ಕುಮಟಾ : ಎಲ್ಲಿ ನೋಡಿದರೂ ರಾರಾಜಿಸಿದ ಕಮಲ ಧ್ವಜ, ಸಹಸ್ರಾರು ಸಂಖ್ಯೆಯಲ್ಲಿ ಸೇರಿದ ಅಪಾರ ಅಭಿಮಾನಿಗಳು ಬಿಜೆಪಿ ಧ್ವಜ ಹಿಡಿದು ಭಾರತ್ ಮಾತಾಕಿ ಜೈ, ಬಿಜೆಪಿಗೆ ಜಯವಾಗಲಿ, ದಿನಕರ ಶೆಟ್ಟಿ ಅವರಿಗೆ ಜಯವಾಗಲಿ, ಬೇಕೆ ಬೇಕು ಬಿಜೆಪಿ ಬೇಕು ಎಂಬ ಜಯಘೋಷಗಳು, ರಾಷ್ಟ್ರೀಯ ಹೆದ್ದಾರಿಯಲ್ಲಿ ಎಲ್ಲಿ ನೋಡಿದರೂ ಜನ ಸಾಗರ ಇದು ಕಂಡು ಬಂದಿದ್ದು ಕುಮಟಾದಲ್ಲಿ.
ಕುಮಟಾ – ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದಿನಕರ ಕೆ ಶೆಟ್ಟಿಯವರ ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಎಲ್ಲೆಲ್ಲಿಯೂ ಕೇಸರಿಪಡೆಗಳಲ್ಲದೇ ಕಾರುಬಾರು. ತಾಲೂಕಿನ ಹೆಗಡೆ ಕ್ರಾಸ್ ಸಮೀಪದಲ್ಲಿರುವ ಬಿಜೆಪಿ ಕಾರ್ಯಾಲಯದಿಂದ ನೆಲ್ಲಿಕೇರಿ ಗುಂಟ ಗಿಬ್ ಕ್ರಾಸ್ ಮಾರ್ಗವಾಗಿ ನಾಮಪತ್ರ ಸಲ್ಲಿಕೆಗೆ ಆಗಮಿಸಿದ ದಿನಕರ ಶೆಟ್ಟಯವರ ರ್ಯಾಲಿ ಎಲ್ಲರ ಹುಬ್ಬೇರುವಂತೆ ಮಾಡಿತ್ತು.
ನಾಮಪತ್ರ ಸಲ್ಲಿಕೆಗೆ ಆಗಮಿಸುತ್ತಿರುವ ದಿನಕರ ಶೆಟ್ಟಿ ಅವರನ್ನು ಕೆಲ ಕಾರ್ಯಕರ್ತರು ಹೆಗಲ ಮೇಲೆ ಹೊತ್ತು, ಹೂವಿನ ಹಾರ ಹಾಕಿ ಮೆರವಣಿಗೆ ಮಾಡಿದರು. ಸುಡು ಬಿಸಿಲಿನಲ್ಲಿ ಸೇರಿದ್ದ ಸಾಗರೋಪಾದಿಯ ಜನ ಸಮುದಾಯದ ನಡುವೆ ಕಾರ್ಯಕರ್ತರತ್ತ ಕೈಬಿಸುತ್ತಾ, ವಿಜಯದ ಚಿಹ್ನೆಯನ್ನು ತೋರಿಸುತ್ತಾ ದಿನಕರ ಶೆಟ್ಟಿ, ಸ್ಪೀಕರ್ ಕಾಗೇರಿ ಹಾಗೂ ಗೋವಾ ವಾಸ್ಕೋದ ಶಾಸಕ ಕೃಷ್ಣ ಸಾಲ್ಕರ್ ಹೆಜ್ಜೆ ಹಾಕುತ್ತಿದ್ದರೆ ಜನರ ಜೈಕಾರ ಮುಗಿಲು ಮುಟ್ಟಿತ್ತು.
ಉಪವಿಭಾಗಾಧಿಕಾರಿಗಳ ಕಛೇರಿಯಿಂದ 100 ಮೀ ಅಂತರದಲ್ಲಿ ಬ್ಯಾರಿಕೇಡ್ ಅಳವಡಿಸಿ ಜನರನ್ನು ನಿಲ್ಲಿಸಲಾಗಿತ್ತು. ದಿನಕರ ಶೆಟ್ಟಿ ನಾಮಪತ್ರ ಸಲ್ಲಿಸಿ ವಾಪಸ್ಸಾಗುವ ವರೆಗೂ ಅಭಿಮಾನಿಗಳು ತಾಳ್ಮೆಯಿಂದ ಕಾದು ಶೆಟ್ಟಿಯವರು ವಾಪಸ್ಸಾಗುತ್ತಿದ್ದಂತೆ ಮತ್ತೆ ಜಯಘೋಷಗಳನ್ನು ಹಾಕಿದರು.
