ಕುಮಟಾ : ತಾಲೂಕಿನ ಬರ್ಗಿಯ ಶ್ರೀ ವೀರಾಂಜನೇಯ ದೇವಾಲಯದಲ್ಲಿ ಹನುಮೋತ್ಸವದಂದು ವಿವಿಧ ಕ್ಷೇತ್ರದಲ್ಲಿ ಅನನ್ಯವಾದ ಕೊಡುಗೆಯನ್ನು ನೀಡಿದ ನಾಡಿನ ಖ್ಯಾತ ರಂಗಕರ್ಮಿ ಕಾರವಾರದ ಸಿದ್ದರದಲ್ಲಿನ ಮಲ್ಲಿಕಾರ್ಜುನ ಪದವಿಪೂರ್ವ ಮಹಾವಿದ್ಯಾಲಯದ ವಿಶ್ರಾಂತ ಉಪನ್ಯಾಸಕರಾದ ಡಾ: ಪ್ರಕಾಶ ನಾಯಕ ಹಾಗೂ ಬಯಲಾಟ ರಂಗ ಭೂಮಿಯ ಹೆಸರಾಂತ ಯಕ್ಷ ನಟ ಮತ್ತು ಕರ್ನಾಟಕ ಪ್ರತಿಭಾ ಪರಿಷತ್ತಿನ ರಾಜ್ಯ ಪ್ರಶಸ್ತಿಗೆ ಭಾಜನರಾದ ಕುಮಟಾ ಡಯಟ್ ನ ಜನಪ್ರಿಯ ನಿವೃತ್ತ ಅಧ್ಯಾಪಕ ಬಿ.ಎಸ್.ಗೌಡರಿಗೆ ಬರ್ಗಿಯ ಶ್ರೀವೀರಾಂಜನೇಯ ಪ್ರತಿಷ್ಠಾನದ ಎರಡನೇ ವರ್ಷದ “ವೀರಾಂಜನೇಯ ಪುರಸ್ಕಾರ-೨೦೨೩” ನ್ನು ನೀಡಿ ಸನ್ಮಾನಿಸಲಾಯಿತು. ಜೊತೆಯಲ್ಲಿ ಸ್ಥಳೀಯ ಹಿರಿಯ ಯಕ್ಷಗಾನ ಕಲಾವಿಧ ನಾರಾಯಣ ನಾಯಕರನ್ನು ಸನ್ಮಾನಿಸಲಾಯಿತು.

ಪುರಸ್ಕಾರ ಸ್ವೀಕರಿಸಿದ ಡಾ: ಪ್ರಕಾಶ ನಾಯಕ ಬೆಳಸೆಯವರು ಮಾತನಾಡಿ “ಭಗವಂತನ ಸಮ್ಮುಖದಲ್ಲಿ ಆಪ್ತವಾಗಿ ಆದರಿಸಿರುವುದು ಭಗವಂತನೇ ನೀಡಿದ ಪ್ರಸಾದವೆಂದು ಎಣಿಸುತ್ತೇನೆ ಎಂದರಲ್ಲದೇ ಪುರಸ್ಕಾರವು ತಮ್ಮ ಸಮಾಜಮುಖಿಯಾದ ಸಾಂಸ್ಕೃತಿಕ ಜವಾಬ್ದಾರಿಯನ್ನು ಹೆಚ್ಚಿಸಿದೆ” ಎಂದು ನುಡಿದರು. ಬಿ.ಎಸ್.ಗೌಡರು ಮಾತನಾಡುತ್ತ “ತನ್ನ ವೃತ್ತಿ ಬದುಕಿನ ಆರಂಭದ ವರ್ಷಗಳನ್ನು ಕಳೆದ ಬರ್ಗಿಯ ನಂಟನ್ನು ನಿವೃತ್ತರಾದರೂ ಉಳಿಸಿಕೊಂಡಿರುವುದು ಭಾಗ್ಯವೆಂದು ನುಡಿದರು”.

RELATED ARTICLES  ಜೆಡಿಎಸ್, ಬಿ.ಜೆ.ಪಿ ಗೆ ಗುಡ್ ಬೈ ಹೇಳಿ ಕಾಂಗ್ರೇಸ್ ಕೈ ಹಿಡಿದ ಕುಮಟಾದ ಪ್ರಮುಖರು.

