ಕುಮಟಾ : ಸ್ಪಿಕ್ ಮೇಕೆ ಸಂಸ್ಥೆಯ ಮೂಲಕ ಭಾರತೀಯ ಸಂಸ್ಕೃತಿಯ ಉಳಿವಿಗೆ ನಿರಂತರ ಪ್ರಯತ್ನ ನಡೆಸುತ್ತಿರುವ ಕಿರಣ ಸೇತ್ ಸೈಕಲ್ ಮೂಲಕ ಕೇರಳದಿಂದ ಗೋವಾದ ವರೆಗೆ ಸೈಕಲ್ ಮೂಲಕ ಸಂಚರಿಸುತ್ತಿದ್ದು, ಗುರುವಾರ ಕುಮಟಾಕ್ಕೆ ಆಗಮಿಸಿದರು. ಆರೋಗ್ಯವನ್ನು ಸ್ವಸ್ಥವಾಗಿರಿಸಿಕೊಳ್ಳುವುದು, ಸಂಸ್ಕೃತಿಯ ಉಳಿವಿನ ಪ್ರಯತ್ನ ಹಾಗೂ ಜನ ಜಾಗೃತಿಯ ಉದ್ದೇಶದಿಂದ ಈ ಸೈಕಲ್ ಜಾತಾ ಮೂಲಕ ಪ್ರಯತ್ನಿಸುತ್ತಿದ್ದೇನೆ ಎಂದು ಅವರು ತಿಳಿಸಿದರು.
ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ವಿಧಾತ್ರಿ ಅಕಾಡಮಿ ಸಹಯೋಗದ ಸರಸ್ವತಿ ಪಿ.ಯು ಕಾಲೇಜಿನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದರು. ಸರಳವಾಗಿ ಬದುಕು ವಿಶೇಷವಾಗಿ ಯೋಚಿಸು ಎಂಬ ಗಾಂಧೀಜಿಯವರ ತತ್ವದಂತೆ ಬದುಕಬೇಕು. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಇರಲಿ ಅಥವಾ ಯಾವುದೇ ರೀತಿಯ ಶಿಕ್ಷಣ ಪಡೆದರೂ ಕಲೆಯನ್ನು ಅಧ್ಯಯನ ಮಾಡುವವನು ವಿಶೇಷವಾಗಿ ಗುರ್ತಿಸಲ್ಪಡುತ್ತಾರೆ ಎಂದು ವಿವರಿಸಿದರು.
ಹೊನ್ನಾವರದಿಂದ ಕುಮಟಾ ವರೆಗೆ ಬರುವ ಸಂದರ್ಭದಲ್ಲಿ ರಸ್ತೆಯ ಪಕ್ಕದಲ್ಲಿರುವ ಪ್ಲಾಸ್ಟಿಕ್ ಗಳು ಹಾಗೂ ಕಸದ ರಾಶಿಯನ್ನು ಗಮನಿಸಿದ್ದೇನೆ ಅವುಗಳ ಬಗ್ಗೆ ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆಯಿದೆ ಎಂದು ಅವರು ಹೇಳಿದರು.
ಸ್ಪಿಕ್ ಮೆಕೆ ಸಂಸ್ಥೆಯ ಬಗ್ಗೆ ಪರಿಚಯಿಸಿದ ಸಂಸ್ಥೆಯ ಕರ್ನಾಟಕದ ಸಂಚಾಲಕಿ ಸುಪ್ರಿತಿ 1977 ರಲ್ಲಿ ಪ್ರಾರಂಭವಾದ ಸಂಸ್ಥೆಯು ಸಂಸ್ಕೃತಿ ಉಳಿವಿಗಾಗಿ ನಿರಂತರ ಪ್ರಯತ್ನ ಮಾಡುತ್ತಿದೆ. ಪ್ರತೀ ವರ್ಷ ಐದು ಸಾವಿರ ಕಾರ್ಯಕ್ರಮಗಳನ್ನು ದೇಶದಾದ್ಯಂತ ಹಾಗೂ ವಿದೇಶಗಳಲ್ಲಿಯೂ ಸಂಘಟಿಸುವ ಮೂಲಕ ಸಾಂಸ್ಕೃತಿಕ ವಾತಾವರಣ ಬೆಳೆಸಲು ಪ್ರಯತ್ನ ಮಾಡಲಾಗುತ್ತಿದೆ.
ಕರಾವಳಿಯ ಭಾಗದಲ್ಲಿ ನಮ್ಮ ಸಂಸ್ಥೆ ವತಿಯಿಂದ ಇನ್ನಷ್ಟು ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಸೈಕಲ್ ಜಾತಾ ಹಮ್ಮಿಕೊಳ್ಳಲಾಗಿದೆ. ನಾವು ಇಲ್ಲಿಯ ಕಾಲೇಜುಗಳ ಜೊತೆ ಸೇರಿ ಅತ್ಯುನ್ನತ ಕಲಾವಿದರನ್ನು ಇಲ್ಲಿಗೆ ಕರೆತಂದು ಸಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸುತ್ತೇವೆ. ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಸಂಗೀತ, ಯಕ್ಷಗಾನ, ಗೊಂಬೆಯಾಟ, ಯೋಗ ಇನ್ನಿತರ ಕಲೆಯಲ್ಲಿ ನುರಿತ ವ್ಯಕ್ತಿಗಳನ್ನು ನಮ್ಮ ಸಂಸ್ಥೆಯಿಂದ ಕರೆಸಿ ಉಚಿತವಾಗಿ ವಿದ್ಯಾರ್ಥಿಗಳಿಗಾಗಿ ಕಾರ್ಯಕ್ರಮ ಮಾಡಲಾಗುತ್ತದೆ. ಅದಲ್ಲದೆ ‘ಗುರುಕುಲ ಅನುಭವ ಸ್ಕಾಲರ್ಶಿಪ್ ಸ್ಕೀಮ್’ ಮೂಲಕ ಕಲೆಯನ್ನು ಕಲಿಯುವ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುವುದು.
ವಿದ್ಯಾರ್ಥಿಗಳಿಗೆ ಉಚಿತ ಶಿಬಿರಗಳನ್ನು ಸಂಯೋಜಿಸುವುದರ ಮೂಲಕ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕಲಾವಿದರ ಜೊತೆಗೆ ಒಡನಾಟ ಹಾಗೂ ವಿವಿಧ ರೀತಿಯ ಚಟುವಟಿಕೆಗಳನ್ನು ನಡೆಸಿ ಅವರಿಗೆ ಜೀವನ ಕೌಶಲ್ಯ ಕಳಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾತ್ರಿ ಅಕಾಡೆಮಿಯ ಸಹ ಸಂಸ್ಥಾಪಕರಾದ ಗುರುರಾಜ ಶೆಟ್ಟಿ ಇದ್ದರು. ಸರಸ್ವತಿ ಪಿ.ಯು ಕಾಲೇಜಿನ ಪ್ರಾಂಶುಪಾಲರಾದ ಕಿರಣ ಭಟ್ಟ ಸ್ವಾಗತಿಸಿದರು.