ಕುಮಟಾ : ದಿನೇದಿನೇ ಚುನಾವಣಾ ಕಣ ರಂಗೇರಿತಿದ್ದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗಳು ಹಾಗೂ ಪರಸ್ಪರ ಒಬ್ಬರಿಗೊಬ್ಬರು ಬೆಂಬಲ ಸೂಚಿಸುವ ಪ್ರಕ್ರಿಯೆಗಳು ಮುಂದುವರೆದಿದೆ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದ ಇಂದು ಕಾಂಗ್ರೆಸ್ ಗೆ ಬಂಡಾಯ ಸಾರಿದ್ದ ಶಿವಾನಂದ ಹೆಗಡೆ ಕಡತೋಕಾ ನಾಮಪತ್ರ ಸಲ್ಲಿಸುವುದಾಗಿ ಘೋಷಣೆ ಮಾಡಿದ್ದರು. ಆದರೆ ತಮ್ಮ ನಿರ್ಧಾರವನ್ನು ಬದಲಾಯಿಸಿರುವ ಅವರು ಇಂದು ನಾಮಪತ್ರ ಸಲ್ಲಿಸದೆ ಪಕ್ಷೇತರ ಅಭ್ಯರ್ಥಿ ಶಾರದಾ ಶೆಟ್ಟಿಗೆ ಬೆಂಬಲ ಸೂಚಿಸಲಿದ್ದಾರೆ.
ಇಂದು ಶಾರದಾ ಶೆಟ್ಟಿಯವರು ಉಪವಿಭಾಗಾಧಿಕಾರಿಗಳಿಗೆ ಮತ್ತೊಮ್ಮೆ ತಮ್ಮ ಉಮೇದುವಾರಿಕೆ ಸಲ್ಲಿಸುವ ಸಂದರ್ಭದಲ್ಲಿ ಶಿವಾನಂದ ಹೆಗಡೆಯವರು ಜೊತೆಯಾಗಿ ಬೆಂಬಲ ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಿವಾನಂದ ಹೆಗಡೆ ಕಡತೋಕಾ ಕುಮಟಾದಲ್ಲಿ ಕಾಂಗ್ರೆಸ್ ಹೊರಗಿನ ಅಭ್ಯರ್ಥಿಯನ್ನು ತಂದು ನಮ್ಮ ಮೇಲೆ ಹೇರಲು ಹೊರಟಿದೆ. ಇದರಿಂದ ಕಾರ್ಯಕರ್ತರಿಗೆ ಅನ್ಯಾಯವಾಗಿದೆ. ಹೀಗಾಗಿ ಸ್ವಾಭಿಮಾನಿ ಎಲ್ಲಾ ಕಾರ್ಯಕರ್ತರು ಒಂದಾಗಿ ಶಾರದಾ ಶೆಟ್ಟಿ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಿಸುತ್ತಿದ್ದೇವೆ ಎಂದರು. 12 ಜನ ನಿಮ್ಮ ಪಕ್ಷದ ಮುಖಂಡರು ನಿವೇದಿತಾಳ್ವ ಜೊತೆಗಿದ್ದು ನಿಮಗೆ ಗೆಲುವು ಸಾಧ್ಯವಾಗುವುದೇ? ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಮುಖಂಡರು ಆ ಕಡೆಗೆ ಇರಬಹುದು ಆದರೆ ಕಾರ್ಯಕರ್ತರು ನಮ್ಮ ಜೊತೆಗಿದ್ದಾರೆ ಹೀಗಾಗಿ ಶಾರದಾ ಶೆಟ್ಟಿ ಅವರ ಗೆಲುವು ನಿಶ್ಚಿತ ಎಂದರು. ಅದಲ್ಲದೆ ಕಾಂಗ್ರೆಸ್ ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡುವುದಾಗಿ ಅವರು ಘೋಷಿಸಿದರು.
ಮತ್ತೊಮ್ಮೆ ಉಮೇದುವಾರಿಕೆ ಸಲ್ಲಿಸಿ ಮಾತನಾಡಿದ ಮಾಜಿ ಶಾಸಕಿ ಶಾರದಾ ಶೆಟ್ಟಿ ನಾವು ನಿರಂತರವಾಗಿ ಪಕ್ಷವೆಂದು ದುಡಿಯುತ್ತ ಬಂದಿದ್ದೇವೆ. ಮೋಹನ್ ಶೆಟ್ಟಿ ಅವರ ಕಾಲದಿಂದ ಪಕ್ಷಕ್ಕಾಗಿ ದುಡಿದಿದ್ದೇವೆ. ಈ ಬಾರಿ ಅಭ್ಯರ್ಥಿ ಘೋಷಣೆಯಲ್ಲಿ ನನಗೆ ಅನ್ಯಾಯವಾಗಿದೆ. ಮೂರನೇ ಪಟ್ಟಿಯಲ್ಲಾದರೂ ತನ್ನ ಹೆಸರು ಘೋಷಣೆಯಾಗುವ ನಿರೀಕ್ಷೆಯಿತ್ತಾದರೂ, ನನ್ನ ಹೆಸರೇ ಇಲ್ಲದಂತೆ ಮಾಡಿದರು. ಇದರಿಂದ ಮೂರು ಬಾರಿ ಕಾರ್ಯಕರ್ತರ ಸಭೆ ಮಾಡಲಾಯಿತು, ಕಾರ್ಯಕರ್ತರ ಒತ್ತಾಸೆಯಂತೆ ಪಕ್ಷೇತರ ಅಭ್ಯರ್ಥಿಯಾಗಿ ನಿಂತಿದ್ದೇನೆ, ಶಿವಾನಂದ ಹೆಗಡೆಯವರ ಸಹಕಾರ ಸಿಕ್ಕಿದೆ ಎಂದರು.
ಈ ಸಂದರ್ಭದಲ್ಲಿ ಶಿವರಾಂ ಹರಿಕಂತ್ರ ಯಾಸೀನ್ ಸಾಬ್ ಮಾರುತಿ ಗೌಡ ಹಾಗೂ ವಿನು ಜಾರ್ಜ್, ರವಿಕುಮಾರ ಶೆಟ್ಟಿ, ವಿ.ಎಲ್ ನಾಯ್ಕ, ಕೃಷ್ಣಾನಂದ ವರ್ಣೇಕರ್ ಇತರರು ಹಾಜರಿದ್ದರು. ಕಾಂಗ್ರೆಸ್ ನ ಇಬ್ಬರೂ ಆಕಾಂಕ್ಷಿಗಳು ಬಂಡಾಯದ ಬಾವುಟ ಬೀಸಿ, ಒಂದಾಗಿ ಇದೀಗ ಚುನಾವಣಾ ಕಣದ ರಂಗು ಹೆಚ್ಚಿಸಿದ್ದಾರೆ.