ಕುಮಟಾ : ಜನತೆಗೆ ಅನುಕೂಲವಾಗುವ ಯೋಜನೆಗಳನ್ನು ತಂದು ಜನರ ಸಮಸ್ಯೆ ನೀಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಬಿಜೆಪಿ ಬೆಂಬಲಿಸಿ ಅಭಿವೃದ್ಧಿ ಮುಂದುವರೆಸಲು ಅನುವುಮಾಡಿಕೊಡಿ ಎಂದು ಕುಮಟಾ ಹೊನ್ನಾವರ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ದಿನಕರ ಶೆಟ್ಟಿ ಹೇಳಿದರು. ಅವರು ರವಿವಾರ ಕುಮಟಾ ತಾಲೂಕಿನ ತೊರ್ಕೆಯಲ್ಲಿ ಪ್ರಚಾರಸಭೆಯಲ್ಲಿ ಮಾತನಾಡಿದರು.
ಸಭೆಯಲ್ಲಿ ಅವರು ತಮ್ಮ ಆಡಳಿತಾವಧಿಯಲ್ಲಿ ತೊರ್ಕೆ ಹಾಗೂ ಗೋಕರ್ಣ ಭಾಗದಲ್ಲಿ ನೆರವೇರಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿವರಿಸಿದರು. ಗೋಕರ್ಣ ವಡ್ಡಿ-ದೇವನಹಳ್ಳಿ ರಾಜ್ಯ ಹೆದ್ದಾರಿ ದುರಸ್ಥಿ, ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸಿದ್ದು, ಹೊಸ್ಕಟ್ಟಾ ಖಾರ್ಲ್ಯಾಂಡ್ ಸುಧಾರಣೆ, ಸಿದ್ದೇಶ್ವರದಿಂದ ಹಿತ್ಲಮಕ್ಕಿ ವರೆಗೆ ಖಾರ್ಲ್ಯಾಂಡ್ ನಿರ್ಮಾಣ, ಈ ಎಲ್ಲ ಯೋಜನೆಗಳಿಗೆ ಬಿಜೆಪಿ ಸರ್ಕಾರ ಸಾಕಷ್ಟು ಅನುದಾನ ಒದಗಿಸಿದೆ. ವಿಶೇಷವಾಗಿ ಕೃಷಿ ಭೂಮಿಗೆ ಉಪ್ಪುನೀರು ನುಗ್ಗುವುದರಿಂದ ರೈತರಿಗೆ ತುಂಬಾ ತೊಂದರೆ ಉಂಟಾಗುತ್ತಿತ್ತು. ಖಾರ್ಲ್ಯಾಂಡ್ ನಿರ್ಮಾಣದಿಂದ ಈ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿದೆ. ಮೀನುಗಾರರಿಗೂ ಇದರಿಂದ ಅನುಕೂಲವಾಗುತ್ತದೆ. ಶಾಲಾ ಕೊಠಡಿಗಳ ದುರಸ್ಥಿ ಹಾಗೂ ಹೊಸ ವರ್ಗಕೋಣೆಗಳ ನಿರ್ಮಾಣಕ್ಕೆ ವಿಶೇಷ ಕಾಳಜಿಯೊಂದಿಗೆ ಕೆಲಸ ಮಾಡಿದೆ. ಒಟ್ಟಿನಲ್ಲಿ ನಮ್ಮ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಅಗತ್ಯ ಪ್ರಮಾಣದ ಅನುದಾನವನ್ನು ಬಿಜೆಪಿ ಸರ್ಕಾರ ಒದಗಿಸಿದ್ದು, ನೀವೆಲ್ಲರೂ ಮತ್ತೊಮ್ಮೆ ಭಾರತೀಯ ಜನತಾ ಪಾರ್ಟಿಗೆ ಆಶೀರ್ವಾದ ಮಾಡಬೇಕು ಎಂದು ಕೋರಿದರು.
ಮಂಡಲ ಬಿಜೆಪಿ ಅಧ್ಯಕ್ಷ ಹೇಮಂತಕುಮಾರ ಗಾಂವಕರ, ಕ್ಷೇತ್ರದ ಚುನಾವಣಾ ಸಂಚಾಲಕ ಎಮ್. ಜಿ. ಭಟ್, ಜಿಲ್ಲಾ ಪ್ರಮುಖರಾದ ನಾಗರಾಜ ನಾಯಕ ತೊರ್ಕೆ, ತೊರ್ಕೆ ಗ್ರಾಮಪಂಚಾಯತ್ ಅಧ್ಯಕ್ಷ ಆನಂದು ಕವರಿ, ಉಪಾಧ್ಯಕ್ಷೆ ಲಕ್ಷ್ಮಿ ಗೌಡ, ಮಂಡಲ ಉಪಾಧ್ಯಕ್ಷ ವಿನಾಯಕ ಭಟ್, ತಾ. ಪಂ. ಮಾಜಿ ಸದಸ್ಯರಾದ ಮಹೇಶ ಶೆಟ್ಟಿ ಹಾಗೂ ವೆಂಟು ಕವರಿ, ಮಿರ್ಜಾನ್ ಮಹಾಶಕ್ತಿಕೇಂದ್ರದ ಅಧ್ಯಕ್ಷ ಮಹೇಶ ನಾಯಕ ದೇವರಬಾವಿ, ಹನೆಹಳ್ಳಿ ಪಂಚಾಯತ್ ಅಧ್ಯಕ್ಷೆ ಭಾರತಿ ಗೌಡ, ಶಕ್ತಿಕೇಂದ್ರದ ಪ್ರಮುಖರಾದ ಗುರುರಾಜ ಗೌಡ, ಬೂತ್ ಕಮಿಟಿ ಅಧ್ಯಕ್ಷ ರಾಮ ಕವರಿ ಮತ್ತು ಸದಾನಂದ ಡಿ. ನಾಯಕ, ತೊರ್ಕೆ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷ ಮಂಜುನಾಥ ನಾಯಕ, ಗ್ರಾಮಪಂಚಾಯತ್ ಸದಸ್ಯರಾದ ದತ್ತ ಗೌಡ, ಸುವರ್ಣ ಮಾದನಗೇರಿ, ಪ್ರಶಾಂತಿ ದೀಪಕ್, ಸಣ್ಣು ಗೌಡ, ಬೂತ್ ಕಮಿಟಿ ಸದಸ್ಯರು, ಪಕ್ಷದ ಅಭಿಮಾನಿಗಳು ಉಪಸ್ಥಿತರಿದ್ದರು.