ಹೊನ್ನಾವರ: ತಾಲೂಕಿನ ಗುಣವಂತೆಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೈಕ್ ಸವಾರನೋರ್ವ ವೇಗವಾಗಿ ತನ್ನ ಬೈಕ್ ಸವಾರಿ ಮಾಡಿಕೊಂಡು ತೆರಳುತ್ತಿದ್ದಾಗ ರಸ್ತೆ ಮೇಲೆ ಒಮ್ಮೆಲೆ ಅಡ್ಡ ಬಂದ ದನವನ್ನು ತಪ್ಪಿಸಲು ಹೋಗಿ ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಸವಾರ, ಸಹಸವಾರ ಈರ್ವರು ಗಂಭೀರ ಗಾಯಾಳುವಾದ ಘಟನೆ ನಡೆದಿದೆ. ಆರೋಪಿತ ಬೈಕ್ ಸವಾರ ಪರಶುರಾಮ ಹೊನ್ನಾಳಿ, ಸಹಸವಾರ ಪರಶುರಾಮ ಹೊಸಗೌಡರ ಈರ್ವರು ಬಾಗಲಕೋಟೆ ಜಿಲ್ಲೆಯ ಗುಳದಗುಡ್ಡ ಲಿಂಗಾಪುರ ಕೆಲವಡಿಯ ನಿವಾಸಿಗಳು ಎಂದು ಗುರುತಿಸಲಾಗಿದೆ. ಇವರು ತಮ್ಮ ಊರಲ್ಲಿ ನಡೆಯಲಿರುವ ಜಾತ್ರೆಗೆ ಹೋಗಲು ಮಂಗಳೂರಿನಿಂದ ಹುಬ್ಬಳ್ಳಿ ಮಾರ್ಗವಾಗಿ ತೆರಳುತ್ತಿದ್ದಾಗ ಗುಣವಂತೆ ಹತ್ತಿರ ರದ್ದಿ ಪೇಪರ ಅಂಗಡಿಯ ಎದುರು ಘಟನೆ ನಡೆದಿದೆ.
ಡಿವೈಡರಿಗೆ ಡಿಕ್ಕಿ ಹೊಡೆದು ಬೈಕ್ ಸಮೇತ ಡಿವೈಡರ್ ಮಧ್ಯದ ಗಟಾರದಲ್ಲಿ ಬಿದ್ದಿದ್ದಾರೆ. ಸವಾರ, ಸಹಸವಾರ ಇಬ್ಬರಿಗೂ ಗಾಯನೋವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