ಶಿರಸಿ: ಇಲ್ಲಿನ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಆಯೋಜನೆಗೊಂಡಿದ್ದ ಪ್ರಜ್ವಲೋತ್ಸವ -1, ಭಜನಾಮೃತ, ಸಾಂಸ್ಕೃತಿಕ ಸಂಜೆ ಕಾರ್ಯಕ್ರಮಗಳು ಅತ್ಯಂತ ಶಿಸ್ತುಬದ್ಧವಾಗಿ ನೆರವೇರಿತು. ಮುಂಜಾನೆ ಗಣಹವನದೊಂದಿಗೆ ಶ್ರೀದೇವರನ್ನು ಪೂಜಿಸಿ, ನಂತರದಲ್ಲಿ ಕಾರ್ಯಕ್ರಮವು ಭಜನಾಮೃತದ ನಿರ್ಣಾಯಕರಿಂದ ದೀಪ ಬೆಳಗುವುದರ‌ ಮೂಲಕ ವಿದ್ಯುಕ್ತವಾಗಿ ಚಾಲನೆಗೊಂಡಿತು. ಒಟ್ಟೂ 60ತಂಡಗಳು ಹೆಸರನ್ನು‌ ನೋಂದಾಯಿಸಿದ್ದು ಅವುಗಳನ್ನು ‘ಎ’ ಹಾಗೂ‌ ‘ಬಿ’ ತಂಡಗಳೆಂದು ವಿಂಗಡಿಸಿ‌ ಪ್ರತ್ಯೇಕ ವೇದಿಕೆಗಳಲ್ಲಿ ಸ್ಪರ್ಧೆಯು ನಡೆಯಿತು. ಸ್ಪರ್ಧೆಯ ನಿರ್ಣಾಯಕರಾಗಿ ಜಿ.ಆರ್.ಹೆಗಡೆ ಶಿರಸಿ, ಗಂಗಾ ಹೆಗಡೆ ಕಾನಸೂರು, ಗುರುರಾಜ ಆಡುಕಳಾ, ಕಮಲಾ ಹೆಗಡೆ ಶಿರಸಿ, ನಿರ್ಮಲಾ ಹೆಗಡೆ ಗೋಳಿಕೊಪ್ಪ, ಮುಕ್ತಾ ಶಂಕರ ಆಗಮಿಸಿ ಸಮರ್ಥವಾಗಿ ನಿರ್ಣಯ ನೀಡಿದರು.

ಸ್ಪರ್ಧೆಯು ಎರಡು ಹಂತಗಳಲ್ಲಿ ನಡೆದಿದ್ದು ‘ಎ’ ವಿಭಾಗದಿಂದ ಮೂರು ತಂಡಗಳು, ‘ಬಿ’ ವಿಭಾಗದಿಂದ ಮೂರು ತಂಡಗಳು ಆಯ್ಕೆಗೊಂಡು ಅಂತಿಮ ಸುತ್ತಿಗೆ ಪ್ರವೇಶ ಪಡೆದವು. ಕೊನೆಯ ಸುತ್ತಿನಲ್ಲಿ ಹಾಡಿದ ಆರು ತಂಡಗಳ ತಾಳ, ಲಯ, ಶೃತಿ, ಹೀಗೆ ಹಲವಾರು ವಿಷಯಗಳನ್ನು ಪರಿಗಣಿಸಿ ಪ್ರಥಮ,ದ್ವಿತೀಯ, ತೃತೀಯ ಸ್ಥಾನಗಳಿಗೆ ಆಯ್ಕೆ ಮಾಡಲಾಯಿತು. ಪ್ರಥಮ ಸ್ಥಾನವನ್ನು ರಾಜರಾಜೇಶ್ವರಿ ಹವ್ಯಕ ಬಳಗ ಸೋಂದಾ, ದ್ವಿತೀಯ ಸ್ಥಾನವನ್ನು  ಸಂಹಿತಾ ಮ್ಯೂಸಿಕ್‌ ಫೋರಂ ಶಿರಸಿ, ತೃತೀಯ ಸ್ಥಾನವನ್ನು ನಾದ ಝೇಂಕಾರ ಹೀಪನಳ್ಳಿ , ಪ್ರೋತ್ಸಾಹಕ ಬಹುಮಾನವನ್ನು ಶಾಂತದುರ್ಗಾ ಮಹಿಳಾ ಭಜನಾ ಮಂಡಳಿ ಗುಂದ ತಂಡವು ಪಡೆದು ₹ 10000, ₹ 7000, ₹ 5000 ಹಾಗೂ ₹ 3000 ರೂ.ನಗದು ಬಹುಮಾನವನ್ನು ಕ್ರಮವಾಗಿ ತಮ್ಮದಾಗಿಸಿಕೊಂಡವು.

