ಶಿರಸಿ : ಬಿಸಿಲ ಬೇಗೆಗೆ ಬಸವಳಿದಿದ್ದ ಉತ್ತರ ಕನ್ನಡದ ಜನತೆಗೆ ಅನಿರೀಕ್ಷಿತವಾಗಿ ಸುರಿದ ಮಳೆಯು ತಂಪೆರದಿದೆ. ತಾಲೂಕಿನ ವರ್ಷದ ಮೊದಲ ಮಳೆಯ ಸಿಂಚನ ತಾಲೂಕಿನ ಹಲವೆಡೆಯಾಗಿದೆ. ಗುರುವಾರ ಶ್ರೀಕ್ಷೇತ್ರ ಮಂಜುಗುಣಿಯ ತೇರಿನ ದಿನ ಮಳೆಯಾಗುವ ಹಿನ್ನೆಲೆ ಕ್ಷೇತ್ರದಲ್ಲಿತ್ತು. ಅದರ ಮರುದಿನ ತಾಲೂಕಿನ ಹಲವೆಡೆ ಗುಡುಗು, ಅಲಿಕಲ್ಲಿನಿಂದ ಕೂಡಿದ ಮಳೆ ಸುರಿದಿದೆ ಎಂದು ವರದಿಯಾಗಿದೆ.
ಸಿದ್ದಾಪುರದ ಕೆಲವು ಭಾಗಗಳಲ್ಲಿಯೂ ಧಾರಾಕಾರ ಮಳೆ ಸುರಿದಿದೆ. ಕುಮಟಾದಲ್ಲಿಯೂ ಅಲ್ಲಲ್ಲಿ ಮಳೆಯ ಹನಿಗಳು ಉದುರಿತು. ಹೊನ್ನಾವರ ಭಟ್ಕಳ ಕಾರವಾರ ಅಂಕೋಲದಲ್ಲಿ ಮೋಡ ಕವಿದ ವಾತಾವರಣ ಮುಂದುವರೆದಿದೆ.
ಮುಂದಿನ 24 ಗಂಟೆಯಲ್ಲಿ ರಾಜ್ಯಾದ್ಯಂತ ಮಳೆಯು ಆಗಮನವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ ಎರಡು ದಿನಗಳು ಕೆಲವು ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆ ಆಗಲಿದೆ.
ಏಪ್ರಿಲ್ 8ರಂದು ಉತ್ತರ ಒಳನಾಡಿನ ಜಿಲ್ಲೆಗಳಾದ ಗದಗ, ಬೆಳಗಾವಿ, ಕೊಪ್ಪಳ, ಹಾವೇರಿ ಹಾಗೂ ಧಾರವಾಡ, ಕಲ್ಬುರ್ಗಿ, ವಿಜಯಪುರ, ಯಾದಗಿರಿ, ಬಾಗಲಕೋಟೆ, ರಾಯಚೂರು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಇನ್ನು ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಬಳ್ಳಾರಿ, ತುಮಕೂರು, ಚಾಮರಾಜನಗರ, ಮೈಸೂರು, ದಾವಣಗೆರೆ, ಚಿತ್ರದುರ್ಗದಲ್ಲಿ ಮಳೆ ಅಬ್ಬರಿಸಲಿದೆ. ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಇರುವ ಸಾಧ್ಯತೆ ಇದೆ.
ಮುಂದಿನ 24 ಗಂಟೆಗಳಲ್ಲಿ ಉತ್ತರ ಒಳನಾಡಿನ ವಿಜಯಪುರ, ಕಲಬುರಗಿ, ಯಾದಗಿರಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆಯಾಗುವ ಸಾಧ್ಯತೆ ಇದೆ.