ಕುಂದಾಪುರ : ಕುಂದಾಪುರದ ವಾಜಪೇಯಿ ಎಂದೇ ಖ್ಯಾತಿ ಪಡೆದಿರುವ, ಸರಳ ಮತ್ತು ಸಜ್ಜನಿಕೆಗೆ ಹೆಸರಾಗಿರುವ ಕುಂದಾಪುರ ಬಿಜೆಪಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಈ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸೋಮವಾರ ತಿಳಿಸಿದ್ದಾರೆ. 72 ವರ್ಷದ ಹಾಲಾಡಿ ಶ್ರೀನಿವಾಸ ಶೆಟ್ಟಿ ಕುಂದಾಪುರ ವಿಧಾನಸಭಾ ಮತಕ್ಷೇತ್ರದಿಂದ ಸತತ ಐದು ಸಲ ಶಾಸಕರಾಗಿ ಆಯ್ಕೆಯಾಗಿದ್ದಾರೆ. ನಾಲ್ಕು ಸಲ ಬಿಜೆಪಿ ಹಾಗೂ ಒಮ್ಮೆ ಪಕ್ಷೇತರಾಗಿ ಆಯ್ಕೆಯಾಗಿದ್ದಾರೆ. ನಾನು ಸ್ವ ಇಚ್ಛೆಯಿಂದ ಸ್ಪರ್ಧಿಸದಿರಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.
ಶಾಸಕನಾಗಿ ಕರ್ತವ್ಯ ನಿರ್ವಹಿಸಿದ ಅವಧಿಯಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಿ ಅತ್ಯಂತ ನಿಷ್ಠೆಯಿಂದ ನನ್ನ ಜವಾಬ್ದಾರಿ ನಿರ್ವಹಿಸಿದ್ದೇನೆ. ನನ್ನನ್ನು ಬಹು ನಿರೀಕ್ಷೆಯಿಂದ ಆಯ್ಕೆ ಮಾಡಿದ ಕುಂದಾಪುರದ ಎಲ್ಲಾ ವರ್ಗದ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ಕುಂದಾಪುರ ಬಹಳಷ್ಟು ಗ್ರಾಮೀಣ ಭಾಗಗಳನ್ನು ಹೊಂದಿರುವ ಕ್ಷೇತ್ರವಾಗಿದೆ. ಎಲ್ಲಾ ವರ್ಗದ ಮತದಾರರ ನೋವು ನಲಿವುಗಳಿಗೆ ಸ್ಪಂದಿಸಿ ಜನರ ಆಶೋತ್ತರಗಳನ್ನು ಈಡೇರಿಸಿದ ಸಂತೃಪ್ತಿ ನನಗಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಪ್ರಮುಖರಿಗೆ ಅಭಿಮಾನಿಗಳಿಗೆ ನಾನು ಯಾವತ್ತೂ ಚಿರಋಣಿ ಎಂದು ಅವರು ತಿಳಿಸಿದ್ದು ಈ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಬೆಂಬಲ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರನ್ನು ಮೂರನೇ ಹಣಕಾಸು ಆಯೋಗದ ಅಧ್ಯಕ್ಷರಾಗಿದ್ದ ಎ.ಜಿ ಕೊಡ್ಗಿ ರಾಜಕೀಯಕ್ಕೆ ಕರೆದುಕೊಂಡು ಬಂದಿದ್ದರು. ಆರಂಭದ ಎರಡು ಅವಧಿಗಳಲ್ಲಿ ಹಾಲಾಡಿಯ ಗೆಲುವಿನ ಹಿಂದೆ ಕೊಡ್ಗಿ ಬೆಂಬಲ ಇತ್ತು. ಗುರುವಿನ ಋಣವನ್ನು ತೀರಿಸಲು ಅವರು ಎ ಜಿ ಕೊಡ್ಗಿ ಅವರ ಪುತ್ರ ಕಿರಣ್ ಕೊಡ್ಗಿ ಅವರಿಗೆ ಈ ಬಾರಿ ಕುಂದಾಪುರದ ಟಿಕೆಟ್ ಕೊಡಿಸಲು ಉತ್ಸುಕರಾಗಿದ್ದಾರೆ ಎನ್ನಲಾಗಿದೆ.