ಕುಮಟಾ : ಕುಮಟಾ ಪುರಸಭೆಗೆ ವಿಶೇಷ ಅನುದಾನವನ್ನು ಬಿಜೆಪಿ ಸರ್ಕಾರ ಒದಗಿಸಿದೆ, ಅಲ್ಲದೆ ಮಿನಿವಿಧಾನಸೌಧ, ಐ. ಟಿ. ಐ. ಕಾಲೇಜು, ಸರ್ಕಾರಿ ಪ್ರಥಮದರ್ಜೆ ಕಾಲೇಜು, ವಿದ್ಯಾರ್ಥಿಗಳ ವಸತಿನಿಲಯ ಸೇರಿದಂತೆ ಹಲವಾರು ಜನಪರ ಕಾರ್ಯಗಳು ನಮ್ಮ ಆಡಳಿತಾವಧಿಯಲ್ಲಿ ನೆರವೇರಿವೆ ಎಂದು ಕುಮಟಾ ಹೊನ್ನಾವರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ದಿನಕರ ಶೆಟ್ಟಿ ಹೇಳಿದರು. ಅವರು ಮಂಗಳವಾರ ಕುಮಟಾ ಪಟ್ಟಣದ ಉಪ್ಪಾರಕೇರಿಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಕಳೆದ ಐದು ವರ್ಷಗಳ ಅವಧಿಯಲ್ಲಿ ಕುಮಟಾ ಪುರಸಭಾ ವ್ಯಾಪ್ತಿಯಲ್ಲಿ ನೆರವೇರಿದ ಅಭಿವೃದ್ಧಿ ಕಾರ್ಯಗಳ ಕುರಿತು ವಿವರಿಸಿದ ಅವರು. ಹಿಂದೆಂದೂ ಆಗದ ಅಭಿವೃದ್ಧಿ ಬಿಜೆಪಿ ಸರಕಾರದ ಕಾಲದಲ್ಲಿ ನಡೆದಿದೆ. ಜನರು ಆ ಬಗ್ಗೆ ಸಂತಸ ವ್ಯಕ್ತಪಡಿಸಿರುವುದೂ ಇದೆ. ನಗರೋತ್ಥಾನ ಯೋಜನೆಯಡಿಯಲ್ಲಿ ಕುಮಟಾ ಪುರಸಭೆಯ ಪ್ರತಿಯೊಂದು ವಾರ್ಡ್ ಗಳ ರಸ್ತೆ ಸುಧಾರಣೆ ಆಗಿದೆ ಎಂದರು.
ರಾಜ್ಯ ಬಿಜೆಪಿ ಮಾಧ್ಯಮ ವಕ್ತಾರ ಗಣೇಶ ಕಾರ್ಣಿಕ್, ಕ್ಷೇತ್ರದ ಚುನಾವಣಾ ಸಹಪ್ರಭಾರಿ ಅಶೋಕ ಪ್ರಭು, ನಗರ ಮಹಾಶಕ್ತಿಕೇಂದ್ರದ ಅಧ್ಯಕ್ಷ ಪ್ರಸಾದ ನಾಯಕ, ಮಂಡಲ ಕಾರ್ಯದರ್ಶಿ ತಿಮ್ಮಪ್ಪ ಮುಕ್ರಿ, ಬೂತ್ ಅಧ್ಯಕ್ಷ ಸಂಜಯ ಕುಮಟಾಕರ, ಪ್ರಮುಖರಾದ ವಿಜಯೇಂದ್ರ ಬಿಳಗಿ ಮತ್ತಿತರರು ಇದ್ದರು.