ಶಿರಸಿ : ವಿಧಾನ ಸಭೆ ಚುನಾವಣೆಗೆ ಭಾರತೀಯ ಜನತಾ ಪಾರ್ಟಿ ಟಿಕೆಟ್ ತಪ್ಪಿದ್ದರಿಂದ ತೀವ್ರ ಬೇಸರಗೊಂಡಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದಾರೆ. ಶನಿವಾರ ತಡರಾತ್ರಿ ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಪ್ರಹ್ಲಾದ ಜೋಶಿ ಮತ್ತು ಮುಖ್ಯಮಂತ್ರಿ ಬಸವರಾ ಬೊಮ್ಮಾಯಿ ಸಂದಾನ ಯತ್ನ ನಡೆಸಿದ ಬಳಿಕ ಶೆಟ್ಟರ್ ತಮ್ಮ ರಾಜಿನಾಮೆ ನಿರ್ಧಾರ ಪ್ರಕಟಿಸಿದರು.
ಭಾನುವಾರ ಶಿರಸಿ ಬಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ರಾಜಿನಾಮೆ ಸಲ್ಲಿಸಿದರು. ಬಿಜೆಪಿ ಟಿಕೆಟ್ ಇಲ್ಲ ಎನ್ನುವ ಹೈಕಮಾಂಡ್ ಸಂದೇಶದಿಂದ ತೀವ್ರ ಆಘಾತಗೊಂಡಿದ್ದ ಜಗದೀಶ ಶೆಟ್ಟರ್ ನಂತರ ದೆಹಲಿವರೆಗೂ ಹೋಗಿ ಪ್ರಯತ್ನ ನಡೆಸಿದ್ದರು. ಇನ್ನೂ 10 ವರ್ಷಗಳ ಕಾಲ ಸಕ್ರೀಯ ರಾಜಕಾರಣ ಮಾಡಲು ಅವಕಾಶ ನೀಡುವಂತೆ ಪರಿ ಪರಿಯಾಗಿ ಕೇಳಿಕೊಂಡಿದ್ದರು.
ಆದರೆ ಅವರು ಕೋರಿಕೆಗೆ ಹೈಕಮಾಂಡ್ ಒಪ್ಪಿರಲಿಲ್ಲ. ಇದರಿಂದ ತೀವ್ರ ಮನನೊಂದಿದ್ದರು.
ಜಗದೀಶ್ ಶೆಟ್ಟರ್ ಗೆ ಕಾಂಗ್ರೆಸ್ ಸ್ವಾಗತ ಕೋರಿದೆ. ಹುಬ್ಬಳ್ಳಿ – ಧಾರವಾಡ ಸೆಂಟ್ರಲ್ ಕ್ಷೇತ್ರದ ಟಿಕೆಟ್ ಘೋಷಿಸದೆ ಕಾಂಗ್ರೆಸ್ ಖಾಲಿ ಇರಿಸಿದೆ. ಜಗದೀಶ್ ಶೆಟ್ಟರ್ ಅನ್ಯ ಪಕ್ಷ ಸೇರುತ್ತಾರಾ ಅಥವಾ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರಾ ಕಾದು ನೋಡಬೇಕಿದೆ.