ಕುಮಟಾ : ನಿಮ್ಮೊಳಗಿನ ಶಕ್ತಿಯನ್ನು ನೀವು ನಂಬಿದರೆ ಎಲ್ಲವೂ ಸಾಧ್ಯವಾಗುತ್ತದೆ ಎಂದು ಐಐಟಿ ದೆಹಲಿಯ ಉಪನ್ಯಾಸಕ, ಪದ್ಮಶ್ರೀ ಪುರಸ್ಕೃತ ಸೈಕಲ್ ಸಂತ ಕಿರಣ ಸೇಠ್ ತಿಳಿಸಿದರು. ಅವರು ತಾಲೂಕಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಹಾಗೂ ವಿಧಾತ್ರಿ ಅಕಾಡೆಮಿ ಸಹಯೋಗದಲ್ಲಿ ನಡೆಯುತ್ತಿರುವ ಸರಸ್ವತಿ ಪಿ.ಯು ಕಾಲೇಜಿನಲ್ಲಿ ಮಕ್ಕಳೊಂದಿಗೆ ಸಂವಾದನಡೆಸುತ್ತಾ ಸ್ಪೂರ್ತಿದಾಯಕ ಮಾತುಗಳನ್ನಾಡಿದರು.

ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರಗಳನ್ನು ಕಲಿಯಲು ಕಷ್ಟವೆನಿಸಬಹುದು ಆದರೆ ಅದರ ಜೊತೆ‌ ಜೊತೆಗೆ ಕಲೆಯನ್ನೂ ಅಧ್ಯಯನ ಮಾಡಬೇಕು ಆಗ ಮಾತ್ರವೇ ಸಮಾಜದಲ್ಲಿ ನಿಮಗೊಂದು ಮೌಲ್ಯ ಬೆಳೆಯಲು ಸಾಧ್ಯ ಎಂದರು. ಅಬ್ದುಲ್ ಕಲಾಂ, ಐನ್ ಸ್ಟೀನ್ ಹಾಗೂ ಇತರ ಮಹಾನ್ ವ್ಯಕ್ತಿಗಳ ಜೀವನದಲ್ಲಿಯೂ ಕಲೆಯು ಬಹಳ ಮುಖ್ಯ ಪಾತ್ರ ವಹಿಸಿದೆ ಎಂಬುದನ್ನು ಉದಾಹರಣೆಯೊಂದಿಗೆ ವಿವರಿಸಿದ ಅವರು. ವಿದ್ಯಾರ್ಥಿಗಳಿಗೆ ಕೆಲವು ಚಟುವಟಿಕೆಗಳನ್ನು ಮಾಡಿಸುವ ಮೂಲಕ ಹೇಗೆ ಏಕಾಗ್ರತೆ ಹೆಚ್ಚಿಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.

RELATED ARTICLES  "ಸಂಭ್ರಮ ಶನಿವಾರ" ದಂದು ಸಂಭ್ರಮಿಸಿದ ಮಕ್ಕಳು. ಹೊಲನಗದ್ದೆ ಶಾಲೆಯಲ್ಲಿ ನಡೆಯಿತು ವಿಶೇಷ ಕಾರ್ಯಕ್ರಮ.

ಜೀವನದಲ್ಲಿ ಎಷ್ಟೇ ದೊಡ್ಡ ಸ್ಥಾನ ಹಾಗೂ ಉದ್ಯೋಗ ನಡೆಸುವುದಾದರೂ ಕಲೆಯೊಂದು ಜೊತೆಗಿದ್ದರೆ ನಿಮ್ಮ ಸ್ಥಾನಮಾನಗಳು ಹೆಚ್ಚುತ್ತದೆ. ಸಂಗೀತ, ಯಕ್ಷಗಾನ, ಯೋಗ, ಗೊಂಬೆಯಾಟ, ವಾದ್ಯಗಳನ್ನು ನುಡಿಸಲು ಕಲಿಯುವುದು ಜೀವನದಲ್ಲಿ ಅವುಗಳನ್ನು ರೂಢಿಸಿಕೊಂಡು ಹೋಗುವುದು ಅತ್ಯಂತ ಮುಖ್ಯವಾಗಿರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಉಪನ್ಯಾಸಕರೊಂದಿಗೆ ಕೆಲವು ಸಮಯ ಸಂವಾದ ನಡೆಸಿದ ಸೇಠ್, ಭಾರತದ ಮುಂದುವರೆದ ನಗರದಲ್ಲಿ ನೀಡಲಾಗುವ ಶಿಕ್ಷಣದ ಮಾದರಿಯಲ್ಲಿಯೇ ಸರಸ್ವತಿ ಪಿ.ಯು ಕಾಲೇಜಿನಲ್ಲಿ ಶಿಕ್ಷಣ ನೀಡಲಾಗುತ್ತಿರುವುದು ಹೆಮ್ಮೆಯ ಸಂಗತಿ, ಉಪನ್ಯಾಸಕರ ಪರಿಶ್ರಮ ಮೆಚ್ಚುವಂತದ್ದು ಎಂದು ಅಭಿಪ್ರಾಯಪಟ್ಟರು.

RELATED ARTICLES  ಪುರಾಣ ಪ್ರಸಿದ್ದ ಶ್ರೀ ಉಪ್ಪಲೆ ಮಹಾಲಿಂಗೇಶ್ವರ ದೇವರ ಮಹಾ ರಥೋತ್ಸವ ಸಂಪನ್ನ.

ಸ್ಪಿಕ್ ಮೆಕೆಯ ಸದಸ್ಯೆ ಬೆಂಗಳೂರಿನ ಸುಪ್ರೀತಿ ಮಾತನಾಡಿ 29 ಮೇ ದಿಂದ ಜೂನ್ 5 ರ ವರೆಗೆ ವಿಎನ್ಐಟಿ ನಾಗ್ಪುರದಲ್ಲಿ ನಡೆಯುವ ಸ್ಪಿಕ್ ಮೆಕೆ ಅಂತರಾಷ್ಟ್ರೀಯ ಕನ್ಸರ್ವೇಶನ್ ನಲ್ಲಿ ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶ ಇದ್ದು, ಅದರಲ್ಲಿ ಉಚಿತವಾಗಿ ಕಲೆಯ ಅತ್ಯುನ್ನತ ಕಲಾವಿದರಿಂದ ಕಲಿಕೆಗೆ ಅವಕಾಶ ಕಲಿಸಲಾಗಿದೆ ಎಂದು ಮಾಹಿತಿ ನೀಡಿದರು ಹಾಗೂ ಸಂಸ್ಥೆಯಿಂದ ನಡೆಯುವ ಕಾರ್ಯಗಳ ಬಗ್ಗೆ ವಿವರಿಸಿದರು.

ವಿಧಾತ್ರಿ ಅಕಾಡಮಿಯ ಸಹಸಂಸ್ಥಾಪಕ ಗುರುರಾಜ ಶೆಟ್ಟಿ ವೇದಿಕೆಯಲ್ಲಿದ್ದರು. ಪ್ರಾಂಶುಪಾಲರಾದ ಕಿರಣ ಭಟ್ಟ ಸ್ವಾಗತಿಸಿದರು. ಶಿಕ್ಷಕ ಗಣೇಶ ಜೋಶಿ ವಂದಿಸಿದರು.