ಕುಮಟಾ : ಹಿಂದಿನ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿ ನಾವು ಮತ ಕೇಳುತ್ತಿದ್ದೇವೆ ಹಾಗಾಗಿ ಜನರು ನಮ್ಮನ್ನು ಬೆಂಬಲಿಸಲಿದ್ದಾರೆ ಎಂದು ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದರು. ಭಾರತೀಯ ಜನತಾ ಪಾರ್ಟಿಯ ಚುನಾವಣಾ ಕಾರ್ಯಾಲಯದ ಉದ್ಘಾಟನೆ ಹಾಗೂ ಡಾ. ಬಿ.ಆರ್ ಅಂಬೇಡ್ಕರ ಅವರ ಜಯಂತಿ ಆಚರಣೆಯ ಸಂದರ್ಭದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಏ. 17 ರಂದು ಮಧ್ಯಾಹ್ನ 12:00 ರಿಂದ 01:30 ರ ಒಳಗಿನ ಶುಭ ಸಂದರ್ಭದಲ್ಲಿ ಸಹಾಯಕ ಆಯುಕ್ತರ ಕಛೇರಿಗೆ ತೆರಳಿ ನಾಮಪತ್ರ ಸಲ್ಲಿಸಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಗೂ ಬಿಜೆಪಿ ಹಿತೈಶಿಗಳು ಜೊತೆಗಿದ್ದು ಬೆಂಬಲಿಸಿ ಎಂದು ಅವರು ವಿನಂತಿಸಿದರು.
2019 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಇಡೀ ಜಗತ್ತಿನಲ್ಲಿ ಕರೋನಾ ವ್ಯಾಪಿಸಿತ್ತು, ಆ ಕಠಿಣ ಸಂದರ್ಭದಲ್ಲಿ ನರೇಂದ್ರ ಮೋದಿ ಸರ್ಕಾರ ಇಡೀ ದೇಶವನ್ನು ನೆಮ್ಮದಿಯಿಂದ ಇಟ್ಟಿದೆ. ಹಣಕಾಸಿನ ಸಮಸ್ಯೆ ಇದ್ದಾಗಲೂ 1800 ಕೋಟಿ ರೂಪಾಯಿಯನ್ನು ಬಿಜೆಪಿ ಸರ್ಕಾರ ನನ್ನ ಕ್ಷೇತ್ರಕ್ಕೆ ನೀಡಿದೆ, ಅತೀ ಹೆಚ್ಚು ರಸ್ತೆಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಮಾಡಿದ್ದೇವೆ. ನಗರದಲ್ಲಿ ವಿಳಂಬವಾಗಿ ಈಗ ಕಾರ್ಯಾರಂಭವಾಗಿದೆ. ಗುಣಮಟ್ಟದ ಕಾಮಗಾರಿ ಮಾಡಿದ್ದೇವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು ಎಂದರು.
ಶಾಶ್ವತ ಕುಡಿಯುವ ನೀರಿನ ಯೋಜನೆಗೆ 300 ಕೋಟಿ ರೂ ನೀಡಿ 6 ಗ್ರಾ.ಪಂ ಹಾಗೂ ಹೊನ್ನಾವರ ಪ.ಪಂ ಗೆ ಕುಡಿಯುವ ನೀರಿನ ವ್ಯವಸ್ಥೆ, 9 ಗ್ರಾ.ಪಂ ನ ಉಪ್ಪು ನೀರಿನ ಸಮಸ್ಯೆಯ ಪರಿಹಾರ, ಕರ್ಕಿಯಲ್ಲಿ ನೀರಿನ ಬವಣೆ ತಪ್ಪಿಸಲು ಯೋಜನೆ ತಂದಿದ್ದೇವೆ ಜೊತೆಗೆ ಸರ್ಕಾರಿ ಆಸ್ಪತ್ರೆಗೆ ಟ್ರಾಮಾ ಸೆಂಟರ್, ಡಯಾಲಿಸಿಸ್ ಮಶಿನ್ ಕೊಡಿಸುವ ವ್ಯವಸ್ಥೆ, ಕಾಲೇಜು, ಹಾಸ್ಟೆಲ್ ವ್ಯವಸ್ಥೆಗೆ ಶ್ರಮಿಸಿದ್ದೇನೆ ಎಂದರು.
ಸೇತುವೆಗಳಿಗೆ 60 ಕೋಟಿ ರೂ ಹಣ ಮಂಜೂರಿ ಮಾಡಿಸಿದ್ದೇವೆ. ಹಿಂದಿನಸರ್ಕಾರ ಕೇವಲ ಶಂಕುಸ್ಥಾಪನೆ ಮಾಡಿ ಪ್ರಚಾರ ಪಡೆದಿದ್ದಾರೆ. ಭೂಮಿಗೆ ಸಂಬಂಧಿಸಿದಂತೆ ಎಕ್ವಾಯರಿ ಮಾಡಿದ ಜಾಗಕ್ಕೆ ಹಣ ನೀಡುವ ಕಾರ್ಯ ನಾವು ಮಾಡಿ ಸೇತುವೆ ಕಾಮಗಾರಿ ಪ್ರಾರಂಭಿಸಿದ್ದೇವೆ ಎಂದರು.
