ಕುಮಟಾ : ತಾಲೂಕಿನ ಧಾರೇಶ್ವರದ ಹಲವು ಯುವಕರು ಇಂದು ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಯಾದರು. ಕುಮಟಾ ಮಂಡಲ ಬಿಜೆಪಿ ಅಧ್ಯಕ್ಷ ಹೇಮಂತಕುಮಾರ ಗಾಂವಕರ ಹಾಗೂ ಪಕ್ಷದ ಅಭ್ಯರ್ಥಿ ದಿನಕರ ಶೆಟ್ಟಿ ಅವರು ಪಕ್ಷದ ಶಾಲು ಹಾಕಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಧಾರೇಶ್ವರದ ವಿಕ್ರಮ ಮಂಜುನಾಥ ಹರಿಕಾಂತ, ವಿನಾಯಕ ಗಣಪತಿ ಹರಿಕಾಂತ, ಕನಕ ನಾಯ್ಕ, ವಿಘ್ನೇಶ್ವರ ಗಣಪತಿ ಹರಿಕಾಂತ, ಶಶಿಧರ ಮಂಜುನಾಥ ಹರಿಕಾಂತ, ಸುನಿಲ್ ವಿ. ನಾಯ್ಕ, ಸುನೀಲ್ ವಾಮನ ಹರಿಕಾಂತ, ಕೃಷ್ಣ ಗೋಪಾಲ ಹರಿಕಾಂತ ಹಾಗೂ ಇತರರು ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ವಿಕ್ರಮ್ ಹರಿಕಾಂತ ಅವರು ಮಾತನಾಡಿ “ನರೇಂದ್ರ ಮೋದೀಜಿಯವರ ನೇತೃತ್ವದಲ್ಲಿ ಇಂದು ನಮ್ಮ ದೇಶ ವಿಶ್ವಗುರು ಆಗುವತ್ತ ದಾಪುಗಾಲಿಡುತ್ತಿದೆ. ನಮ್ಮೆಲ್ಲರ ಆದರ್ಶ ನಾಯಕ ನರೇಂದ್ರ ಮೋದಿಯವರು. ರಾಜ್ಯದಲ್ಲಿಯೂ ಬಿಜೆಪಿ ಸರ್ಕಾರದಿಂದ ಅತ್ಯುತ್ತಮ ಕಾರ್ಯಗಳು ನೆರವೇರಿವೆ. ಶಾಸಕರಾದ ದಿನಕರ ಶೆಟ್ಟಿಯವರು ನಮ್ಮ ಧಾರೇಶ್ವರ ಗ್ರಾಮದ ಅಭಿವೃದ್ಧಿಗೆ ಸಾಕಷ್ಟು ಅನುದಾನ ಒದಗಿಸಿದ್ದಾರೆ. ಸಮಾಜದ ಎಲ್ಲ ವರ್ಗದವರ ಹಿತಾಸಕ್ತಿಗಳನ್ನು ರಕ್ಷಿಸುವ ಕಾರ್ಯ ಬಿಜೆಪಿಯಿಂದ ಮಾತ್ರ ಸಾಧ್ಯ. ಈ ಎಲ್ಲ ಕಾರಣಗಳಿಂದ ಆಕರ್ಷಿತರಾಗಿರುವ ನಾವು ಬಿಜೆಪಿಯ ಕಾರ್ಯಕರ್ತರಾಗಿ ಸೇವೆಸಲ್ಲಿಸಲು ಉತ್ಸುಕರಾಗಿದ್ದೇವೆ. ನಮ್ಮ ಭಾಗದ ಇನ್ನೂ ಹೆಚ್ಚು ಯುವಕರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ” ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಪ್ರಶಾಂತ ನಾಯ್ಕ, ಕೆ. ಡಿ. ಸಿ. ಸಿ. ನಿರ್ದೇಶಕ ಗಜಾನನ ಪೈ ಇನ್ನಿತರರು ಇದ್ದರು.