ಕುಮಟಾ : ತಾಲೂಕಿನ ಹೊಸಾಡದ ಅಮೃತಧಾರ ಗೋಶಾಲೆಯಲ್ಲಿ ಆಕಳೊಂದಕ್ಕೆ ಹೊರ ಬಂದ ಗರ್ಭ ಪದರವನ್ನು ಒಳ ಹಾಕುವ ಮೂಲಕ ಮಾನವೀಯತೆ ಮೆರೆದ ಹಾಗೂ ಯಶಸ್ವಿಯಾಗಿ ಗೋವಿನ ಪ್ರಾಣ ರಕ್ಷಣೆಮಾಡಿದ ಘಟನೆ ಇಲ್ಲಿನ ಸಿಬ್ಬಂದಿ ಹಾಗೂ ಪಶು ಇಲಾಖೆಯವರಿಂದ ನಡೆದಿದೆ.
ಗೋಶಾಲೆಯಲ್ಲಿದ್ದ ಗೀರ್ ತಳಿಯ ಆಕಳೊಂದಕ್ಕೆ ರಾತ್ರೋರಾತ್ರಿ ಗರ್ಭ ಪದರ ಹೊರಗೆ ಬಂದಿದ್ದು, ಅದನ್ನು ಕಂಡ ಸಿಬ್ಬಂಧಿಗಳು ಕಂಗಾಲಾಗಿದ್ದಾರೆ. ನಂತರ ಪಶು ಇಲಾಖೆಗೆ ಮಾಹಿತಿ ನೀಡಿದ್ದು, ಸತತ ನಾಲ್ಕು ಗಂಟೆಗಳ ಕಾಲ ಚಿಕಿತ್ಸೆ ನಡೆಸಿದ ಪಶು ಇಲಾಖೆ ಸಿಬ್ಬಂದಿ ಯೋಗೇಶ ಗೌಡ , ಡಾ. ರಾಜಾರಾಮ ಹೆಗಡೆ, ಡಾ. ಬೀರಪ್ಪ ಗುಡೇದಾಳ ಮತ್ತು ಡಾ. ಭರತ್ ಕುಮಾರ ಹರಸಾಹಸಪಟ್ಟು, ಗೋವಿನ ಪ್ರಾಣ ಉಳಿಸಿದ್ದಾರೆ.
ರವಿವಾರ ಮುಂಜಾನೆ 7.30 ರ ಸುಮಾರಿಗೆ ಈ ಘಟನೆ ನಡೆದಿದ್ದು 11.30 ರ ವರೆಗೆ ಹರಸಾಹಸ ಪಟ್ಟು ಗೋವಿನ ಜೀವ ಉಳಿಸಲಾಗಿದೆ. ಪ್ರಾಕೃತಿಕ ಬದಲಾವಣೆಯಿಂದ ಗೋವಿನಲ್ಲಿ ಈ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುವಂತಹುದೆಂದು ಹೇಳಲಾಗಿದೆ.
ಈ ಎಲ್ಲಾ ಕಾರ್ಯಾಚರಣೆಗೆ ಸಹಕರಿಸಿದ ಸಿಬ್ಬಂದಿಗಳು ಹಾಗೂ ಪಶು ಇಲಾಖೆಯ ವೈದ್ಯರುಗಳಿಗೆ ಹೊಸಾಡದ ಅಮೃತಧಾರಾ ಗೋಶಾಲೆಯ ಅಧ್ಯಕ್ಷರು ಹಾಗೂ ಎಲ್ಲಾ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.