ಕುಮಟಾ : ತಾಲೂಕಿನ ಚಂದಾವರ- ಸಂತೆಗುಳಿ ರಸ್ತೆ ಸುಧಾರಣೆಗೆ 19ಕೋಟಿ ಅನುದಾನ ಒದಗಿಸಿದ್ದು, ಅತ್ಯುತ್ತಮವಾದ ರಸ್ತೆ ನಿರ್ಮಾಣವಾಗುತ್ತಿದೆ, ಮೂಲಭೂತ ಸೌಕರ್ಯಗಳನ್ನು ಜನರಿಗೆ ಒದಗಿಸಲು ನಾವು ಸದಾ ಸಿದ್ಧ ಎಂದು ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ಹೇಳಿದರು. ಅವರು ತಾಲೂಕಿನ ಸಂತೆಗುಳಿ ಶಕ್ತಿಕೇಂದ್ರದ ಬೆಳಗಲಗದ್ದೆಯಲ್ಲಿ ಚುನಾವಣಾ ಪ್ರಚಾರಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಸಂತೆಗುಳಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಐದುವರ್ಷಗಳಲ್ಲಿ ಬಿಜೆಪಿ ಸರ್ಕಾರದಿಂದ ನೆರವೇರಿದ ಅಭಿವೃದ್ಧಿ ಕಾರ್ಯಗಳಬಗ್ಗೆ ವಿವರಿಸಿದರು. ಸಂತೆಗುಳಿಯಲ್ಲಿ ಸಭಾಭವನ ನಿರ್ಮಾಣ, ಕಾಲೇಜು ನಿರ್ಮಾಣ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಗತ್ಯವಿರುವ ಸಿಬ್ಬಂದಿಗಳನ್ನು ಒದಗಿಸಿದ್ದು ಸೇರಿದಂತೆ ರಸ್ತೆಗಳ ಸುಧಾರಣೆಯಲ್ಲಿ ವಿಶೇಷ ದಾಖಲೆಯನ್ನು ಬಿಜೆಪಿ ಸರ್ಕಾರ ಮಾಡಿದೆ. ಒಟ್ಟಿನಲ್ಲಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ನಾವು ಶ್ರಮಿಸಿದ್ದು, ಮತ್ತೊಮ್ಮೆ ಬಿಜೆಪಿಯನ್ನು ಗೆಲ್ಲಿಸುವಂತೆ ಮನವಿಮಾಡಿದರು.
ಕ್ಷೇತ್ರದ ಚುನಾವಣಾ ಸಂಚಾಲಕ ಎಮ್. ಜಿ. ಭಟ್, ಮಂಡಲ ಉಪಾಧ್ಯಕ್ಷ ವಿನಾಯಕ ಭಟ್, ಶಕ್ತಿಕೇಂದ್ರದ ಪ್ರಮುಖರಾದ ಶ್ರೀಧರ ನಾಯ್ಕ ಮತ್ತು ಸಂದೀಪ್ ನಾಯ್ಕ, ಹೆಗಡೆ ಮಹಾಶಕ್ತಿಕೇಂದ್ರದ ಅಧ್ಯಕ್ಷ ಯೋಗೇಶ್ ಪಟಗಾರ, ಕುಮಾರ ಕವರಿ, ಸೀತಾರಾಮ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.