RELATED ARTICLES  ಸರಕಾರಿ ಪ್ರೌಢಶಾಲೆ ಸಾಂಬ್ರಾಣಿ, ಹಳಿಯಾಳ ಬಾಲಕರ ಥ್ರೋಬಾಲ್ ತಂಡ ವಿಭಾಗೀಯ ಮಟ್ಟಕ್ಕೆ ಆಯ್ಕೆ

ಸಾಧಕರಿಗೆ ಸನ್ಮಾನ:
ರಂಗೋಲಿಯಲ್ಲಿ ಹೊಸ ಭರವಸೆ ಮೂಡಿಸುತ್ತಿರುವ ಚಿನ್ಮಯಿ ಹೆಗಡೆ ಬೆಂಗಳೆ, ಗಣೇಶ ಖರೆ ಬನವಾಸಿ ಹಾಗೂ‌ ಹೊನ್ನಕಾಂತಿ‌ ಪ್ರೊಡಕ್ಟ್ಸ್ ತಯಾರಕ ಎಂ.ಪಿ.ಹೆಗಡೆ ಮಾಗೋಡ ಇವರಿಗೆ ಸನ್ಮಾನಿಸಲಾಯಿತು.  ಸನ್ಮಾನ ಸ್ವೀಕರಿಸಿ ಮಾತನಾಡಿದ ಎಂ.ಪಿ.ಹೆಗಡೆ ಮಾಗೋಡ, ಮನಸ್ಸಿದ್ದರೆ ಮಾರ್ಗ ಎಂಬುದನ್ನು ನಾನು ಅಳವಡಿಸಿಕೊಂಡು ನನ್ನ ಕೆಲಸದಲ್ಲಿ ಯಶಸ್ಸನ್ನು ಕಾಣುತ್ತಿದ್ದೇನೆ. ದೊಡ್ಡ ದೊಡ್ಡ ಸಾಧನೆಗಳು ಚಿಕ್ಕ ಪ್ರಯತ್ನಗಳಿಂದ ಸಾಧ್ಯವಾಗುತ್ತದೆ ಎನ್ನುವುದನ್ನು ಎಲ್ಲರೂ ಅರಿತುಕೊಂಡು ದೃಢ ಮನಸ್ಸಿನಿಂದ ಕೆಲಸ ಪ್ರಾರಂಭಿಸಿದರೆ ಯಶಸ್ಸು ಸಾಧ್ಯ ಎಂದು ಹೇಳಿದರು.

RELATED ARTICLES  ಶಿರಸಿ ನಗರಸಭೆಯ ಮತ ಏಣಿಕೆ ವಿವರ ಹಾಗೂ ಗೆದ್ದವರ ಯಾದಿ ಇಲ್ಲಿದೆ.

ಸಾಂಸ್ಕೃತಿಕ ಸಂಜೆ:
ನಂತರದಲ್ಲಿ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ  ಮೊದಲಿಗೆ ಉಸ್ತಾದ್ ಮೌಶಿನ್ ಖಾನ್ ತಮ್ಮ ಸಿತಾರ ವಾದನದೊಂದಿಗೆ ನೆರೆದವರನ್ನು ಮಂತ್ರಮುಗ್ಧಗೊಳಿಸಿದರು. ಸುಮಾರು ಒಂದು ತಾಸಿಗೂ ಹೆಚ್ಚಿನ ಸಮಯದಲ್ಲಿ ನಡೆದ ಸಿತಾರ್ ವಾದನಕ್ಕೆ ತಬಲಾದಲ್ಲಿ ರಾಜೇಂದ್ರ ನಾಕೋಡ್ ಅಷ್ಟೇ ಸಮರ್ಥವಾಗಿ ಸಹಕರಿಸಿ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗನ್ನು ತಂದರು.

ನಂತರ ಸಾವಿರಾರು ಹಣತೆ ದೀಪಗಳ ಬೆಳಕಿನಲ್ಲಿ ನಡೆದ ಸಾರ್ವಜನಿಕ ರಾಮರಕ್ಷಾ ಪಠಣವು ಸಭಿಕರಲ್ಲಿ ಧನಾತ್ಮಕತೆಯನ್ನು ಸೃಷ್ಟಿಸಿತು.

ಕೊನೆಯಲ್ಲಿ  ಸಾಗರದ ನವೀನ್ ಆರ್.ಹೆಗಡೆ ನಡೆಸಿಕೊಟ್ಟ ಕಥಕ್ ನೃತ್ಯ ಪ್ರದರ್ಶನವು ನೋಡುಗರ ಮನಸೂರೆಗೊಂಡಿತು.

ಕಾರ್ಯಕ್ರಮದ ಪ್ರಾರಂಭದಲ್ಲಿ ಪ್ರಾಸ್ತಾವಿಕವಾಗಿ ಟ್ರಸ್ಟ್ ಅಧ್ಯಕ್ಷೆ ಬಿಂದು ಹೆಗಡೆ ಮಾತನಾಡಿದರೆ, ಸನ್ಮಾನ ಪತ್ರವನ್ನು ಸುಮಾ ಹೆಗಡೆ, ನಯನಾ ಹೆಗಡೆ ವಾಚಿಸಿದರು. ಕಾರ್ಯಕ್ರಮವನ್ನು ನಾಗೇಶ ಮಧ್ಯಸ್ಥ ನಿರೂಪಿಸಿದರು. ಟ್ರಸ್ಟಿನ ಎಲ್ಲ ಪದಾಧಿಕಾರಿಗಳು ಹಾಗೂ ಎಲ್ಲ ಸದಸ್ಯರು ಉಪಸ್ಥಿತರಿದ್ದರು.