ಕುಮಟಾ: ಹಣತೆ ಸಂಘಟನೆಯು ಕೋಮು ಸೌಹಾರ್ದತೆ ಸಂದೇಶವನ್ನು ಸಾರುವ ಮಹಾತ್ವಾಕಾಂಕ್ಷೆಯನ್ನಿಟ್ಟುಕೊಂಡು ಹಮ್ಮಿಕೊಂಡಿರುವ ಈ ವಿಶಿಷ್ಟ ರಮ್ಜಾನ್ ಕವಿಗೋಷ್ಠಿ ಕರ್ನಾಟಕಕ್ಕೇ ಮಾದರಿ ಆಗಿದೆೆ. ಈ ಹಬ್ಬ ಸಹಬಾಳ್ವೆಯ ಸಂದೇಶವನ್ನು ನೀಡುತ್ತಿದ್ದು ನಮ್ಮ ಸಾಹಿತ್ಯದ ಆಶಯ ಕೂಡ ಇದೇ ಆಗಿದೆ ಎಂದು ಹಿರಿಯ ಕವಿ ಡಾ. ಸಯ್ಯದ್ ಝಮೀರುಲ್ಲಾ ಷರೀಫ್ ಹೇಳಿದರು.
ಹಣತೆ ಸಾಹಿತ್ಯಕ ಸಾಂಸ್ಕೃತಿಕ ಜಗಲಿ ಉತ್ತರ ಕನ್ನಡ ಪಟ್ಟಣದ ನಾದಶ್ರೀ ಕಲಾ ಕೇಂದ್ರದಲ್ಲಿ ರೋಟರಿ ಕ್ಲಬ್ ಸಹಕಾರದೊಂದಿಗೆ ಹಮ್ಮಿಕೊಂಡ ‘ಹಣತೆ ಬೆಳಕಿನಲ್ಲಿ ರಮ್ಜಾನ್ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ರಮ್ಜಾನ್ ಹಬ್ಬದ ಉಪವಾಸ ಕೂಡ ಮಾನವನ ಪಂಚೇಂದ್ರಿಯಗಳು ಕೆಟ್ಟ ಸಂಗತಿಯತ್ತ ವಾಲಬಾರದೆಂಬ ಒಳನೋಟ ಹೊಂದಿದೆ. ಎಲ್ಲ ಧರ್ಮಗಳ ಉಪವಾಸ ಆಚರಣೆಯ ಆಶಯ ಕೂಡ ಇದೇ ಆಗಿದೆ. ಶಾಂತಿಯನ್ನು ಸಾರುವ ಕುರಾನ್ ಯಾವ ಧರ್ಮವನ್ನೂ ಟೀಕಿಸಿಲ್ಲ. ಹಾಗೆಯೇ ಯಾವ ಧರ್ಮವೂ ಕೇಡನ್ನು ಬಯಸುವ ಸಂದೇಶ ಸಾರಿಲ್ಲ. ಪ್ರೀತಿಯೊಂದೇ ಮನುಷ್ಯ ಬದುಕಿನ ಸಾರ ಎಂದು ಹೇಳಿದರು.
ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಹಿರಿಯ ಕವಿ ಡಾ. ಎನ್.ಆರ್.ನಾಯಕ ಸರ್ವಧರ್ಮ ಸಮನ್ವಯತೆ ಸಾರುವ ಭಾರತದಂಥ ದೇಶದಲ್ಲಿ ನಾವೆಲ್ಲ ಬಾಳುತ್ತಿದ್ದೇವೆ ಅನ್ನುವುದೇ ಹೆಮ್ಮೆಯ ಸಂಗತಿ. ಜನಪದ ಸಾಹಿತ್ಯ, ವಚನ ಇವೆಲ್ಲವೂ ಪರಸ್ಪರ ಪ್ರೀತಿಯನ್ನೇ ಧ್ವನಿಸಿವೆ. ಇದೀಗ ಹಣತೆ ಸಂಘಟನೆ ಏರ್ಪಡಿಸಿದ ರಮ್ಜಾನ್ ಕವಿಗೋಷ್ಠಿ ಸಾಮರಸ್ಯದ ಚಳುವಳಿಗೆ ಮಹತ್ವದ ಮಾರ್ಗ ತೆರೆದುಕೊಟ್ಟಿದೆ ಎಂದರು.