ಪ್ರೀತಿ ಹಾಗೂ ಅಭಿಮಾನದಿಂದ ನಮ್ಮೊಂದಿಗಿರುವ ಎಲ್ಲಾ ಜನರ ಬೆಂಬಲ ಈ ಮಟ್ಟಿಗೆ ನನ್ನ ಮೇಲಿರುವುದು ನಿಜಕ್ಕೂ ಸಂತಸ ತಂದಿದೆ ಎಂದು ದಿನಕರ ಶೆಟ್ಟಿ ಭಾವುಕವಾಗಿ ಮಾತನಾಡಿದರೆ, ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಇಲ್ಲಿ ಸೇರಿರುವ ಜನರನ್ನು ನೋಡಿದರೆ ಅತ್ಯಂತ ಸಂತೋಷವಾಗುತ್ತದೆ. ದಿನಕರ ಶೆಟ್ಟಿ ಅವರ ಮೇಲೆ ನೀವಿಟ್ಟ ನಂಬಿಕೆ ಎಂದು ಹುಸಿಯಾಗುವುದಿಲ್ಲ. ಈ ಬಾರಿ ಅವರನ್ನು ಹಿಂದಿನಂತೆ ಅಮೋಘ ಬಹುಮತದಿಂದ ಆರಿಸಿತರುವುದು ನಿಮ್ಮೆಲ್ಲರ ಕರ್ತವ್ಯ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯ್ಕ, ಹಾಲಕ್ಕಿ ಪ್ರಮುಖ ಗೋವಿಂದ ಗೌಡ, ಎಂ.ಜಿ ಭಟ್ಟ, ಪರಮೇಶ್ವರ ನಾಯ್ಕ, ಉಮೇಶ ನಾಯ್ಕ, ಪತ್ನಿ ಉಷಾ ದಿನಕರ ಶೆಟ್ಟಿ ಇತರರು ಹಾಜರಿದ್ದರು.
ನನ್ನ ಅವಧಿಯಲ್ಲಿ ಎಲ್ಲಿಯೂ ಗೂಂಡಾಗಿರಿ ಆಗಿಲ್ಲ : ದಿನಕರ ಶೆಟ್ಟಿ.
ನನ್ನ ಅವಧಿಯಲ್ಲಿ ಎಲ್ಲಿಯೂ ಗೂಂಡಾಗಿರಿಯಾಗಿಲ್ಲ, ಯಾರ ಮನೆಗೂ ಕಲ್ಲು ಹೊಡೆದು ಜೈಲಿಗೆ ಹೋಗುವ ಕೆಲಸ ನಮ್ಮ ಪಕ್ಷದಿಂದಾಗಲೀ, ಕಾರ್ಯಕರ್ತರಿಂದಾಗಲೀ ಆಗಿಲ್ಲ ಎಂದು ಕುಮಟಾ – ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದಿನಕರ ಕೆ. ಶೆಟ್ಟಿ ಹೇಳಿದರು. ಅವರು ಸೋಮವಾರ ನಾಮಪತ್ರ ಸಲ್ಲಿಸಿ ಮಾಧ್ಯಮದವರ ಜೊತೆ ಮಾತನಾಡಿದರು.
ಈ ಹಿಂದಿನ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರು ಯಾವುದೇ ತಾರತಮ್ಯ ಮಾಡದೆ ತನ್ನ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡಿದ್ದಾರೆ, ನನ್ನ ಅವಧಿಯಲ್ಲಿ ಒಳ್ಳೆಯ ಕೆಲಸ ಮಾಡಿದ ಬಗ್ಗೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮೂರನೇ ಬಾರಿಗೆ ಗೆಲ್ಲುವ ವಿಶ್ವಾಸದೊಂದಿಗೆ ನಾಮಪತ್ರ ಸಲ್ಲಿಸಿದ್ದೇನೆ ಎಂದರು.
ಎಲ್ಲಡೆಯಲ್ಲಿಯೂ ಪ್ರಧಾನಿ ಮೋದಿಯವರ ಬಗ್ಗೆ ಅಪಾರ ಬೆಂಬಲ ವ್ಯಕ್ತವಾಗುತ್ತಿದೆ. ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಪ್ರಧಾನಿಯವರು ರಷ್ಯಾದ ಅಧ್ಯಕ್ಷರ ಜೊತೆ ಮಾತನಾಡಿ ಹಿಂದು ಮುಸ್ಲಿಂ, ಕ್ರಿಷ್ಚಿಯನ್ ಬೇಧವಿಲ್ಲದೆ ಎಲ್ಲಾ ಭಾರತೀಯ ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆತಂದರು ಇದು ಮೋದಿಯವರ ತಾಕತ್ತು ಎಂದು ಬಣ್ಣಿಸಿದ ಅವರು, ಮೋದಿಯವರನ್ನು ನೋಡಿ ಮತ ನೀಡುವುದಾಗಿ ಜನ ಹೇಳುತ್ತಿದ್ದಾರೆ ಎಂದರು.
ನಾನು ಜನರಿಗೆ ಉಪಕಾರ ಮಾಡದಿದ್ದರೂ ಉಪದ್ರವ ಮಾಡಿಲ್ಲ ಎಂಬುದಾಗಿ ಉಲ್ಲೇಖಿಸಿದ ಅವರು, ಈ ಬಾರಿ ಕಮಲದ ಚಿನ್ಹೆಯನ್ನು ಮತ್ತೆ ಅರಳಿಸುವ ಕಾರ್ಯವನ್ನು ಕಾರ್ಯಕರ್ತರು ಮಾಡಲಿದ್ದಾರೆ. ಅದಕ್ಕೆ ಇಂದು ಸೇರಿದ ಜನರೇ ಸಾಕ್ಷಿ ಎಂದರು. ಬಸವರಾಜ ಬೊಮ್ಮಾಯಿ, ಯಡ್ಯೂರಪ್ಪ, ಶೋಭಾ ಕರಂದ್ಲಾಜೆ ಇನ್ನಿತರ ಸ್ಟಾರ್ ಪ್ರಚಾರಕರು ಮುಂದಿನ ದಿನದಲ್ಲಿ ಬರಲಿದ್ದಾರೆ ಎಂದರು.