ಕುಮಟಾ : ಧರ್ಮದ ಹೆಸರಿನ ರಾಜಕಾರಣಕ್ಕೆ ಇತೀಶ್ರೀ ಹಾಡಬೇಕಾಗಿದ್ದು, ನಾವೆಲ್ಲಾ ಹಿಂದು ಹಾಗೂ ಹಿಂದುತ್ವ ರಕ್ಷಣೆ ಮಾಡೋಣ ಆದರೆ ರಕ್ತದ ಓಕುಳಿ ಆಡಿ, ಯುವಕರನ್ನು ಸಮಸ್ಯೆಗೆ ಸಿಲುಕಿಸದೇ ನಾವೆಲ್ಲಾ ಅಣ್ಣ ತಮ್ಮಂದಿರಂತೆ ಬದುಕಬೇಕಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು. ಅವರು ಬುಧವಾರ ತಾಲೂಕಿನ ಕುಮಟಾ ಮಣಕಿ ಮೈದಾನದಲ್ಲಿ ನಡೆದ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಜೆ.ಡಿ.ಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗೆ ಚಾಲನೆ ನೀಡುವ ಹಾಗೂ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.
ಸೂರಜ್ ನಾಯ್ಕ ರವರನ್ನು ಆಶೀರ್ವದಿಸಲು ಬಂದ ನಿಮ್ಮ ಆಶೀರ್ವಾದ ಅವರ ಮೇಲೆ ಇರುವ ವರೆಗೆ ಅವರಿಗೆ ಯಾವುದೇ ಸಮಸ್ಯೆ ಇಲ್ಲ. ಕಳೆದ ೪.೫ ತಿಂಗಳಿಂದ ರಾಜ್ಯಾದ್ಯಂತ ಪ್ರವಾಸ ಮಾಡಿದ್ದೇನೆ. ರಾಜ್ಯದಲ್ಲಿ ಸ್ಪಷ್ಟ ಬಹುಮತದ ಕನ್ನಡಿಗರ ಸರ್ಕಾರನ್ನು ನಿಮ್ಮಂತ ತಂದೆ ತಾಯಿಯವರು ತರುತ್ತೀರಿ ಎಂಬ ನಂಬಿಕೆ ಇದೆ ಎಂದರು.
ಉತ್ತರ ಕನ್ನಡ ಜಿಲ್ಲೆಯ ಅತಿಕ್ರಮಣ ಸಮಸ್ಯೆಗೆ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳ ದೌರ್ಜನ್ಯ ತಡೆಯಲು ಮತ್ತು ಜಿಲ್ಲೆಯ ಪ್ರತಿ ಮನೆಗೆ ಕುಡಿಯುವ ನೀರು, ಮತ್ತು ರೈತರ ಹೊಲಗಳಿಗೆ ನೀರು, ಮೀನುಗಾರ ಸಮಾಜದ ಹೆಣ್ಣುಮಕ್ಕಳು, ಹಾಲಕ್ಕಿ ಸಮಾಜದ ಸಮಸ್ಯೆಗಳನ್ನು ಅರಿತಿದ್ದೇನೆ ಅವುಗಳ ಪರಿಹಾರಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು. ಬಡವರು ಕಷ್ಟದಲ್ಲಿರುವವರನ್ನು ಮೇಲೆತ್ತಲು ನಿಮಗೆ ಸಾಲವಿಲ್ಲದ ಸ್ವಾಭಿಮಾನಿ ಬದುಕು ಕಟ್ಟಿಕೊಳ್ಳಲು, ಸ್ವಂತ ಉದ್ಯೋಗಕ್ಕೆ ತರಬೇತಿ ಕೊಡಿಸಿ, ಒಂದು ಲಕ್ಷ ರೂ ಉದ್ಯಮ ನೀವು ಆರಂಭಿಸಿದರೆ ೯೦ ಸಾವಿರ ಸಬ್ಸಿಡಿ ನೀಡಲಿದ್ದೇವೆ. ೧೦ ಸಾವಿರ ಮಾತ್ರ ನೀವು ನೀಡಿದರೆ ಸಾಕೆಂದು ಭರವಸೆ ನೀಡಿದರು.
ಪಂಚರತ್ನ ಯೋಜನೆಯನ್ನು ಐದು ವರ್ಷಗಳಲ್ಲಿ ರಾಜ್ಯದಲ್ಲಿ ಸಂಪೂರ್ಣವಾಗಿ ಜಾರಿಗೆ ತಂದು ಬಡವರ ಬದುಕಿಗೆ ಆಸರೆಯಾಗುವಂತೆ ಮಾಡುವುದು ಈ ಯೋಜನೆಯ ಚಿಂತನೆ. ಕುಮಟಾ ಹೊನ್ನಾವರ ಭಾಗದಲ್ಲಿ ನಾನು ಯಾತ್ರೆ ಕೈಗೊಂಡ ವೇಳೆಯಲ್ಲಿ ನೀವು ನೀಡಿದ ಸಹಕಾರವನ್ನು ನಾನು ಜೀವನದಲ್ಲಿ ಎಂದೂ ಮರೆಯುವುದಿಲ್ಲ ಎಂದು ಅವರು ಯಾತ್ರೆಯ ದಿನಗಳನ್ನು ಸ್ಮರಿಸಿದರು.
