫೂರ್ತಿ” ಉದ್ಘಾಟಿಸಿ ಮಾತನಾಡಿದರು.
ಶಿಬಿರದಲ್ಲಿ ಇಂತಹ ಕೌಶಲ್ಯಗಳನ್ನು ವೃದ್ಧಿಸುವ ನಿಟ್ಟಿನಲ್ಲಿ ಉತ್ತಮ ತರಬೇತಿಗಳನ್ನು ನೀಡಲಾಗುತ್ತದೆ, ಶಿಬಿರದಲ್ಲಿ ಸಿಗುವ ತರಬೇತಿಗಳ ಪೂರ್ಣ ಪ್ರಯೋಜನ ಪಡೆದುಕೊಂಡು ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಸಾಧಿಸಬೇಕೆಂದು ನುಡಿದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ಮುಖ್ಯಾಧ್ಯಾಪಕಿ ಶ್ರೀಮತಿ ನಾಗವೇಣಿ ಭಟ್ಟ ಮಾತನಾಡಿ, ಶಾಲೆಯಲ್ಲಿ ನಡೆಯುತ್ತಿರುವ ಇಂತಹ ಶಿಬಿರಗಳು ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಅನಾವರಣಗೊಳಿಸುತ್ತದೆ. ವಿದ್ಯಾರ್ಥಿಗಳು ಉತ್ಸಾಹದಿಂದ ಈ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಈ ಶಿಬಿರದ ಮೂಲ ಉದ್ದೇಶವನ್ನು ಈಡೇರಿಸುವಲ್ಲಿ ವಿದ್ಯಾರ್ಥಿಗಳು ಚಟುವಟಿಕೆಯಿಂದ ಪಾಲ್ಗೊಂಡಿದ್ದಾರೆ ಎಂದರು.
ಮುಖ್ಯಾಧ್ಯಾಪಕರಾದ ಶ್ರೀ ವಿವೇಕ್ ಆಚಾರಿ ಮಾತನಾಡಿ, ಕಲಿಕೆಗೆ ಪೂರಕವಾದ ಚಟುವಟಿಕೆಗಳು ಮಕ್ಕಳಿಗೆ ಹೆಚ್ಚು ಆಸಕ್ತಿಯನ್ನು ಉಂಟು ಮಾಡಿದೆ, ಶಿಬಿರಾರ್ಥಿಗಳು ಈ ತರಬೇತಿಯಿಂದ ಉತ್ತಮ ಕೌಶಲ್ಯ ರೂಪಿಸಿಕೊಳ್ಳುವಂತೆ ಕರೆ ನೀಡಿದರು.
ಸಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಪಾಲ್ಗೊಂಡಿದ್ದರು. ಕುಮಾರಿ ವರ್ಷಿಣಿ ಹೆಗಡೆ ಸ್ವಾಗತಿಸಿದಳು, ಶಿಕ್ಷಕರಾದ ಜಿ. ಆರ್. ನಾಯ್ಕ ಪ್ರಾಸ್ತಾವಿಕ ನುಡಿಯಾಡಿದರು. ಕುಮಾರಿ ರಮ್ಯಾ ಹೆಗಡೆ ವಂದಿಸಿದಳು ಕುಮಾರಿ ನಯನ ಹಾಗೂ ಶ್ರೇಯಾ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಶಿಬಿರ ಆರಂಭಗೊಂಡು ಶಿಬಿರಾರ್ಥಿಗಳು ವಿವಿಧ ಚಟುವಟಿಕೆಗಳಲ್ಲಿ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡರು. ಆರು ದಿನಗಳ ಕಾಲ ನಡೆಯುವ ಶಿಬಿರದಲ್ಲಿ ವಿವಿಧ ಚಟುವಟಿಕೆಯನ್ನಾಧರಿಸಿದ ತರಬೇತಿಗಳು ನಡೆಯಲಿದೆ. ಈ ತರಬೇತಿಯಲ್ಲಿ ಸುತ್ತಲಿನ ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲಿದ್ದಾರೆ.