ಶಿರಸಿ: ಕಳೆದ ಮೂರು ವರ್ಷದಲ್ಲಿ ಕೇಳಿದ್ದು ಕೊಟ್ಟಿದ್ದೇನೆ. ಆಗಬೇಕಾದದ್ದು ಇನ್ನೂ ಇದೆ. ಅಭಿವೃದ್ಧಿ ನೀರಿನ ಹರಿವಿನಂತೆ ನಿರಂತರ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿಪಾದಿಸಿದರು. ಅವರು ತಾಲೂಕಿನ ಮಂಜುಗುಣಿ ಪಂಚಾಯತದ ಕಳುಗಾರ, ಮಂಜುಗುಣಿ, ಕೂರ್ಸೆ ವಿವಿಧಡೆ ಮತ ಪ್ರಚಾರ ನಡೆಸಿ ಮಾತನಾಡಿದರು. ಮಂಜುಗುಣಿ ಪವಿತ್ರ ಪುಣ್ಯ ಕ್ಷೇತ್ರ. ಇದೇ ಊರಿನಲ್ಲಿ ಗ್ರಾಮ ಪಂಚಾಯತ ಕೂಡ ಇದೆ. ಜನರ ಸೇವೆ ಎಂದರೆ ದೇವರ ಸೇವೆನೆ. ಪಂಚಾಯತ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಚಟುವಟಿಕೆಗಳು ನಡೆದಿದೆ. ರಸ್ತೆ, ಕುಡಿಯುವ ನೀರು, ಸೇತುವೆ, ಕಾಲುಸಂಕ, ಚೆಕ್ ಡ್ಯಾಂ ಇನ್ನಿತರ ಅಭಿವೃದ್ಧಿ ಕೆಲಸಗಳಿಗೆ ಅನುದಾನ ತಂದಿದ್ದೇನೆ ಎಂದರು.
ಈಗಾಗಲೇ ಹಲವಾರು ಕಾಮಗಾರಿಗಳು ಪೂರ್ಣಗೊಂದಿದ್ದು, ಇನ್ನೂ ಕೆಲವು ಪ್ರಗತಿಯಲ್ಲಿದೆ. ಅಭಿವೃದ್ಧಿ ನಿಂತ ನೀರಲ್ಲ. ಆಯಾ ಸಮಯದಲ್ಲಿ ಜನರ ಬೇಡಿಕೆಗಳಿಗೆ ಅನುಗುಣವಾಗಿ ಅಭಿವೃದ್ಧಿ ನಡೆದಿದೆ. ಕ್ಷೇತ್ರದ ಅರಣ್ಯ ಅತಿಕ್ರಮಣದಾರರಿಗೆ ಅನುಕೂಲವಾಗುವಂತೆ ಮನೆ ನಂಬರ್ ಆಧಾರದ ಮೇಲೆ ಆರ್ಟಿಸಿ ಇಲ್ಲದಿದ್ದರೂ ಮನೆ ಸಿಗುವಂತೆ ಮಾಡಿದ್ದೇನೆ. ಈ ಬಾರಿ ಕ್ಷೇತ್ರಕ್ಕೆ ಐದು ಸಾವಿರ ಮನೆಗಳನ್ನು ತಂದಿದ್ದೇನೆ. ನಗರಗಳೂ ಅಭಿವೃದ್ಧಿ ಹೊಂದುತ್ತಿದೆ. ಅದರೊಂದಿಗೆ ಗ್ರಾಮೀಣ ಭಾಗವೂ ಅಭಿವೃದ್ಧಿ ಹೊಂದುತ್ತಿದೆ ಎಂದರು.