ಹೊನ್ನಾವರ : ಜಿಲ್ಲೆಯ ಸೂಕ್ಷ್ಮ ಪ್ರದೇಶವಾದ ಭಟ್ಕಳ- ಹೊನ್ನಾವರ ವಿಧಾನಸಭಾ ಕ್ಷೇತ್ರ ಪ್ರತಿಬಾರಿಯ ಚುನಾವಣೆಗೂ ರೋಚಕತೆಯಿಂದ ಕೂಡಿರುತ್ತದೆ. ಕಳೆದ ಚುನಾವಣೆಯಲ್ಲಿ ಸೋಲು- ಗೆಲುವನ್ನು ನಿರ್ಧರಿಸಲು ಸಾಮಾಜಿಕ ಜಾಲತಾಣವು ಕಾರಣವಾಗಿತ್ತು. ಅಂದಿನ ಶಾಸಕರಾಗಿದ್ದ ಮಂಕಾಳ ವೈದ್ಯರ ವಿರುದ್ಧ ಇದೇ ಸಾಮಾಜಿಕ ಜಾಲತಾಣಗಳ ಮೂಲಕ ತೇಜೋವಧೆಗೆ ಮುಂದಾಗಲಾಗಿತ್ತು. ವೈದ್ಯರ ಸೋಲಿಗೆ ಇದು ಸಹ ಪ್ರಮುಖ ಕಾರಣವಾಗಿತ್ತು.
ವಿಧಾನಸಭಾ ಚುನಾವಣೆಗೆ ದಿನ ನಿಗದಿಯಾದ ಬಳಿಕ ಭಟ್ಕಳ ಕ್ಷೇತ್ರದಲ್ಲಿ ರಾಜಕೀಯ ವಿದ್ಯಮಾನ ಸಾಮಾಜಿಕ ಜಾಲತಾಣದಲ್ಲಿ ಅಬ್ಬರಿಸುತ್ತಿದ್ದು, ಆರೋಪ- ಪ್ರತ್ಯಾರೋಪ ಠಾಣೆಯ ಮೆಟ್ಟಿಲೇರಿ ದೂರು ದಾಖಲಾಗಲು ಆರಂಭಿಸಿದೆ. ಈ ಬಾರಿ ಚುನಾವಣೆ ಪೂರ್ವದಲ್ಲಿ ಹಲವು ನಕಲಿ ಖಾತೆಯ ಮೂಲಕ ಪ್ರಮುಖ ಮೂರೂ ಪಕ್ಷದ ನಾಯಕರ ತೆಜೋವಧೆ ನಡೆಯುತ್ತಿದ್ದು, ಅದರಲ್ಲೂ ಹಾಲಿ ಹಾಗೂ ಮಾಜಿ ಶಾಸಕರ ಬೆಂಬಲಿಗರ ನಡುವೆ ಅಸಲಿ ಹಾಗೂ ನಕಲಿ ಖಾತೆಗಳ ಮೂಲಕ ಆರೋಪ ಜೋರಾಗಿದೆ. ಶಾಸಕ ಸುನೀಲ ನಾಯ್ಕ ಹಾಗೂ ಮಾಜಿ ಶಾಸಕ ಮಂಕಾಳ ವೈದ್ಯ ಪರ ಹಾಗೂ ವಿರುದ್ಧ ಪೋಸ್ಟಗಳು ಕ್ಷೇತ್ರದಲ್ಲಿ ಭಾರೀ ಹರಿದಾಡುತ್ತಿದ್ದು, ಕಳೆದ ಒಂದು ತಿಂಗಳಿನಲ್ಲಿ ಹತ್ತಾರು ಹೊಸ ನಕಲಿ ಐಡಿಯನ್ನು ತೆರೆದು ತೆಜೋವಧೆ ಕಾರ್ಯ ನಡೆಯುತ್ತಿದ್ದು ಈ ಬಗ್ಗೆ ಪೊಲೀಸ್ ಇಲಾಖೆ ಯಾವ ಕ್ರಮ ಕೈಗೊಳ್ಳಲಿದೆ ಎಂಬುದೇ ಈಗಿರುವ ಪ್ರಶ್ನೆಯಾಗಿದೆ.
ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿ ಇರುವ ಕಾರಣ ಸಾಮಾಜಿಕ ಜಾಲತಾಣ ಬಳಕೆಯ ಬಗ್ಗೆಯೂ ಎಚ್ಚರವಿರಲಿ ಎಂಬ ಮಾತುಗಳನ್ನು ಅಧಿಕಾರಿಗಳು ಹೇಳಿದ್ದು, ಈ ಬಗ್ಗೆ ಎಲ್ಲರೂ ಎಚ್ಚರ ವಹಿಸಬೇಕಾಗಿದೆ.