ಕುಮಟಾ : ವಿದ್ಯಾರ್ಥಿಗಳು ಇಂದು ವರ್ತಮಾನದಲ್ಲಿ ಬದುಕಬೇಕಾಗಿದೆ. ನಿನ್ನೆ ಎನ್ನುವುದು ಸತ್ತುಹೋಗಿದೆ, ನಾಳೆ ನಮ್ಮ ಕೈಗೆ ಸಿಕ್ಕಿಲ್ಲ. ಇವತ್ತು ಎನ್ನುವುದು ನಮ್ಮ ಕೈಯಲ್ಲಿದೆ. ಈ ಅಮೂಲ್ಯ ಸಮಯವನ್ನು ಸದುಪಯೋಗಪಡಿಸಿಕೊಂಡರೆ ಭವಿಷ್ಯ ನಮ್ಮದಾಗುತ್ತದೆ. ಅಂತಹ ಕಾರ್ಯವನ್ನು ನೀವೆಲ್ಲರೂ ಮಾಡಬೇಕೆಂದು ಖ್ಯಾತ ಸಾಹಿತಿ, ಬರಹಗಾರ, ವಾಗ್ಮಿ ರವೀಂದ್ರ ಭಟ್ ಸೂರಿ ಅಭಿಪ್ರಾಯಪಟ್ಟರು. ಅವರು ಮೂರೂರು ಪ್ರಗತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೇಸಿಗೆ ಶಿಬಿರದ ಸಮರೂಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ವಿದ್ಯಾರ್ಥಿಗಳು ಸದಾ ಪ್ರಯತ್ನಶೀಲರಾಗಿರಬೇಕು. ಬದುಕಿನಲ್ಲಿ ಬಂದದ್ದನ್ನು ಬಂದ ಹಾಗೆ ಸ್ವೀಕರಿಸುವ ಮನಸ್ಥಿತಿ ರೂಢಿಸಿಕೊಳ್ಳಬೇಕು. ಜೀವನದಲ್ಲಿ ಸಾಗಿ ಬಂದ ದಾರಿಯನ್ನೊಮ್ಮೆ ತಿರುಗಿ ನೋಡಿ ಪಾಪ ಪುಣ್ಯಗಳ ಲೆಕ್ಕಾಚಾರ ಮಾಡಬೇಕು. ಹಿರಿಯರ ಮಾತನ್ನು ಗೌರವಿಸಿ ಒಳ್ಳೆಯ ಸಂಸ್ಕಾರ ರೂಢಿಸಿಕೊಳ್ಳಬೇಕೆಂಬ ಬದುಕಿನ ಪಾಠ ನೀಡಿದರು. ಇದೇ ಸಂದರ್ಭದಲ್ಲಿ ತಮ್ಮದೇ ಕೃತಿಗಳಾದ ಆರು ಪುಸ್ತಕಗಳನ್ನು ಶಾಲೆಗೆ ದೇಣಿಗೆಯಾಗಿ ನೀಡಿ ಶಿಕ್ಷಣ ಪ್ರೇಮ ಮೆರೆದರು.

RELATED ARTICLES  ಮಳೆ ಮುಗಿದರೂ ಮುಗಿದಿಲ್ಲ ಅವಾಂತರ : ರಸ್ತೆ ಸರಿಪಡಿಸಲು ಜಿಲ್ಲಾಡಳಿತ ಹರ ಸಾಹಸ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಗತಿ ವಿದ್ಯಾಲಯದ ಪ್ರಾಚಾರ್ಯರಾದ ಜಿ. ಎಂ. ಭಟ್ಟ ಮಾತನಾಡಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಮುಗಿದ ನಂತರದಲ್ಲಿ ಪಠ್ಯವನ್ನು ಬಿಟ್ಟು ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಹುಟ್ಟಿಸುವ, ಕೌಶಲ್ಯ ಬೆಳೆಸುವ ಉದ್ದೇಶದಿಂದ ಇಂತಹ ಶಿಬಿರಗಳನ್ನು ಆಯೋಜಿಸುತ್ತಿದ್ದೇವೆ. ಈ ಶಿಬಿರ ಆರು ದಿನಗಳ ಕಾಲ ಅತ್ಯಂತ ಯಶಸ್ವಿಯಾಗಿ ನಡೆದಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

RELATED ARTICLES  ಯಲ್ಲಾಪುರದಲ್ಲಿ ಯುಗಾದಿ ಸ್ಪರ್ಧೆ: ಸಂತಸದಿಂದ ಭಾಗವಹಿಸಿದ ಮಹಿಳೆಯರು ಮಕ್ಕಳು.

ವೇದಿಕೆಯ ಮೇಲೆ ಮುಖ್ಯಾಧ್ಯಾಪಕರಾದ ವಿವೇಕ್ ಆಚಾರಿ, ಶಿಬಿರದ ನಿರ್ದೇಶಕರಾದ ಶಿಕ್ಷಕ ಜಿ. ಆರ್. ನಾಯ್ಕ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕುಮಾರಿ ವರ್ಷಿಣಿ ಹೆಗಡೆ ಸ್ವಾಗತಿಸಿದಳು. ಕುಮಾರಿ ಮಾನಸ ಗೌಡ ವಂದಿಸಿದಳು. ಕುಮಾರಿ ವಿದ್ಯಾ ಹೆಗಡೆ ಕಾರ್ಯಕ್ರಮ ನಿರೂಪಿಸಿದಳು. ಆರು ದಿನಗಳ ಕಾಲ ನಡೆದ ಈ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಚಟುವಟಿಕೆಗಳನ್ನು ನೀಡಲಾಗಿತ್ತು.