ಮಕ್ಕಳಿಗೆ ಶೀತ, ಕೆಮ್ಮು ಹೀಗೆ ಸಣ್ಣ ಪುಟ್ಟ ಕಾಯಿಲೆಗಳು ಆಗಾಗ ಬರುತ್ತಾ ಇರುತ್ತದೆ. ಆದ್ದರಿಂದ ಮಕ್ಕಳಿರುವ ಮನೆಯಲ್ಲಿ ಮನ್ನೆಚ್ಚರಿಕೆ ಕ್ರಮವಾಗಿ ಕೆಲವೊಂದು ಔಷಧೀಯ ವಸ್ತುಗಳನ್ನು ತಂದು ಇಟ್ಟಿರುವುದು ಒಳ್ಳೆಯದು. ಅದರಲ್ಲೂ ಈ ಕೆಳಗಿನ ಕಾಯಿಲೆಗಳು ಸಾಮಾನ್ಯವಾಗಿ ಕಂಡು ಬರುತ್ತಿರುತ್ತವೆ.
ಬೇಧಿ: ಈ ಕಾಯಿಲೆ ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಆದ್ದರಿಂದ ಬೇಧಿ ಉಂಟಾದರೆ ಅದನ್ನು ಹೋಗಲಾಡಿಸಲು ಮನೆಮದ್ದು ತಿಳಿದುಕೊಂಡಿರುವುದು ಒಳ್ಳೆಯದು. ಒಂದು ಗ್ಲಾಸ್ ಹದ ಬಿಸಿ ನೀರಿಗೆ ಒಂದು ಚಮಚ ಸಕ್ಕರೆ ಮತ್ತು ಅರ್ಧ ಚಮಚ ಉಪ್ಪು ಹಾಕಿ ಚೆನ್ನಾಗಿ ಕರಗಿಸಿ ಅದನ್ನು ಕುಡಿಸಿದರೆ ಬೇಧಿ ಕಡಿಮೆಯಾಗುತ್ತದೆ. ಈ ರೀತಿ ಮಾಡಿಯೂ ಬೇಧಿ ಕಡಿಮೆಯಾಗದಿದ್ದರೆ ಕೂಡಲೇ ವೈದ್ಯರನ್ನು ಕಂಡು ಔಷಧಿ ತೆಗೆದುಕೊಳ್ಳಬೇಕು.
ಜ್ವರ: ಸೋಂಕು, ಶೀತ ಇವುಗಳಿಂದ ಜ್ವರ ಉಂಟಾಗುತ್ತದೆ. ಜ್ವರ ಬಂದರೆ ನಿರ್ಲಕ್ಷ್ಯ ಮಾಡದೆ ವೈದ್ಯರನ್ನು ಕಂಡು ಔಷಧಿ ತೆಗದುಕೊಳ್ಳಬೇಕು.
ಶೀತ: ಶೀತ ಮತ್ತು ಕೆಮ್ಮು ಕಾಣಿಸಿಕೊಂಡರೆ ಒಂದು ಚಮಚ ತುಳಸಿ ರಸಕ್ಕೆ 2 ಕರಿಮೆಣಸನ್ನು ಪುಡಿ ಮಾಡಿ ಹಾಕಿ ಅದಕ್ಕೆ ಅರ್ಧ ಚಮಚ ಜೇನು ಸೇರಿಸಿ ಮಿಶ್ರಣ ಮಾಡಿ ಕುಡಿಸಿದರೆ ಜ್ವರ ಕಡಿಮೆಯಾಗುತ್ತದೆ. ಈ ಮನೆ ಮದ್ದನ್ನು 6 ತಿಂಗಳಗಿಂತ ಚಿಕ್ಕ ವಯಸ್ಸಿನ ಮಗುವಿಗೆ ಕೊಡಬೇಡಿ. ವೈದ್ಯರ ಸಲಹೆ ಪಡೆಯದೆ ಔಷದಿ ಅಂಗಡಿಯಿಂದ ಔಷಧಿ ತಂದು ಕೊಡಬೇಡಿ.
ಹೊಟ್ಟೆಯ ಸಮಸ್ಯೆ: ಮಲಬದ್ಧತೆ, ಹೊಟ್ಟೆ ನೋವು, ಅಜೀರ್ಣ ಈ ರೀತಿಯ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುತ್ತದೆ. ಮಗುವಿಗೆ ಹೊಟ್ಟೆ ನೋವು ಇದ್ದಾಗ ಸ್ವಲ್ಪ ಇಂಗನ್ನು ನೀರಿನಲ್ಲಿ ಕಲೆಸಿ ಕೊಟ್ಟರೆ ಹೊಟ್ಟೆ ನೋವು ಕಡಿಮೆಯಾಗುವುದು. ಹಾಗಲಕಾಯಿಯ ಎಲೆಯಿಂದ ರಸವನ್ನು ಇಂಡಿ ಅದನ್ನು ಮಕ್ಕಳಿಗೆ ಕುಡಿಸುವುದು ಒಳ್ಳೆಯದು. ಅಜೀರ್ಣ ಸಮಸ್ಯೆ ಕಂಡು ಬಂದರೆ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಕುಡಿಯಲು ಮತ್ತು ತಿನ್ನಲು ಕೊಡಬಾರದು.
ಕೆಂಪು ಗುಳ್ಳೆಗಳು: ಚಿಕ್ಕ ಮಕ್ಕಳಿಗೆ ಡಯಾಫರ್ ಹಾಕಿದಾಗ ಈ ರೀತಿಯ ಗುಳ್ಳೆಗಳು ಉಂಟಾಗುತ್ತದೆ. ಸೊಳ್ಳೆ ಕಚ್ಚಿ ಅಲರ್ಜಿ ಉಂಟಾಗುವುದು. ಡಯಾಫರ್ ಅಥವಾ ಸೊಳ್ಳೆ ಕಚ್ಚಿ ಮಕ್ಕಳ ತ್ವಚೆಯಲ್ಲಿ ಗುಳ್ಳೆಗಳು ಉಂಟಾದರೆ ಕುಡಿ ಬಾಳೆ ಎಲೆ ರಸ, ಆಲೀವ್ ಎಣ್ಣೆ, ಸ್ವಲ್ಪ ಮೇಣ (beeswax) ಮಿಶ್ರ ಮಾಡಿ ಗುಳ್ಳೆಗಳ ಮೇಲೆ ಹಚ್ಚಿದರೆ ಆ ಗುಳ್ಳೆಗಳು ಮಾಯವಾಗುವುದು.