ಕುಮಟಾ : ಕಣ್ಣಿನ ಮೋತಿಬಿಂದು ಶಸ್ತ್ರಚಿಕಿತ್ಸೆ ಅತ್ಯವಶ್ಯವುಳ್ಳ 22 ಬಡ ವೃದ್ಧರು ಕುಮಟಾ ಲಯನ್ಸ್ ರೇವಣಕರ ಚೆರಿಟೇಬಲ್ ಕಣ್ಣಿನ ಆಸ್ಪತ್ರೆಯಲ್ಲಿ ಶುಕ್ರವಾರ ಉಚಿತ ಶಸ್ತ್ರಚಿಕಿತ್ಸೆ ಗೊಳಪಟ್ಟು ಸಂತೃಪ್ತ ಭಾವದಿಂದ ಶನಿವಾರ ಆಸ್ಪತ್ರೆಯಿಂದ ನಿರ್ಗಮಿಸಿದರು.
ಲಯನ್ಸ್ ಕ್ಲಬ್ ಕುಮಟಾದ ಲಯನ್ಸ್ ಹ್ಯುಮನಿಟೇರಿಯನ್ ಸರ್ವೀಸ್ ಟ್ರಸ್ಟ್ ಕಳೆದ ಹದಿನಾರು ವರ್ಷಗಳಿಂದಲೂ ತಿಂಗಳಿನ ಪ್ರತಿ ಗುರುವಾರವೂ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ವಿವಿಧ ತಾಲೂಕುಗಳಲ್ಲಿ ಶಸ್ತ್ರಚಿಕಿತ್ಸೆ ಅವಶ್ಯವುಳ್ಳವರನ್ನು ಆಯ್ಕೆ ಮಾಡುವ ಉಚಿತ ಶಿಬಿರಗಳನ್ನು ನಡೆಸುತ್ತ ಈ ಶಿಬಿರಗಳಲ್ಲಿ ಆಯ್ಕೆಯಾದವರಿಗೆ ಉಚಿತ ಶಸ್ತ್ರಚಿಕಿತ್ಸೆ ಗಳನ್ನು ಕುಮಟಾದಲ್ಲಿನ ತನ್ನ ಲಯನ್ಸ್ ರೇವಣಕರ ಚೆರಿಟೇಬಲ್ ಕಣ್ಣಿನ ಆಸ್ಪ ತ್ರೆಯಲ್ಲಿ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ.ಈವರೆಗೂ ಜಿಲ್ಲೆಯ 8000 ಕ್ಕೂ ಹೆಚ್ಚಿನ ಫಲಾನುಭವಿಗಳು ಈ ಉಚಿತ ಶಸ್ತ್ರಚಿಕಿತ್ಸೆ ಯ ಪ್ರಯೋಜನ ಪಡೆದಿದ್ದಾರೆ.
ಈ ಸೇವಾ ಕಾರ್ಯಕ್ರಮದಂತೆ ತಿಂಗಳಿನ ನಾಲ್ಕನೇಯ ಗುರುವಾರ ( ಎ.27) ರಂದು ಹೊನ್ನಾವರ ಮತ್ತು ಭಟ್ಕಳ ಗಳಲ್ಲಿ ಉಚಿತ ಶಿಬಿರ ಏರ್ಪಡಿಸಲಾಗಿತ್ತು. ಈ ಶಿಬಿರದಲ್ಲಿ ಆಯ್ಕೆಯಾದ 22 ಬಡ ವೃದ್ಧರನ್ನು ಕುಮಟಾದಲ್ಲಿನ ಆಸ್ಪತ್ರೆಗೆ ಕರೆತಂದು ಮೋತಿಬಿಂದು ಶಸ್ತ್ರಚಿಕಿತ್ಸೆ ನಡೆಸಲಾಯಿತು.ಶಸ್ತ್ರಚಿಕಿತ್ಸೆ ಸಹಿತ ಊಟ,ಉಪಹಾರ, ವಸತಿ, ಔಷಧೋಪಚಾರ, ಸಾರಿಗೆ ವ್ಯವಸ್ಥೆ ಸಂಪೂರ್ಣ ಉಚಿತವಾಗಿತ್ತು.
ಇತ್ತೀಚೆಗಷ್ಟೇ ಈ ಆಸ್ಪತ್ರೆಯನ್ನು ವಿಸ್ತೃತ ಗೊಳಿಸಿ ನವೀಕರಿಸಿ ವಿವಿಧ ಆಧುನಿಕ ಯಂತ್ರೋಪಕರಣಗಳನ್ನು ಅಳವಡಿಸಿ ಕಣ್ಣಿನ ರೋಗಿಗಳಿಗೆ ಹೆಚ್ಚಿನ ಸೇವಾ ಸೌಲಭ್ಯ ಇಲ್ಲಿ ಲಭ್ಯವಿರುವಂತೆ ಸಜ್ಜುಗೊಳಿಸಲಾಗಿದ್ದು, ವಿಶೇಷವಾಗಿ ಆಸ್ಪತ್ರೆಯ ಈ ಉಚಿತ ಸೇವಾ ಕಾರ್ಯವು ಜಿಲ್ಲೆಯ ಬಡ ಜನತೆಗೆ ವರದಾನವಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.