ನಂತರ ರಾಜೇಶ ನಾಯಕ ಸೂರ್ವೆಯವರ ಸಂಚಾಲಕತ್ವದ ಯಕ್ಷಮುಖಿ ಕಲಾ ಭೂಮಿಕೆ ಅಂಕೋಲಾದ ಸಂಯೋಜನೆಯಲ್ಲಿ “ಶ್ರೀರಾಮಾಂಜನೇಯ” ಯಕ್ಷಗಾನವು ಪ್ರದರ್ಶನಗೊಂಡಿತು. ಹಿಮ್ಮೇಳದಲ್ಲಿ ಭಾಗವತರಾಗಿ ಉಪನ್ಯಾಸಕ ಬೊಮ್ಮಯ್ಯ ಗಾಂವಕರ ಹಿತ್ತಲಮಕ್ಕಿ ಹಾಗೂ ದತ್ತಾತ್ರಯ ನಾಯ್ಕ ಕೋನಳ್ಳಿ, ಮದ್ದಳೆಯಲ್ಲಿ ರಮೇಶ ನಾಯ್ಕ ಬಳಲೆ, ಮತ್ತು ಚಂಡೆ ವಾದಕರಾಗಿ ಗಜಾನನ ಹೆಗಡೆ ಕೋಣಾರೆ ಸಾತ್ ನೀಡಿದರೆ ಮುಮ್ಮೇಳದಲ್ಲಿ ರಾಮನಾಗಿ ಅಧ್ಯಾಪಕ ಮಂಜುನಾಥ ಗಾಂವಕರ ಬರ್ಗಿ, ಹನುಮಂತನಾಗಿ ವಿಶ್ರಾಂತ ಪ್ರಾಧ್ಯಾಪಕ ಡಾ: ಎಮ್.ಆರ್.ನಾಯಕ ಹಿಚ್ಕಡ, ನಾರದನಾಗಿ ಡೈಟಿನ ವಿಶ್ರಾಂತ ಉಪನ್ಯಾಸಕ ಬಿ.ಎಸ್.ಗೌಡ, ವಿಶ್ವಾಮಿತ್ರನಾಗಿ ಶಿಕ್ಷಕ ರಾಜೇಶ ನಾಯಕ ಸೂರ್ವೆ, ಅಂಜನಾದೇವಿಯಾಗಿ ತುಳಸು ಗೌಡ ಹಾಗೂ ಸೀತೆಯಾಗಿ ಮಂಜುನಾಥ ನಾಯ್ಕ ಕೋನಳ್ಳಿ ಪ್ರಧಾನ ಭೂಮಿಕೆಯಲ್ಲಿ ಇದ್ದರೆ ನವಪ್ರತಿಭೆಗಳಾದ ಪನ್ನಗಸಂದೀಪ, ಸುಜನ್ ಅಗಸೂರ ಹಾಗೂ ಸುಬ್ರಹ್ಮಣ್ಯ ಜಮಗೋಡ ರವರು ಕ್ರಮವಾಗಿ ಸುಗ್ರೀವ, ಶಕುಂತ ಹಾಗೂ ಹಾಸ್ಯಪಾತ್ರಗಳಲ್ಲಿ ಕಾಣಿಸಿಕೊಂಡು ಪ್ರಸಂಗವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟು ಅಪಾರ ಪ್ರೇಕ್ಷಕರನ್ನು ಸೆರೆಹಿಡಿಯುವಲ್ಲಿ ಶಸಕ್ತರಾದರು.

RELATED ARTICLES  ಶಿರಸಿಯಲ್ಲಿ 'ನನ್ನದೆನ್ನುವುದೆಲ್ಲವೂ ನನ್ನದಲ್ಲ ' ಉಪನ್ಯಾಸ : ಮಾತಿನ ಮೂಲಕ ಜನತೆಯ ಮನ ಗೆದ್ದ ಸಂದೀಪ ಭಟ್ಟ

ಕನ್ನಡ ಚಂದ್ರಮದ ಅಧ್ಯಕ್ಷ ಜಗದೀಶ ನಾಯಕ ಹೊಸ್ಕೇರಿ ಅಭಿನಂದನಾ ನುಡಿಯನ್ನಾಡಿದರು. ಗಜಾನನ ಪಟಗಾರ ನಿರೂಪಿಸಿದರು. ವೇದಿಕೆಯಲ್ಲಿ ನಾರಾಯಣ ನಾಗು ನಾಯಕ, ಅರ್ಚಕ ಡಿ.ಪಿ.ಭಟ್ಟ, ಮಹಾದೇವ ಆಗೇರ ಮೊದಲಾದವರಿದ್ದರು. ಕಾರ್ಯಕ್ರಮವನ್ನು ರಾಘವೇಂದ್ರ ಗಾಂವಕರ ಹಾಗೂ ಹರ್ಷಿತ ರಾಘವೇಂದ್ರ ದಂಪತಿಗಳು ಸಂಘಟಿಸಿದರು.