ಕುಮಟಾ : ಈಗಾಗಲೇ ಕಾಂಗ್ರೆಸ್ ಪಕ್ಷವನ್ನ ತೊರೆದಿರುವ ಶಿವಾನಂದ ಹೆಗಡೆ ಕಡತೋಕಾ ಬಿಜೆಪಿಗೆ ಸೇರ್ಪಡೆಯಾಗುವುದು ಬಹುತೇಕ ಖಚಿತವೆಂಬ ಅಂಶ ಎಲ್ಲರ ಮನಸಿನಲ್ಲಿ ದೃಢವಾಗುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಫೋಟೋ ಒಂದು ವಿಷಯವನ್ನು ಹೌದೆಂಬಂತೆ ಮಾಡಿದೆ.
ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಗಜಾನನ ಪೈ ಮತ್ತು ಹಲವು ಬಿಜೆಪಿ ಮುಖಂಡರು ಗುರುವಾರ ತಡರಾತ್ರಿವರೆಗೆ ಶಿವಾನಂದ ಹೆಗಡೆಯವರ ಮನೆಯಲ್ಲಿ ಮಾತುಕತೆ ನಡೆಸಿದ್ದಾರೆ. ಇಲ್ಲಿಯ ಮಾತುಕತೆಯಲ್ಲಿ ಸಕಾರಾತ್ಮಕ ಮಾತಗಳೇ ಹೆಗಡೆಯವರಿಂದ ಬಂದಿದೆ ಎಂದು ಬಿಜೆಪಿ ಮೂಲಗಳು ತಿಳಿಸಿದೆ.
ಮಾತುಕತೆ ನಡೆದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಳ್ಳಲಾಗಿದೆ. ಈಬಾರಿ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಎಂದು ಹಲವು ಮಾಧ್ಯಮಗಳು ಸುದ್ದಿ ಬಿತ್ತರಿಸಿದ್ದವು. ಇನ್ನು ಮುಂದೆ ಗೆಲುವಿನ ಮುನ್ನಡೆಯತ್ತ ಬಿಜೆಪಿ ಅಭ್ಯರ್ಥಿ ಎನ್ನುವ ಸಮಯ ಬಂದಾಗಿದೆ. ಎಂದು ಹೇಳಿಕೊಂಡಿದ್ದಾರೆ. ಅದಲ್ಲದೆ ಗಜಾನನ ಪೈ ಸಧ್ಯದಲ್ಲಿಯೇ ಬ್ರೇಕಿಂಗ್ ನ್ಯೂಸ್ ಎಂದು ತಮ್ಮ ವಾಲ್ ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಮಾಜಿ ಪುರಸಭಾ ಅಧ್ಯಕ್ಷ ಸಂತೋಷ ನಾಯ್ಕ, ಗ್ರಾ.ಪಂ ಸದಸ್ಯ ಎಂ.ಎಂ ಹೆಗಡೆ, ಜಗದೀಶ ಭಟ್ಟ ಇನ್ನಿತರ ಪ್ರಮುಖರು ಈ ಸಂದರ್ಭದಲ್ಲಿದ್ದರು.
ಕಳೆದ 25 ವರ್ಷಕ್ಕಿಂತಲೂ ಹೆಚ್ಚು ಕಾಲದಿಂದ ಪಕ್ಷದ ಪ್ರಭಲ ನಾಯಕರಾಗಿ ಅದಲ್ಲದೆ ಆರ್ ವಿ ದೇಶಪಾಂಡೆ ಅವರ ಬಲಗೈ ಎಂದೇ ಗುರುತಿಸಿಕೊಂಡಿದ್ದ ಶಿವಾನಂದ ಹೆಗಡೆ ಕಡತೋಕಾ ಜಿಲ್ಲಾ ಪಂಚಾಯತದ ಸದಸ್ಯರಾಗಿ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ತಮ್ಮದೇ ಆದ ವೈಯಕ್ತಿಕ ವರ್ಚಸ್ಸು ಹೊಂದಿದ್ದರು. ರಾಜಕೀಯಾತ್ಮಕವಾದ ಎಲ್ಲ ಜಾತಿ, ಮತ, ಪಂಥಗಳ ಕಾರ್ಯಕರ್ತರನ್ನು ಹೊಂದಿದ್ದ ಸುಭದ್ರ ಪಡೆಯಲು ನಿರ್ಮಿಸಿಕೊಂಡಿದ್ದರು.
