ಕುಮಟಾ : ಚುನಾವಣೆ ಸಮೀಪಿಸುತ್ತಿದ್ದಂತೆ ಫೇಸ್ ಬುಕ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರತಿನಿಧಿಗಳ ವಿರುದ್ಧ ಸುಳ್ಳು ಅಪಪ್ರಚಾರಗಳು ಎಗ್ಗಿಲ್ಲದೇ ನಡೆಯುತಿದ್ದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ನಕಲಿ ಫೇಸ್ ಬುಕ್ ಖಾತೆ ಸೃಷ್ಟಿಸಿ ಮಾಜಿ ಶಾಸಕ ಮಂಕಾಳು ವೈದ್ಯ ವಿರುದ್ಧ ಮಾನಹಾನಿ ಹಾಗೂ ತೇಜೋವಧೆ ಮಾಡಿ ಪ್ರಕಟಿಸಿದ ಇಬ್ಬರ ವಿರುದ್ಧ ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿತರು ನಕಲಿ ಫೇಸ್ ಬುಕ್ ಖಾತೆ ತೆರೆದು ಮಂಕಾಳು ವೈದ್ಯ ಹಾಗೂ ಅವರ ಕುಟುಂಬದ ವಿರುದ್ಧ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿದ್ದರು. ಆರೋಪಿತರು ಯಾವುದೋ ಮಹಿಳೆ ಮನೆಯಲ್ಲಿ ನೇಣು ಬಿಗಿದುಕೊಂಡ ನಕಲಿ ಫೋಟೋ ಬಳಸಿ ಎಡಿಟ್ ಮಾಡಿ ಮಂಕಾಳುವೈದ್ಯ ತನ್ನ ಪತ್ನಿಯನ್ನು ಕೊಲೆಮಾಡಿ ನೇಣು ಹಾಕಿ,ಆತ್ಮಹತ್ಯೆ ಎಂದು ಬಿಂಬಿಸಿ ಸುಳ್ಳುಸುದ್ದಿಯನ್ನು ಪ್ರಸಾರ ಮಾಡಿದ್ದಾರೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.