ಈ ವೇಳೆಗೆ ಜೆಡಿಎಸ್ ಅಧಿಕೃತ ಅಭ್ಯರ್ಥಿ ಸೂರಜ್ ಸೋನಿ ಮಾತನಾಡಿ ನೀವೆಲ್ಲಾ ನನ್ನನ್ನು ಆಶೀರ್ವದಿಸಲು ಈ ಬಿಸಿಲಿನಲ್ಲಿ ಸೇರಿದ್ದೀರಿ, ನಿಮ್ಮೆಲ್ಲರ ಆಶೀರ್ವಾದದಿಂದ ಈ ಬಾರಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ. ಹಗಲಿರುಳು ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಮತ್ತು ತಮಗೆಲ್ಲರಿಗೆ ನಾನು ಚಿರ ಋಣಿ ಎಂದರು.
ಪೊಲೀಸ್ ಇಲಾಖೆ ಈ ಹಿಂದೆ ನನ್ನ ಮಕ್ಕಳ ಕೊಲೆ ಮಾಡುವುದಾಗಿ ಬೆದರಿಕೆ ಪತ್ರ ಬಂದರೂ ಸಮರ್ಪಕ ಕ್ರಮ ಕೈಗೊಂಡಿಲ್ಲ. ಕೆಲ ಪೊಲೀಸ್ ಅಧಿಕಾರಿಗಳು ನನಗೆ ಅನಾವಶ್ಯಕ ತೊಂದರೆ ನೀಡುತ್ತಿದ್ದಾರೆ. ನನ್ನ ಹಿಂದೆ ಬರುವುದು ಬೇರೆ ಪಕ್ಷ ಪಕ್ಷದ ಕಮಲದ ಚಿನ್ಹೆ ಇರುವ ಬ್ಯಾಗ್ ಅಧಿಕಾರಿಗಳ ಸಮ್ಮುಖದಲ್ಲೆ ಹಂಚಿದರು ಕ್ರಮ ಕೈಗೊಂಡಿಲ್ಲ. ಕೆಲವರ ಪ್ರಭಾವಕ್ಕೆ ಇಲ್ಲಿಯ ಕೆಲವು ಯುವಕರ ಮೇಲೆ ರೌಡಿಶೀಟ್ ತೆರೆಯಲಾಗಿದೆ ಕುಮಾರಣ್ಣ ಮುಖ್ಯಮಂತ್ರಿಯಾದ ತಕ್ಷಣ ಆ ಯುವಕರ ವಿರುದ್ಧದ ರೌಡಿಶೀಟ್ ಗಳು ಸುಳ್ಳು ಎಫ್.ಐ.ಆರ್.ಗಳನ್ನು ರದ್ದುಪಡಿಸಲು ನಿಮ್ಮ ಸಹಕಾರ ಬೇಕು ಎಂದರು. ನಾನು ಕಾನೂನನ್ನು ಎಂದೆಂದೂ ಗೌರವಿಸುತ್ತೇನೆ. ಆದರೆ ನಿಯಮ ಎಲ್ಲರಿಗೂ ಒಂದೇ ಆಗಿರಲೀ ಯಾರದೋ ಒತ್ತಡಕ್ಕೆ ಮಣಿದು ಕೆಲಸ ಮಾಡಬೇಡಿ ಎಂದರು.
ಬಿಜೆಪಿ ಪಕ್ಷದವರು ನನ್ನನ್ನು ಪಕ್ಷಕ್ಕೆ ಸೇರಿಸಿಕೊಂಡು, ಸಂಪೂರ್ಣವಾಗಿ ಬಳಸಿಕೊಂಡು ನನ್ನಿಂದ ಬೇಕಾದಷ್ಟು ಕೆಲಸ ಮಾಡಿಕೊಂಡು ನನಗೆ ಮೋಸ ಮಾಡಿದ್ದಾರೆ. ಕ್ಷೇತ್ರದ ಜನರ ಸೇವೆಗೆ ನನಗೊಂದು ಅವಕಾಶ ನೀಡಿ ಆಶೀರ್ವದಿಸಿ, ನಾನು ಖಂಡಿತಾ ನಿಮ್ಮ ನಿರೀಕ್ಷೆ ಹುಸಿಗೊಳಿಸದೆ ನಿಮ್ಮ ಸೇವೆ ಮಾಡುತ್ತೇನೆ ಎಂದರು.