ಈ ಸಾಲಿನಲ್ಲಿ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಶಿವಾನಂದ ಹೆಗಡೆ ಕಡತೋಕಾ, ಕೊನೆ ಕ್ಷಣದವರೆಗೂ ಟಿಕೆಟ್ ಸಿಗುವ ಭರವಸೆಯಲ್ಲಿದ್ದವರು ನಿವೇದಿತ ಆಳ್ವಾ ಎಂಟ್ರಿ ನಂತರದಲ್ಲಿ ತೀವ್ರ ಸಮಾಧಾನಗೊಂಡಿದ್ದರು. ನಂತರದಲ್ಲಿ ಪಕ್ಷೇತರರಾಗಿ ನಿಲ್ಲುವ ಇಂಗಿತ ವ್ಯಕ್ತಪಡಿಸಿದ್ದರಾದರೂ, ಮಾಜಿ ಶಾಸಕಿ ಶಾರದಾ ಶೆಟ್ಟಿ ಅವರು ನಾಮಪತ್ರ ಸಲ್ಲಿಸಿದ ನಂತರ ಅವರಿಗೆ ಬೆಂಬಲ ಸೂಚಿಸಿ ಪಕ್ಷದಲ್ಲಿದ್ದ ಸ್ಥಾನಕ್ಕೆ ರಿಸೈನ್ ಮಾಡಿದ್ದರು. ಅದಲ್ಲದೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡುವುದಾಗಿ ಘೋಷಿಸಿದ್ದರು.
ಮಾಜಿ ಶಾಸಕಿ ಶಾರದಾ ಶೆಟ್ಟಿ ರಾಜಕಾರಣಕ್ಕೆ ವಿದಾಯ ಹೇಳಿದ ನಂತರದಲ್ಲಿ, ಅವರ ಜೊತೆಗಿದ್ದ ಅನೇಕ ಬೆಂಬಲಿಗರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ನಿವೇದಿತ ಆಳ್ವಾ ಜೊತೆಗೆ ಸೇರಿಕೊಂಡಿದ್ದರು. ಆದರೆ ಶಿವಾನಂದ ಹೆಗಡೆ ಕಡತೋಕಾ ಮಾತ್ರ ಕಾರ್ಯಕರ್ತರೊಂದಿಗೆ ನಿರಂತರ ಸಭೆಗಳನ್ನು ನಡೆಸುತ್ತಾ ಯಾವುದೇ ಘೋಷಣೆ ಮಾಡದೆ ತಟಸ್ಥ ನಿಲುವು ತಾಳಿದ್ದರು.
ಶಿವಾನಂದ ಹೆಗಡೆಯವರಿಗೂ ಇದೀಗ ಇನ್ಯಾವುದೇ ಮಾರ್ಗ ಉಳಿದಂತಿಲ್ಲ. ಹೀಗಾಗಿ ಬಿಜೆಪಿಗೆ ಬರೋದು ಬಹುತೇಕ ಫಿಕ್ಸ್ ಆದಂತಿದೆ. ಆದರೆ ಅಧಿಕೃತವಾದ ಹೇಳಿಕೆಯನ್ನು ಒಂದೆರಡು ದಿನದೊಳಗಾಗಿ ನಿರೀಕ್ಷಿಸಲಾಗಿದೆ.
ಬಿಜೆಪಿ ಪ್ರಮುಖರು ಬಂದು ಭೇಟಿಮಾಡಿ ಮಾತುಕತೆ ನಡೆಸಿದ್ದಾರೆ. ಜನರ ಸೇವೆಗೆ ಯಾವುದಾದರೊಂದು ಉತ್ತಮ ಮಾರ್ಗದ ಅಗತ್ಯವಿದೆ. ಅತೀ ಶೀಘ್ರವಾಗಿ ಅಧಿಕೃತ ಘೋಷಣೆ ಮಾಡುತ್ತೇನೆ. – ಶಿವಾನಂದ ಹೆಗಡೆ ಕಡತೋಕಾ.