ಅಪರಿಚಿತ ಶವ ಪತ್ತೆ
ದಾಂಡೇಲಿ: ದಾಂಡೇಲಿ ಜನತಾ ಕಾಲೋನಿಯಿಂದ ಒಂದು ಕಿ.ಮೀ. ದೂರದ ಪಣಸೋಲಿ ಬ್ರಿಡ್ಜ್ ಕೆಳಗೆ ಅಪರಿಚಿತ ಗಂಡಸಿನ ಶವವು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಲೆಯ ಮೇಲೆ ಬಿಳಿಯ ಕೂದಲುಗಳಿದ್ದು, ಮೈಮೇಲೆ ಯಾವುದೇ ಬಟ್ಟೆಗಳಿರುವುದಿಲ್ಲ. ಇದು ಸಂಶಯಾಸ್ಪದ ಸಾವು ಎಂದು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಸಂತೆಯಲ್ಲಿ ಮೊಬೈಲ್ ಕಳ್ಳತನ.
ಅಂಕೋಲಾ: ಶನಿವಾರದ ಸಂತೆ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಗೆ ಬಂದಿದ್ದ ಕೆಲ ಗ್ರಾಹಕರ ಗಮನವನ್ನು ಬೇರೆಡೆ ಸೆಳೆದು, ಮೊಬೈಲ್ ಕಳ್ಳತನ ಮಾಡುವ ಮೂಲಕ ಕಳ್ಳರು ತಮ್ಮ ಕೈಚಳಕ ಪ್ರದರ್ಶಿಸಿದ್ದಾರೆ. ಈ ಕುರಿತು ಮೊಬೈಲ್ ಕಳೆದುಕೊಂಡ ಎರಡು ಮೂರು ಸಾರ್ವಜನಿಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ. ಬರಲಿರುವ ರಥೋತ್ಸವ, ಮತ್ತಿತರ ಜನನಿಭಿಡ ಪ್ರದೇಶಗಳಲ್ಲಿ ಸಾರ್ವಜನಿಕರು ತಮ್ಮ ಅಮೂಲ್ಯ ಸ್ವತ್ತುಗಳ ಬಗ್ಗೆ ಸ್ವತಃ ತಾವೇ ಜಾಗರೂಕರಾಗಿರಬೇಕಿದೆ. ಅಲ್ಲದೇ ಪೊಲೀಸ್ ಇಲಾಖೆ ಸಹ ಕಳ್ಳತನವಾಗದಂತೆ ನಿಗಾ ವಹಿಸಬೇಕಿದೆ.
ರೇಖಾ ಹೆಗಡೆಗೆ ಪಿಎಚ್‌ಡಿ
ಶಿರಸಿ: ಶಾರಾದಾಂಬಾ ಹೈಸ್ಕೂಲ್‌ನಲ್ಲಿ ಕನ್ನಡ ಮಾಧ್ಯಮ ಕಲಿತ ವಿದ್ಯಾರ್ಥಿ ರೇಖಾ ಶಾಂತಾರಾಮ ಹೆಗಡೆ ಕಗ್ಗನ ಕೊಡ್ಲು ಚೌತಿ ಅವರು ಪಿಎಚ್‌ಡಿ ಪದವಿ ಪಡೆದುಕೊಂಡಿದ್ದಾರೆ. ಇವರು ರಸಾಯನ ಶಾಸ್ತ್ರ ವಿಷಯದ ಸಿಂಥೆಸಿಸ್ ಎಂಡ್ ಮೆಸೊಮೊರಪಿಕ್ ಪ್ರೊಪರ್ಟಿಸ್ ಆಪ್ ಸಮ್ ಥೆರ್ಮೊಟ್ರಿಪಿಕ್ ಅಸೋ ಸಬ್ಸಿಟಿಟ್ಯೂಟೆಡ್ ಮೆಸೋಗನ್” ಎಂಬ ವಿಷಯದ ಮೇಲೆ ಸಂಶೋಧನಾ ಪ್ರಬಂಧ ಮಂಡಿಸಿದ್ದರು. ಬೆಂಗಳೂರಿನ ಸೆಂಟರ್ ಫಾರ್ ನ್ಯಾನೋ ಎಂಡ್ ಸೋಸ್ಟ್ ಮ್ಯಾಟರ್ ಸೈನ್ಸ್ ಎಂಬಲ್ಲಿ ಅಧ್ಯಯನ ನಡೆಸಿದ್ದರು. ಮಂಗಳೂರಿನ ಯುನಿವರ್ಸಿಟಿ ಇವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.