ಆಶಯನುಡಿ ಆಡಿದ ಹಣತೆ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಸಾಮಾನ್ಯವಾಗಿ ನಾವು ಸಂಕ್ರಾಂತಿ, ಯುಗಾದಿ, ದಸರಾ, ಶ್ರಾವಣ ಸಂದರ್ಭದಲ್ಲಿ ವಿಶೇಷ ಕವಿಗೋಷ್ಠಿ ಹಮ್ಮಿಕೊಳ್ಳುವ ರೂಢಿ ಇದೆ. ಕಾವ್ಯಕ್ಕೆ ಕೇವಲ ಒಂದು ಧರ್ಮೀಯರು ಆಚರಿಸುವ ಹಬ್ಬದ ಮಡಿವಂತಿಕೆ ಇರಬಾರದು ಎಂಬ ಕಾರಣಕ್ಕೆ ಹಣತೆ ರಮ್ಜಾನ್, ದೀಪಾವಳಿ, ಕ್ರಿಸ್‌ಮಸ್ ಹಬ್ಬಗಳ ಸಂದರ್ಭದಲ್ಲಿ ವರ್ಷಕ್ಕೆ ಮೂರು ಕವಿಗೋಷ್ಠಿಗಳನ್ನು ಸಾಮರಸ್ಯದ ನೆಲೆಯಲ್ಲಿ ಹಮ್ಮಿಕೊಳ್ಳಲಾಗುವುದು. ಹಣತೆ ಒಂದು ಬದ್ಧತೆಯುಳ್ಳ ಸಂಘಟನೆಯಾಗಿದ್ದು ಕುವೆಂಪು ಅವರ ವಿಶ್ವ ಮಾನವ ಸಂದೇಶವೇ ಅದರ ಮೂಲ ತಿರುಳು ಎಂದರು.
ಕವಿಗೋಷ್ಠಿಯಲ್ಲಿ ಬೀರಣ್ಣ ನಾಯಕ ಹಿರೇಗುತ್ತಿ, ಸಂದೇಶ ರತ್ನಪುರಿ, ಗಣೇಶ ಜೋಶಿ, ಪ್ರವೀಣ ಹೆಗಡೆ, ಅಬ್ದುಲ್ ರೆಹಮಾನ್, ಪ್ರಶಾಂತ ಹೆಗಡೆ ಮೂಡಲಮನೆ, ಸುಧಾ ಭಂಡಾರಿ, ಜ್ಯೋತಿ ಹೆಬ್ಬಾರ, ರವೀಂದ್ರ ಭಟ್ಟ ಸೂರಿ, ನಾರಾಯಣ ಯಾಜಿ ಸಾಲೇಬೈಲು, ಎಚ್.ಎಸ್.ಗುನಗ, ಮಹನ ಗೌಡ, ಗಣಪತಿ ಹೆಗಡೆ ಕೊಂಡದಕುಳಿ, ಪ್ರಿಯಾ ಕಲ್ಲಬ್ಬೆ, ಸಾತು ಗೌಡ ಬಡಗೇರಿ, ವನ್ನಳ್ಳಿ ಗಿರಿ, ಕಮಲಾ ಕೊಂಡದಕುಳಿ, ಸಂಧ್ಯಾ ವಿನಾಯಕ ಅಘನಾಶಿನಿ, ಸುರೇಶ ಭಟ್ಟ, ಉಷಾ ಕುಂಭೇಶ್ವರ, ಶುಭಾ ವಿಷ್ಣು ಸಭಾಹಿತ, ಸಂತೋಷ್ ದೈವಜ್ಞ, ಉದಯ ಮಡಿವಾಳ, ಡಾ. ಸೈಯ್ಯದ್ ಝಮೀರುಲ್ಲಾ ಷರೀಪ್, ಡಾ. ಎನ್.ಅರ್.ನಾಯಕ ಕವನ ವಾಚಿಸಿದರು.
ವೇದಿಕೆಯಲ್ಲಿ ಕುಮಟಾ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಸುರೇಶ ಭಟ್ಟ, ಹಣತೆ ಜಿಲ್ಲಾ ಪ್ರಧಾನ ಸಂಚಾಲಕ ಎನ್.ಜಯಚಂದ್ರನ್, ಜಿಲ್ಲಾ ಸಮಿತಿ ಸದಸ್ಯ ಉಪೇಂದ್ರ ಘೋರ್ಪಡೆ ಉಪಸ್ಥಿತರಿದ್ದರು.ಸ ಹಣತೆ ಕುಮಟಾ ಘಟಕದ ಅಧ್ಯಕ್ಷ ಪ್ರಕಾಶ ನಾಯ್ಕ ಅಳ್ವೆದಂಡೆ ಸ್ವಾಗತಿಸಿದರು. ಜಿಲ್ಲಾ ಕೋಶಾಧ್ಯಕ್ಷ ಉಮೇಶ ಮುಂಡಳಿ ಆಶಯ ಗೀತೆ ಹಾಡಿದರು. ಹೊನ್ನಾವರ ತಾಲೂಕು ಅಧ್ಯಕ್ಷ ಪ್ರಶಾಂತ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಕಾರ್ಯದರ್ಶಿ ಉದಯ ಮಡಿವಾಳ ವಂದಿಸಿದರು.