ಕುಮಟಾ : ಬಹು ನಿರೀಕ್ಷೆಯ ಕುಮಟಾ ಕಾಂಗ್ರೆಸ್ ಟಿಕೆಟ್ ನಿವೇದಿತ ಆಳ್ವಾ ಪಾಲಾಗಿದೆ. ಹಲವಾರು ಚರ್ಚೆಯ ನಂತರದಲ್ಲಿ ಇದೀಗ ಟಿಕೆಟ್ ಘೋಷಣೆಯಾಗಿದೆ. ಕಾಂಗ್ರೆಸ್ ಮೂರನೇ ಪಟ್ಟಿ ಬಿಡುಗಡೆಯಾಗಿದೆ. ರಾಜ್ಯ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ ಮೂರನೇ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ. ಕಾಂಗ್ರೆಸ್ 58 ಕ್ಷೇತ್ರಗಳಲ್ಲಿ ಟಿಕೆಟ್ ಬಾಕಿ ಇರಿಸಿಕೊಂಡಿತ್ತು. ಇದರಲ್ಲಿ 43 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಲಾಗಿದ. ಕೋಲಾರದಿಂದ ಸಿದ್ಧರಾಮಯ್ಯಗೆ ಟಿಕೆಟ್ ನಿರಾಕರಿಸಲಾಗಿದೆ.
ತೇರದಾಳ ಕ್ಷೇತ್ರದಿಂದ ಟಿಕೆಟ್ ನಿರೀಕ್ಷೆ ಇಟ್ಟಿದ್ದ ನಟಿ ಉಮಾಶ್ರೀಗೆ ನಿರಾಸೆಯಾಗಿದ್ದು, ಅಲ್ಲಿಂದ ಸಿದ್ಧಪ್ಪ ರಾಮಪ್ಪ ಕೊಣ್ಣೂರುಗೆ ಟಿಕೆಟ್ ನೀಡಲಾಗಿದೆ. ಮದ್ದೂರಿನಲ್ಲಿ ರಮ್ಯಾಗೆ ಟಿಕೆಟ್ ನೀಡುತ್ತಾರೆ ಎನ್ನುವ ನಿರೀಕ್ಷೆ ಇದ್ದರೂ, ಅಲ್ಲಿಂದ ಕೆಎಂ ಉದಯ್ ಅವರಿಗೆ ನೀಡಲಾಗಿದೆ. ತರಿಕೇರೆಯಲ್ಲಿ ಜಿಎಚ್ ಶ್ರೀನಿವಾಸ್‌ಗೆ ಟಿಕೆಟ್ ನೀಡಲಾಗಿದೆ. ಭಾರೀ ಬಂಡಾಯದ ನಡುವೆಯೂ ಮಾಜಿ ರಾಜ್ಯಪಾಲೆ ಮಾರ್ಗೆರೇಟ್ ಆಳ್ವಾ ಅವರ ಪುತ್ರ ನಿವೇದಿತಾ ಆಳ್ವಾಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ. ಮಂಗಳೂರು ದಕ್ಷಿಣ ಕ್ಷೇತ್ರದಿಂದ ಜಾನ್ ರಿಚರ್ಡ್ ಲೋಬೋ ಅವರಿಗೆ ಟಿಕೆಟ್ ಘೋಷಣೆಯಾಗಿದೆ.
ಬಾಕಿ ಇರಿಸಿಕೊಂಡಿದ್ದ 58 ಕ್ಷೇತ್ರಗಳ ಪೈಕಿ 43 ಕ್ಷೇತ್ರಗಳಿಗೆ ಮೂರನೇ ಪಟ್ಟಿಯಲ್ಲಿ ಟಿಕೆಟ್ ಘೋಷಣೆಯಾಗಿದ್ದು, ಇನ್ನೂ 15 ಕ್ಷೇತ್ರಗಳಲ್ಲಿ ಟಿಕೆಟ್ ಬಾಕಿ ಇರಿಸಿಕೊಳ್ಳಲಾಗಿದೆ. ಅಖಂಡ ಶ್ರೀನಿವಾಸ್ ಮೂರ್ತಿಗೆ ಇನ್ನೂ ಟಿಕೆಟ್ ಘೋಷಣೆಯಾಗಿಲ್ಲ. ಹರಿಹರದಲ್ಲಿ ರಾಮಪ್ಪ ಅವರಿಗೂ ಮೂರನೇ ಪಟ್ಟಿಯಲ್ಲಿ ಟಿಕೆಟ್ ಘೋಷಣೆ ಮಾಡಿಲ್ಲ. ಕೋಲಾರ ಕ್ಷೇತ್ರದಿಂದ ಭಾರೀ ನಿರೀಕಷೆ ಹುಟ್ಟಿಸಿದ್ದ ಸಿದ್ಧರಾಮಯ್ಯ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿಲ್ಲ. ಕೋಲಾರದಿಂದ ಕೊತ್ತೂರು ಜಿ ಮಂಜುನಾಥ್‌ಗೆ ಟಿಕೆಟ್ ನೀಡಲಾಗಿದೆ.
