ಕನ್ನಡದ ಕೆಲವು ಸಿನಿಮಾ ಮತ್ತು ಸೀರಿಯಲ್ಗಳಲ್ಲಿ ನಟಿಸಿದ್ದ ಸಂಪತ್ ಜಯರಾಮ್ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ನಿಧನದ ಸುದ್ದಿ ತಿಳಿದು ಅನೇಕ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ. ಕಿರುತೆರೆ ಮತ್ತು ಹಿರಿತೆರೆಯಲ್ಲಿ ಸಂಪತ್ ಜಯರಾಮ್ ತೊಡಗಿಕೊಂಡಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಸೂಕ್ತ ಅವಕಾಶ ಇಲ್ಲದೇ ಕಂಗಾಲಾಗಿದ್ದರು ಎನ್ನಲಾಗಿದೆ. ಶನಿವಾರ ನೆಲಮಂಗಲದಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸಂಪತ್ ಅವರಿಗೆ 35 ವರ್ಷ ವಯಸ್ಸಾಗಿತ್ತು. ಇತ್ತೀಚೆಗಷ್ಟೇ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಒಂದು ವರ್ಷದ ಹಿಂದೆ ಮದುವೆ ಆಗಿದ್ದ ಅವರು ಈಗ ಇಹಲೋಕ ತ್ಯಜಿಸಿರುವುದು ಅವರ ಆಪ್ತರಿಗೆ ತೀವ್ರ ನೋವು ಉಂಟುಮಾಡಿದೆ. ನೆಲಮಂಗಲದ ಆಸ್ಪತ್ರೆಯಿಂದ ಎನ್ಆರ್ ಪುರಕ್ಕೆ ಅವರ ಮೃತದೇಹ ರವಾನೆ ಆಗಲಿದೆ.
ಸಾವಿನ ಸುದ್ದಿ ತಿಳಿದು ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು, ಆಪ್ತ ಗೆಳೆಯರು ಕಂಬನಿ ಮಿಡಿದಿದ್ದಾರೆ. ಇತ್ತೀಚೆಗೆ ತೆರೆಕಂಡಿದ್ದ “ಬಾಲಾಜಿ ಫೋಟೊ ಸ್ಟುಡಿಯೋ’ ಸಿನಿಮಾದಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಅವರ ಅಭಿನಯದ ಕುರಿತು ಪತ್ರಕರ್ತ, ಸಿನಿಮಾ ವಿಮರ್ಶಕ ನವೀನ್ ಸಾಗರ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದು, “ಬಾಲಾಜಿ ಫೋಟೋ ಸ್ಟುಡಿಯೋ ಸಿನಿಮಾ ನೋಡಿದಾಗ ಹಾಗೂ ನೋಡಿ ಹೊರಬಂದಮೇಲೂ ಮನಸಲ್ಲಿ ಹೆಚ್ಚು ಉಳಿದಿದ್ದು ಈ ನಟ ಕನ್ನಡಕ್ಕೆ ಒಬ್ಬ ಗಟ್ಟಿ ವಿಲನ್ ಆಗಿ ರೂಪುಗೊಳ್ಳಬಹುದು. ಅಂಥ ಅವಕಾಶಗಳು ಸಿಗಲಿ ಎಂದು ಹಾರೈಸಿದ್ದೆ. ಆದರೆ ಬೆಳಬೆಳಗ್ಗೆ ಸಾವಿನ ಸುದ್ದಿ..’ ಎಂದು ಕಂಬನಿ ಮಿಡಿದಿದ್ದಾರೆ.