ಕುಮಟಾ : ಐತಿಹಾಸಿಕ ಹಿನ್ನೆಲೆ ಹೊಂದಿರುವ ಬಾಡದ ಕಾಂಚಿಕಾಂಬಾ ದೇವಾಲಯದಲ್ಲಿ ವಾರ್ಷಿಕ ಜಾತ್ರಾ ಸಂಭ್ರಮ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ರಥ ಎಳೆಯುವ ಮೂಲಕ ಸಂಪನ್ನವಾಯಿತು. ರಾಜ್ಯ ಹಾಗೂ ಪರರಾಜ್ಯದ ಭಕ್ತರು ಈ ಸಂದರ್ಭದಲ್ಲಿ ದೇವಾಲಯಕ್ಕೆ ಆಗಮಿಸಿ, ದೇವರ ದರ್ಶನ ಪಡೆದು ಹರಕೆ ತೀರಿಸಿ ಕೃತಾರ್ಥರಾದರು. ಸಕಲಾಭರಣ ಭೂಷಿತಳಾಗಿ ತಾಯಿ ಕಾಂಚಿಕಾಂಬೆ ಭಕ್ತರಿಗೆ ದರ್ಶನ ನೀಡುತ್ತಿದ್ದರೆ. ಭಕ್ತಿ ಪರವಶರಾದ ಭಕ್ತಸಮೂಹ ತಾಯಿಗೆ ಉಡಿ ತುಂಬುವುದು, ತುಲಾಭಾರ, ಎತ್ತು ಹರಿಸುವ ಸೇವೆ ಸಲ್ಲಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.
ತನ್ನದೇ ಆದ ವಿಶೇಷತೆ ಹೊಂದಿರುವ ಈ ಜಾತ್ರೆಯಲ್ಲಿ ಜನ ಜಂಗುಳಿಯೇ ಸೇರಿರುತ್ತದೆ. ಎಂಟು ದಿನ ಮೊದಲು ಡಂಗುರ ಸಾರುವ ಮೂಲಕ ಜಾತ್ರೆ ಸನಿಹ ಬಂದಿತೆಂದು ಸಂದೇಶವನ್ನು ನೀಡಲಾಗುತ್ತದೆ. ಇದಾದ ಎರಡು ದಿನದ ನಂತರ ತೇರು ಕಟ್ಟಲು ಪ್ರಾರಂಭಿಸುತ್ತಾರೆ. ಈ ದಿನದಿಂದಲೇ ಕುಲುಲಿ ಕುದುರೆ ಮಧ್ಯ ರಾತ್ರಿ ನಾಮಧಾರಿ ಸಮಾಜದ ಹೋನ್ನು ಮನೆಯವರು ಜಾತ್ರೆಯ ಸಡಗರ ಪ್ರಾರಂಭ ಮಾಡುತ್ತಾರೆ. ಪರಿವಾರ ದೇವರುಗಳ ಕಳಸಗಳು ಏಳಲು ಪ್ರಾರಂಭವಾಗುತ್ತದೆ. ಇದನ್ನು ತೊಡಕಲಶ (ಮೊದಲನೆ ಕಲಶೋತ್ಸವ) ಎನ್ನುವರು. ಹಿಂದಿನಿಂದಲೂ ಕಾಗಾಲ್ ಗ್ರಾಮದ ಹಾಲಕ್ಕಿ ಒಕ್ಕಲ ಸಮುದಾಯದವರು ಈ ದಿನದಿಂದ ತೇರು ಕಟ್ಟಲು ಪ್ರಾರಂಭಿಸುವರು.
ಚೈತ್ರ ಶುದ್ಧ ಹುಣ್ಣಿಮೆ ದಿನ ಬಾಡದ ಜಾತ್ರೆ ನಡೆಯುವ ಮೊದಲ ದಿನ ಅಂದರೆ ಚತುರ್ದಶಿ ದಿನ ಹಗಲು ರಾತ್ರಿ ಸುತ್ತ ಮುತ್ತಲಿನ ಗ್ರಾಮಗಳೆಲ್ಲ, ಮರುದಿನದ ಜಾತ್ರಾ ತಯಾರಿ ಚಟುವಟಿಕೆಯಲ್ಲಿ ತೊಡಗಿರುತ್ತದೆ. ಹುಣ್ಣಿಮೆಯ ಪರ್ವ ಕಾಲದಲ್ಲಿ ಜಾತ್ರಾ ಸಡಗರ ಮನೆ ಮಾಡಿರುತ್ತದೆ.
ಸಂಜೆ ದೇವಿಯ ಪಲ್ಲಕ್ಕಿಯನ್ನು ಉತ್ಸವ ರಥದ ಸಮೀಪ ತರಲಾಗುತ್ತದೆ. ದೇವಿಗೆ ಸಲ್ಲಿಸಬೇಕಾದ ಪೂಜೆಗಳು ಮುಗಿದ ನಂತರ ಉತ್ಸವ ಮೂರ್ತಿಯನ್ನು ರಥದೊಳಗೆ ಕುಳ್ಳಿರಿಸಲಾಗುತ್ತದೆ.
ರಥಕಾಣಿಕೆ ಹರಕೆ ಹೊತ್ತವರು ರಥದ ಗಡ್ಡೆಗೆ ಕಾಯಿ ಒಡೆದು ಹರಕೆ ತೀರಿಸುತ್ತಾರೆ.
ಇಡಗಾಯಿ ಒಡೆದಾದ ನಂತರ ರಥವನ್ನು ಎಳೆಯಲಾಗುತ್ತದೆ. ಚಲಿಸುವ ರಥಕ್ಕೆ ಬಾಳೆ ಹಣ್ಣು ಹೊಡೆಯುವ ಮೂಲಕ ಆಸ್ಥಿಕರು ಸಂಭೃಮಿಸುತ್ತಾರೆ. ರಾತ್ರಿ ಮೃಗಭೇಟೆ ನಡೆದು, ಭೂತ ಬಲಿಯೊಂದಿಗೆ ಜಾತ್ರೆಯ ಚಟುವಟಿಕೆಗಳು ಮುಕ್ತಾಯವಾಗುತ್ತದೆ.