ಸೊಪ್ಪಿನ ಹೊಸಳ್ಳಿಯ ಬಂಗಣೆಯಲ್ಲಿ ತೂಗುಸೇತುವೆ ಮಳೆಗಾಲದಲ್ಲಿ ಕೊಚ್ಚಿಹೋಗಿ ಸಮಸ್ಯೆಯಾಗಿತ್ತು ತಕ್ಷಣದಲ್ಲಿ ಜನರ ಸಮಸ್ಯೆಗೆ ಸ್ಪಂದಿಸಿ 4 ತಿಂಗಳಲ್ಲಿ ಆ ಸೇತುವೆ ಮಾಡಿಕೊಟ್ಟಿದ್ದೇವೆ ಎಂದರು. ಹೊಯ್ನೀರಿನಲ್ಲಿ ಅರಣ್ಯ ಇಲಾಖೆಯ ತಕರಾರು ಇತ್ತು, ಅದನ್ನು ಪರಿಹರಿಸಿ ಸೇತುವೆ ನಿರ್ಮಾಣ ಮಾಡಿದ್ದೇವೆ. ಕುಡಿಯುವ ನೀರಿನ ಯೋಜನೆಗೆ ಟೆಂಡರ್ ತಂದು ಎನ್.ಓ.ಸಿ ತಂದು ಕೆಲಸ ಮುಂದುವರಿಸಿದ್ದೇನೆ ಎಂದರು. ಗ್ರಾಮೀಣ ಅಭಿವೃದ್ಧಿ ಗಾಗಿ 56 ಕೋಟಿ ಹಣ ಮಂಜೂರು ಮಾಡಿಸಿದ್ದೇನೆ. ಇನ್ನು ಒಂದು ತಿಂಗಳ ಒಳಗಾಗಿ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದರು.
ಕಾರ್ಮಿಕ ಇಲಾಖೆ ಬೇಡ ಬೇಡ ಎನ್ನುವ ಕಾಲದಿಂದ ಕಾರ್ಮಿಕ ಇಲಾಖೆಯನ್ನು ಹೀಗೂ ಮಾಡಬಹುದು ಎಂದು ತೋರಿಸಿಕೊಟ್ಟ ಶಿವರಾಮ ಹೆಬ್ಬಾರ್ ಹಾಗೂ ಹಳ್ಳಿ ಹಳ್ಳಿಯಲ್ಲಿ ಮೊಬೈಲ್ ಟವರ್ ತಂದು ಅನಂತ ಕುಮಾರ ಹೆಗಡೆ ಅಭಿವೃದ್ಧಿ ಬಗ್ಗೆ ಚಿಂತನ ಮಾಡಿದರು ಎಂದರು.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದಲ್ಲಿ ಕಣ್ಣುರೆಸುವ ಯಾವುದೇ ತಂತ್ರವೂ ನಡೆದಿಲ್ಲ, ಖಂಡಿತವಾಗಿ ಅದನ್ನು ಮಾಡುತ್ತೇವೆ, ಟಿಕೆಟ್ ಆಕಾಂಕ್ಷಿಗಳು ಪ್ರಜಾಪ್ರಭುತ್ವದ ವ್ಯವಸ್ಥೆಯಂತೆ ಟಿಕೆಟ್ ಕೇಳಿದ್ರು, ಆದರೆ ಈಗ ಎಲ್ಲರೂ ನನ್ನನ್ನು ಬೆಂಬಲಿಸುವುದಾಗಿ ತಿಳಿಸಿದ್ದಾರೆ ಎಂದು ಅವರು ತಿಳಿಸಿದರು.
ಬಿಜೆಪಿ ಮಂಡಲದ ಅಧ್ಯಕ್ಷ ಹೇಮಂತಕುಮಾರ ಗಾಂವ್ಕರ್ ಪ್ರಾಸ್ಥಾವಿಕವಾಗಿ ಮಾತನಾಡುತ್ತಾ ನರೇಂದ್ರ ಮೋದಿ ಸರ್ಕಾರದಲ್ಲಿ ಬಿಡುಗಡೆಯಾದ ನೂರು ರೂಪಾಯಿಯನ್ನೂ ಜನರಿಗೆ ತಲುಪಿಸುವ ಕೆಲಸ ಮಾಡಿದೆ. ಬ್ರಷ್ಟಾಚಾರವನ್ನು ಹುಟ್ಟುಹಾಕಿದ್ದವರು ನೀವು ಎಂದು ಕಾಂಗ್ರೆಸ್ ಗೆ ಟಾಂಗ್ ನೀಡಿದರು. 40% ಕಮೀಷನ್ ಎಂಬುದು ನಿಮ್ಮಲ್ಲಿ ಮಾತ್ರ ಉಳಿದಿದ್ದು ಎಂದರು.
ಬಿಜೆಪಿ ಪದಾಧಿಕಾರಿಗಳಾದ ಡಾ. ಜಿ.ಜಿ ಹೆಗಡೆ ಅನುರಾಧಾ ಬಾಳೇರಿ, ಅಶೋಕ ಪ್ರಭು, ಕುಮಾರ ಮಾರ್ಕಾಂಡೆ, ಜಿ.ಎಸ್ ಗುನಗಾ, ಮದನ ನಾಯಕ, ಶಿವಾನಿ ಶಾಂತಾರಾಮ, ಆನಂದು ಕವರಿ, ವಿನಾಯಕ ನಾಯ್ಕ, ಜಿ.ಐ ಹೆಗಡೆ, ಮಂಜುನಾಥ ಮುಕ್ರಿ, ಮೋಹಿನಿ ಗೌಡ ಹಾಗೂ ಇನ್ನಿತರರು ಹಾಜರಿದ್ದರು.