ಕುಮಟಾ : ಕುಮಟಾ ಹೊನ್ನಾವರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಇನ್ನೂ ಘೋಷಣೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಕುಮಟಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಮಾಜಿ ಶಾಸಕಿ ಶಾರದಾ ಶೆಟ್ಟಿ ಅವರ ಮನೆಗೆ ಆಗಮಿಸಿ ಮನೆಯ ಅಂಗಳದಲ್ಲೆ ಸಭೆ ನಡೆಸಿ, ಪಕ್ಷ ತಮ್ಮನ್ನು ಅಭ್ಯರ್ಥಿಯನ್ನಾಗಿಸದಿದ್ದರೆ, ಪಕ್ಷೇತರರರಾಗಿ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಸೋಮವಾರ ಶಾರದಾ ಶೆಟ್ಟಿ ಅವರನ್ನು ಒತ್ತಾಯಿಸಿದ ಘಟನೆ ನಡೆಯಿತು.
ಸಭೆಯಲ್ಲಿ ಕೃಷ್ಣಾನಂದ ವೆರ್ಣೇಕರ, ಮಂಜುನಾಥ ಹರಿಕಂತ್ರ, ಕೃಷ್ಣ ಗೌಡ, ಎಂ.ಟಿ.ನಾಯ್ಕ, ಮುಂತಾದವರು ಮಾತನಾಡುತ್ತ, ಈ ಕ್ಷೇತ್ರ ಮೊದಲಿನಿಂದಲು ಕಾಂಗ್ರೆಸ್‌ನದ್ದಾಗಿದೆ. ಕಳೆದ ಚುನಾವಣೆ ಸಂದರ್ಭದಲ್ಲಿ ನಡೆದ ಅಹಿತಕರ ಘಟನೆಯಿಂದಾಗಿ ನಮ್ಮ ಪಕ್ಷ ಸೋಲಬೇಕಾಯಿತು. ಅಹಿತಕರ ಘಟನೆ ನಡೆಯದಿದ್ದರೆ ಶಾರದಾ ಶೆಟ್ಟಿ ಅವರು ಶಾಸಕಿಯಾಗಿ ಮಾಡಿದ ಅಭಿವೃದ್ದಿ ಕಾರ್ಯಗಳಿಂದ ನಾವು ಅನಾಯಾಸವಾಗಿ ಗೆಲ್ಲುತ್ತಿದ್ದೇವು. ಶಾರದಾ ಶೆಟ್ಟಿ ಅವರು ಶಾಸಕರಾಗಿ ಉತ್ತಮವಾಗಿ ಕೆಲಸ ಮಾಡಿದವರು. ಅವರಿಗೆ ಈ ಸಲದ ಚುನಾವಣೆಯಲ್ಲಿ ಪಕ್ಷ ಟಿಕೇಟ್ ನೀಡುತ್ತದೆ ಎಂದು ನಾವೆಲ್ಲರು ಅಂದುಕೊಂಡಿದ್ದೆವು. ಆದರೆ ಅವರನ್ನು ಬಿಟ್ಟು ಹೊರಗಿನವರು ಪಕ್ಷದಿಂದ ಟಿಕೇಟ್ ಪಡೆದುಕೊಳ್ಳಲು ಭಾರಿ ಯತ್ನ ನಡೆಸಿದ್ದಾರೆ. ಹೀಗಾಗಿ ಪಕ್ಷಕ್ಕೆ ಕುಮಟಾ ಕ್ಷೇತ್ರದ ಅಭ್ಯರ್ಥಿಯ ಹೆಸರು ಘೋಷಿಸಲು ಕಷ್ಟವಾಗಿದೆ ಎಂಬ ಸುದ್ದಿ ಕಾರ್ಯಕರ್ತರೆಲ್ಲರನ್ನು ಆತಂಕಗೊಳಿಸಿದೆ. ಶಾರದಾ ಶೆಟ್ಟಿ ಬಿಟ್ಟು ಬೇರೆಯಾರಿಗು ಪಕ್ಷ ಅಭ್ಯರ್ಥಿಯನ್ನಾಗಿಸಬಾರದು ಎಂಬುದು ಪಕ್ಷದ ಕಾರ್ಯಕರ್ತರೆಲ್ಲರ ಅಭಿಪ್ರಾಯವಾಗಿದೆ. ಈ ಅಭಿಪ್ರಾಯತಕ್ಕೆ ವಿರುದ್ದವಾಗಿ ಬೇರೆಯವರಿಗೆ ಟಿಕೇಟ್ ನೀಡಿದರೆ ನಾವು ಶಾರದಾ ಶೆಟ್ಟಿ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿ ಗೆಲ್ಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಕಾರ್ಯಕರ್ತರ ಮಾತನ್ನು ಅಲಿಸಿದ ಶಾರದಾ ಶೆಟ್ಟಿ ಮಾತನಾಡಿ, ಚುನಾವಣಾ ಟಿಕೆಟ್ ನೀಡಿಕೆಯಲ್ಲಿ ಪಕ್ಷ ಯಾವ ರೀತಿಯ ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬುದರ ಬಗ್ಗೆ ನಾನು ಕಾಯುತ್ತಿದ್ದೇನೆ. ಪಕ್ಷ ನೀಡುವ ತೀರ್ಮಾನ ಉತ್ತಮವಾಗಿಲ್ಲದಿದ್ದರೆ ಆಗ ನಿಮ್ಮ ತೀರ್ಮಾನದಂತೆ ನಾನು ನಡೆದುಕೊಳ್ಳುತ್ತೇನೆ ಎಂದು ಹೇಳಿ ಕಾರ್ಯಕರ್ತರನ್ನು ಸಮಾಧಾನಪಡಿಸಿದರು.
ಸಭೆಯ ವೇದಿಕೆಯಲ್ಲಿ ಮಧುಸೂದನ ಶೇಟ್, ಮುಜಾಪರ ಶೇಖ, ಸುರೇಕಾ ವಾರೇಕರ, ಇಸ್ಮಾಯಿಲ್ ಉಪ್ಪಾರಕರ, ಹನುಮಂತ ಪಟಗಾರ, ಹರೀಶ ಭಟ್ಟ, ತಾರಾ ಗೌಡ, ಕೃಷ್ಣ ಗೌಡ ಹಾಗೂ ಇನ್ನಿತರರು ಉಪಸ್ಥಿತರಿದ್ದರು.