ಕುಮಟಾ : ರಾಜಕಾರಣಿಗಳ ಕಟೌಟ್ ಬ್ಯಾನರ್ ಹಾಗೂ ಸರ್ಕಾರದ ಯೋಜನೆಗಳ ಭಿತ್ತಿ ಪತ್ರಗಳಿಗೆ ತಾಕಿದ್ದ ನೀತಿಸಂಹಿತೆಯ ಬಿಸಿ ಇದೀಗ ಹನುಮನ ಪಲ್ಲಕ್ಕಿಯ ಸಂಭ್ರಮದ ಧಾರ್ಮಿಕ ಆಚರಣೆಗೂ ತಟ್ಟಿದೆ. ಮೊನ್ನೆ ಹೊಳೆಗದ್ದೆಗೆಯ ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯಕ್ಕೆ ಆಗಮಿಸಿದ ಚಂದಾವರ ಸೀಮೆ ಹನುಮಂತ ದೇವರ ಪಾಲಕಿಯ ಸ್ವಾಗತಕ್ಕೆ ಹಾಕಿದ್ದ ಬಂಟಿಂಗ್ಸ್ ಗಳನ್ನು ಚುನಾವಣಾ ಅಧಿಕಾರಿಗಳು ತೆರವುಗೊಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 66ರ ಸುವರ್ಣಗದ್ದೆ ಸಮೀಪದ ಟೋಲ್ ನಿಂದ ಹೊಳೆಗೆದ್ದೆ ದೇವಾಲಯದ ಕ್ರಾಸ್ ವರೆಗೆ ರಸ್ತೆಯ ಎರಡೂ ಕಡೆಗಳಲ್ಲಿ ಕೇಸರಿ ಬಣ್ಣದ ಬಂಟಿಂಗ್ಸ್ ಗಳನ್ನು ಹಾಗೂ ಕೇಸರಿಯ ಹನುಮನ ಭಾವಚಿತ್ರದ ಪತಾಕೆಗಳನ್ನು ಕಟ್ಟಲಾಗಿತ್ತು. ಅದಲ್ಲದೆ ದೇವಾಲಯದ ತಿರುವಿನಲ್ಲಿ ಆಕರ್ಷಕ ರೀತಿಯಲ್ಲಿ ಕೇಸರಿ ಬಣ್ಣದ ಬಂಟಿಂಗ್ಸ್ ಗಳನ್ನು ಹಾಕಲಾಗಿತ್ತು. ಇವುಗಳನ್ನು ಚುನಾವಣಾ ಅಧಿಕಾರಿಗಳ ನಿರ್ದೇಶನದಂತೆ ತೆರವುಗೊಳಿಸಲಾಗಿದೆ.

RELATED ARTICLES  ಕೆಲಸಕ್ಕೆಂದು ಬೆಂಗಳೂರಿಗೆ ಹೊರಟ ಯುವತಿ ನಾಪತ್ತೆ

ಬುಧವಾರ ರಾತ್ರಿ ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಸ್ಥಳಕ್ಕೆ ಆಗಮಿಸಿದ್ದ ಅಧಿಕಾರಿಗಳು ಸ್ಥಳೀಯರೊಂದಿಗೆ ಮಾತುಕತೆ ನಡೆಸಿದ್ದರು. ದೈವಿಕ ಆಚರಣೆಗಾಗಿ ಹಾಗೂ ದೇವರನ್ನು ಕರೆತರುವ ನಿಟ್ಟಿನಲ್ಲಿ ಹಾಕಿದ ಅಲಂಕಾರಿಕ ವಸ್ತುಗಳನ್ನು ತೆರೆಯಲು ಸುತ್ತಲ ಜನ ನಿರಾಕರಿಸಿದರು ಎನ್ನಲಾಗಿದೆ. ನಂತರದಲ್ಲಿ ಅಧಿಕಾರಿಗಳು ಅವರ ಮನ ಒಲಿಸಲು ಪ್ರಯತ್ನಿಸಿದ್ದಾರೆ. ಗುರುವಾರ ಬೆಳಗ್ಗೆ ಸ್ಥಳಕ್ಕಾಗಮಿಸಿದ ಅಧಿಕಾರಿಗಳ ನಿರ್ದೇಶನ ಪಡೆದ ಕಾರ್ಯಪಡೆಯವರು ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಪೊಲೀಸ್ ಅಧಿಕಾರಿಗಳು ಹಾಗೂ ಚುನಾವಣಾ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

RELATED ARTICLES  ಪಾದಾಚಾರಿಗೆ ಡಿಕ್ಕಿ ಹೊಡೆದ ಬೈಕ್ : ಓರ್ವ ಸಾವು.

ಯಾವುದೇ ರೀತಿಯ ರಾಜಕೀಯ ವ್ಯಕ್ತಿಗಳ ಅಥವಾ ಚುನಾವಣೆಗೆ ಸಂಬಂಧಪಟ್ಟ ವಸ್ತುಗಳನ್ನ ಬಳಸದೆ ಕೇವಲ ಧಾರ್ಮಿಕ ಕಾರ್ಯಕ್ರಮಕ್ಕಾಗಿ ಈ ಅಲಂಕಾರ ಮಾಡಲಾಗಿತ್ತು. ಆದರೆ ಇದನ್ನು ಸಹ ತರವು ಗೊಳಿಸಿದ್ದು ಜನತೆಯ ಧಾರ್ಮಿಕ ಭಾವನೆಗೆ ನೋವುಂಟುಮಾಡಿದೆ ಎಂದು ಸ್ಥಳೀರು ಬೇಸರ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಚುನಾವಣಾ ನೀತಿ ಸಂಹಿತೆಯ ಕಾವು ಎಲ್ಲೆಡೆಯಲ್ಲಿ ತಾಕಿದ್ದು, ಆಚರಣೆಗಳ ವೈಭವವನ್ನೂ ಕಳೆಗುಂದಿಸಿದೆ.