ಕಾಂಗ್ರೆಸ್ ಹಿರಿಯ ನಾಯಕಿ ಮೋಟಮ್ಮ ಅವರ ಪುತ್ರಿ ನಯನ ಮೋಟಮ್ಮ ಅವರಿಗೆ ಮೂಡಿಗೆರೆ ಮೀಸಲು ಕ್ಷೇತ್ರದ ಟಿಕೆಟ್ ಘೋಷಣೆಯಾಗಿದೆ. ಶಿಕಾರಿಪುರದಿಂದ ಕುರುಬ ಸಮುದಾಯದಿಂದ ಜಿಬಿ ಮಾಲತೇಶ್ ಅವರಿಗೆ ಟಿಕೆಟ್ ನೀಡಲಾಗಿದ್ದರೆ, ಶಿವಮೊಗ್ಗ ನಗರದಿಂದ ಎಸ್‌ಸಿ ಯೋಗೇಶ್ ಅವರಿಗೆ ಟಿಕೆಟ್ ನೀಡಲಾಗಿದೆ. ಇನ್ನು ನಿರೀಕ್ಷೆಯಂತೆ ಅರಸೀಕೆರೆ ಟಿಕೆಟ್‌ಅನ್ನು ಶಿವಲಿಂಗೇಗೌಡರಿಗೆ ನೀಡಲಾಗಿದೆ. ದೇವರ ಹಿಪ್ಪರಿಗೆಯಲ್ಲಿ ಎಸ್‌ಆರ್ ಪಾಟೀಲ್‌ಗೆ ಟಿಕೆಟ್ ಘೋಷಣೆ ಮಾಡಲಾಗಿಲ್ಲ. ಹಾಲಿ ಶಾಸಕಿ ಕುಸುಮಾ ಶಿವಳ್ಳಿಗೆ ಕುಂದಗೋಳದಿಂದ ಟಿಕೆಟ್ ನೀಡಲಾಗಿದೆ. ಪುತ್ತೂರಿನಲ್ಲಿ ಶಕುಂತಲಾ ಶೆಟ್ಟಿಗೆ ಟಿಕೆಟ್ ಮಿಸ್ ಆಗಿದ್ದು, ಅಶೋಕ್ ರೈಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಬೊಮ್ಮನಹಳ್ಳಿ ಕ್ಷೇತ್ರದಿಂದ ನಿರೀಕ್ಷೆಯಂತೆ ಚಿತ್ರ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡಗೆ ಟಿಕೆಟ್ ನೀಡಲಾಗಿದೆ.
ಕಾಂಗ್ರೆಸ್ ಮೂರನೇ ಪಟ್ಟಿಯಲ್ಲೂ ಮಂಗಳೂರು ಉತ್ತರ ಕ್ಷೇತ್ರ ಕಗ್ಗಂಟಾಗಿಯೇ ಉಳಿದಿದೆ. ಇಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿ ಬಣದ ಅಭ್ಯರ್ಥಿಗಳ ಮಧ್ಯೆ ಬಿಗ್ ಫೈಟ್ ಸಿದ್ದು ಬಣದ ಮೊಯಿದ್ದೀನ್ ಬಾವಾ, ಡಿಕೆಶಿ ಬಣದ ಇನಾಯತ್ ಆಲಿ ಇಲ್ಲಿ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ಇಬ್ಬರು ಅಭ್ಯರ್ಥಿಗಳ ಮಧ್ಯೆ ಟಿಕೆಟ್ ಹಂಚಿಕೆ ಗೊಂದಲವಿದೆ. ಮಾಜಿ ಶಾಸಕನಿಗೆ ನೀಡಬೇಕಾ? ಅಥವಾ ಹೊಸ ಅಭ್ಯರ್ಥಿಗೆ ನೀಡಬೇಕಾ ಅನ್ನೋ ಗೊಂದಲ ಇನ್ನೂ ಮುಂದುವರಿದಿದದೆ. ಹೈಕಮಾಂಡ್ ಮಟ್ಟದಲ್ಲೂ ಈ ಕ್ಷೇತ್ರದ ಟಿಕೆಟ್ ಹಂಚಿಕೆ ಭಾರೀ ಕಗ್ಗಂಟಾಗಿದೆ. ಟಿಕೆಟ್ ಹಂಚಿಕೆಯಾದ್ರೆ ಅಸಮಾಧಾನ ಸ್ಪೋಟ ಸಾಧ್ಯತೆ ಇದೆ. ಹೀಗಾಗಿ ಮೂರನೇ ಪಟ್ಟಿಯಲ್ಲೂ ಉತ್ತರ ಕ್ಷೇತ್ರದ ಟಿಕೆಟ್ ಹಂಚಿಕೆ ಮಾಡಲಾಗಿಲ್ಲ.