ಗಜಿಯಾಬಾದ್: ಅಗತ್ಯ ಬಿದ್ದರೆ ಭಾರತೀಯ ವಾಯುಪಡೆ ಅಲ್ಪಾವಧಿಯಲ್ಲಿಯೇ ಯುದ್ಧ ಮಾಡಲು ಸಂಪೂರ್ಣ ಸಜ್ಜಾಗಿದೆ ಎಂದು ಏರ್ ಚೀಫ್ ಮಾರ್ಷಲ್ ಬಿಎಸ್ ಧನೊವಾ ತಿಳಿಸಿದ್ದಾರೆ.
ಅವರು ಇಂದು ಉತ್ತರ ಪ್ರದೇಶದ ಗಜಿಯಾಬಾದ್ ಜಿಲ್ಲೆಯ ಹಿಂಡನ್ ವಾಯುಪಡೆ ನೆಲೆಯಲ್ಲಿ 85ನೇ ವರ್ಷಾಚರಣೆ ಸಂದರ್ಭದಲ್ಲಿ ಅವರು ವಾಯುಪಡೆಯ ಸಿಬ್ಬಂದಿಗಳನ್ನುದ್ದೇಶಿಸಿ ಮಾತನಾಡಿದರು.
ದೇಶದ ಭದ್ರತೆ ಪರಿಸ್ಥಿತಿ ಕುರಿತು ಮಾತನಾಡಿದ ಅವರು, ತಕ್ಷಣದಲ್ಲಿಯೇ ನಾವು ಯುದ್ಧ ಮಾಡಲು ಸನ್ನದ್ಧರಾಗಿದ್ದೇವೆ. ಭಾರತೀಯ ವಾಯುಪಡೆ ಬಹು ಆಯಾಮದ ಕಾರ್ಯತಂತ್ರದ ಸಾಮರ್ಥ್ಯಗಳನ್ನು ಪಡೆದುಕೊಳ್ಳಲು ಮತ್ತು ಭೂ ಸೇನೆ ಮತ್ತು ನೌಕಾಪಡೆಯೊಂದಿಗೆ ಜಂಟಿಯಾಗಿ ಕೆಲಸ ಮಾಡಲು ಸಿದ್ಧವಾಗಿದೆ ಎಂದು ಹೇಳಿದರು.
ಕಳೆದ ವರ್ಷ ಪಠಾಣ್ ಕೋಟ್ ವಾಯುಪಡೆ ನೆಲೆ ಮೇಲೆ ಭಯೋತ್ಪಾದಕರ ದಾಳಿ ನಂತರ ಯಾವುದೇ ಬೆದರಿಕೆಯನ್ನು ಅತ್ಯಂತ ಸಮರ್ಥವಾಗಿ ಎದುರಿಸಲು ಎಲ್ಲಾ ವಾಯುಪಡೆ ನಿಲ್ದಾಣಗಳ ಭದ್ರತೆಯನ್ನು ವಿಸ್ತರಿಸಲಾಗುವುದು ಎಂದು ಧನೊವಾ ತಿಳಿಸಿದರು.
ಕಳೆದ ವರ್ಷ ಜನವರಿಯಲ್ಲಿ ಉಗ್ರಗಾಮಿಗಳು ಒಳನುಸುಳಿ ವಾಯುಪಡೆ ಮೇಲೆ ನಡೆಸಿದ ದಾಳಿಯಲ್ಲಿ ಏಳು ಮಂದಿ ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದರು. ಇದಕ್ಕೆ ಪ್ರತ್ಯುತ್ತರ ನೀಡಿದ ಭದ್ರತಾ ಪಡೆ ನಾಲ್ವರು ಉಗ್ರರನ್ನು ಕೊಂದು ಹಾಕಿತ್ತು.