ಐ.ಆರ್.ಬಿ ಕರ್ಮಕಾಂಡದಿಂದ 2020 ರಲ್ಲಿ ಟೋಲ್ ಆರಂಭಿಸಿದ್ದು ಈ ವರೆಗೆ ಕಾಮಗಾರಿ ಮುಗಿಸಿಲ್ಲ. ಮಾಡಿದ ಕಾಮಗಾರಿ ಸಹ ಅವೈಜ್ಞಾನಿಕ ಮತ್ತು ಅಸಮರ್ಪಕವಾಗಿದೆ. ಜನ ದಿನೇ ದಿನೇ ಜೀವ ಕಳೆದುಕೊಳ್ಳುವ ಜೊತೆಗೆ ಕೈಕಾಲು ಮುರಿದುಕೊಳ್ಳುತ್ತಿದ್ದಾರೆ. ಕುಮಾರಣ್ಣಾ ನೀವು ಮುಖ್ಯಂಮತ್ರಿಯಾದ 15-20 ದಿನಗಳಲ್ಲಿ ನಿಯಮ ಬಾಹಿರ ಈ ಟೋಲ್ ಬಂದ್ ಆಗಬೇಕು ಜನರಿಗೆ ಬರವಸೆ ನೀಡಿದ್ದೇನೆ ಆ ಬೇಡಿಕೆ ಈಡೇರಿಸಿಕೊಡಬೇಕು. ನೀವು ಮುಖ್ಯಮತ್ರಿಯಾದ ತಕ್ಷಣ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಆಗಬೇಕು. ಈಗಿನ ಸರ್ಕಾರ ಆಸ್ಪತ್ರೆಯ ಗುಮ್ಮ ಮಾಡಿದೆ. ಬೆಂಗಳೂರು ಜಯದೇವ ಆಸ್ಪತ್ರೆಯಂತಹ ಆಸ್ಪತ್ರೆಯಲ್ಲಿಯ ಬಡವರಿಗೆ ಚಿಕಿತ್ಸೆ ನೀಡಲು ನಿಮ್ಮ ಸಹಕಾರ ಬೇಕು ಎಂದು ಕುಮಾರಸ್ವಾಮಿ ಅವರನ್ನು ವಿನಂತಿಸಿದರು.
ಬಿಜೆಪಿ ಮುಖಂಡರಾದ ಎಸ್.ಜಿ.ಹೆಗಡೆ ಹಾಗೂ ಹಳದಿಪುರ ಸಹಕಾರಿ ಧುರೀಣರು ಇಂದು ಅಧಿಕೃತವಾಗಿ ಜೆಡಿಎಸ್ ಗೆ ಸೇರ್ಪಡೆಗೊಂಡರು.
ಈ ವೇಳೆ ಜಿಲ್ಲಾ ವಕ್ತಾರ ಜಿ.ಕೆ.ಪಟಗಾರ, ಜಿಲ್ಲಾ ಉಪಾಧ್ಯಕ್ಷ ಪಿ.ಟಿ ನಾಯ್ಕ, ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷರಾದ ರೆಹಮತುಲ್ಲಾ , ಭಟ್ಕಳ ತಾಲೂಕಾ ಅಧ್ಯಕ್ಷ ರಾಜವರ್ಧನ ನಾಯ್ಕ, ಕುಮಟಾ ತಾಲೂಕಾ ಅಧ್ಯಕ್ಷ ಸಿ.ಜಿ.ಹೆಗಡೆ, ಹೊನ್ನಾವರ ಒಕ್ಕಲಿಗ ಮುಖಂಡರಾದ ಜಿ.ಎಲ್.ಗೌಡ, ಹೊನ್ನಾವರ ತಾಲೂಕಾ ಅಧ್ಯಕ್ಷ ಪಿ.ಟಿ.ನಾಯ್ಕ, ಈಶ್ವರ ನಾಯ್ಕ, ಬಲೀಂದ್ರ ಗೌಡ , ರಾಜು ಮಾಸ್ತಿಹಳ್ಳ ಇತರರು ಇದ್ದರು. ಸುಮಾರು ೬ ಸಾವಿರಕ್ಕೂ ಅಧಿಕ ಜನರು ಹಾಜರಿದ್ದರು. ಕುಮಾರಸ್ವಾಮಿ ಅವರು ಹೆಲಿಕ್ಯಾಪ್ಟರ್ ಮೂಲಕ ಕುಮಟಾಕ್ಕೆ ಆಗಮಿಸಿದ ವೇಳೆ ಮುಖಂಡರು ಭವ್ಯ ಸ್ವಾಗತ ಕೋರಿದರು.