ಕುಮಟಾ : ಕಾಂಗ್ರೆಸ್ ಎಂದರೆ ಮೋಸ ಎನ್ನಿಸಿದೆ, ಕಾಂಗ್ರೆಸ್ ಅಂದರೆ ದ್ರೋಹ ಎನಿಸಿದೆ, ಕಾಂಗ್ರೆಸ್ ಎಂದರೆ ಅಪನಂಬಿಕೆ ಅನಿಸಿದೆ ಹೀಗಾಗಿ ಈಸಲ ಕಾಂಗ್ರೆಸ್ ಪಕ್ಷವನ್ನು ಬಹಿಷ್ಕರಿಸಬೇಕು, ಹಾಗೂ ಕಾಂಗ್ರೆಸ್ ವಿರುದ್ಧ ಪ್ರತಿಭಟಿಸಬೇಕು ಎಂದು ಮಾಜಿ ಜಿ.ಪಂ ಸದಸ್ಯ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಹೆಗಡೆ ಕಡತೋಕಾ ಹೇಳಿದರು. ಅವರು ಸಹಸ್ರಾರು ಅಭಿಮಾನಿಗಳೊಂದಿಗೆ ಬಿಜೆಪಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡು ಮಾತನಾಡಿದರು.
ಕಾರ್ಯಕರ್ತರಿಗೆ ಗೌರವ ಕೊಡದ ಮೋಸದ ಪಕ್ಷದಿಂದ ಹೊರಗೆ ಬಂದಿದ್ದು ಸಮಾಧಾನ ತಂದಿದೆ. ಕಾಂಗ್ರೆಸ್ ಗೆ ಕೇವಲ ಬಿಜೆಪಿ ಟೀಕಿಸುವುದೇ ಕೆಲಸವಾಗಿದೆ. ಲಕ್ಷ್ಮಣ ಸವದಿ ಅವರ ಬಗ್ಗೆ ಬೀದಿ ಬೀದಿಯಲ್ಲಿ ಪ್ರತಿಭಟನೆ ಮಾಡಿಸಿದ ಕಾಂಗ್ರೆಸ್ ಈಗ ಅವರನ್ನೇ ಕರೆದು ಟಿಕೆಟ್ ನೀಡಿದೆ. ಹೀಗಾಗಿ ಕಾಂಗ್ರೆಸ್ ಪಕ್ಷದ ನೈತಿಕತೆ ಪ್ರಶ್ನಿಸಬೇಕಾಗುತ್ತದೆ ಎಂದರು.
ಈ ಬಾರಿ ಕಾಂಗ್ರೆಸ್ ಅನ್ನು ಸೋಲಿಸಲು ಬಿಜೆಪಿಯ ದಿನಕರ ಶೆಟ್ಟಿ ಅವರನ್ನು ಬೆಂಬಲಿಸುವ ಮೂಲಕ ಬಿಜೆಪಿ ಗೆಲುವಿಗೆ ಎಲ್ಲಾ ಕಾರ್ಯಕರ್ತರು ಶ್ರಮ ವಹಿಸಬೇಕೆಂದು ಅವರು ಕರೆ ನೀಡಿದರು.
ಕಳೆದ 25 ವರ್ಷದಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದೇನೆ, ತಾ.ಪಂ ಸದಸ್ಯನಾಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿ, ಜಿ.ಪಂ ಸದಸ್ಯನಾಗಿ ಪಕ್ಷ ಸಂಘಟನೆ ಮಾಡಿದ್ದೇನೆ. ಜಿಲ್ಲಾ ಕಿಸಾನ್ ಕಾಂಗ್ರೆಸ್ ನ ಅಧ್ಯಕ್ಷನಾಗಿ 1998 ರಲ್ಲಿ ನಾನು ಕಾಂಗ್ರೆಸ್ ಗೆ ಬಂದಾಗ ಕಾಂಗ್ರೆಸ್ ಪ್ರಮುಖರು ಸಾಮೂಹಿಕ ರಾಜಿನಾಮೆ ನೀಡಿದ್ದರು, ಪ್ರತೀ ಚುನಾವಣೆಯಲ್ಲಿ ಸಂಘರ್ಷ ನಡೆದಿತ್ತು, ಆದರೆ ಜನಾಶೀರ್ವಾದದಿಂದ ಗೆದ್ದಿದ್ದೆ. ಈ ಸಲ ಕಾಂಗ್ರೆಸ್ ಟಿಕೆಟ್ ಗೆ ಅರ್ಜಿ ಹಾಕಿದ್ದೆ, ಪ್ರತೀ ಹಂತದಲ್ಲಿ ಪಕ್ಷ ತೊಂದರೆ ನೀಡಿದ್ದನ್ನೂ ಸಹಿಸಿಕೊಂಡೆ. ಕೇವಲ ಹಣವನ್ನು ನೋಡಿ, ಕ್ಷೇತ್ರಕ್ಕೆ ಪರಿಚಯವೇ ಇಲ್ಲದ ಹೊಸಬರನ್ನು ತಂದು ನಿಲ್ಲಿಸಲಾಗಿರುವುದು ಎಲ್ಲಾ ಕಾರ್ಯಕರ್ತರಿಗೆ ನೋವಾಗಿದೆ. ಮಾಜಿ ಶಾಸಕರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಕಾರ್ಯಕರ್ತರ ಮಾತಿನಂತೆ ಬಿಜೆಪಿ ಸೇರ್ಪಡೆ ಆಗುತ್ತಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ, ಶಿವಾನಂದ ಹೆಗಡೆಯವರಿಗೆ ಇಷ್ಟು ಬೆಂಬಲಿಗರಿದ್ದಾರೆ ಎಂಬುದು ಕಾಂಗ್ರೆಸ್ ಗೆ ಗೊತ್ತಿಲ್ಲ, ಗೊತ್ತಿದ್ದರೆ ಮರಕ್ಕೆ ಕಟ್ಟಿಹಾಕುತ್ತಿದ್ದರು ಎಂದು ಹಾಸ್ಯ ಚಟಾಕಿ ಹಾರಿಸಿದರು.
ಶಿವಾನಂದ ಹೆಗಡೆಯವರು ಬಿಜೆಪಿಗೆ ಬಂದಿದ್ದು ನನ್ನ ಅದೃಷ್ಟ, ಚುನಾವಣಾ ಬಿಸಿ ಇರುವಾಗ ಅವರು ಬಂದಾಗ ಬಲ ಬಂದಿದೆ. ನನಗೆ ಗೆಲುವಿನ ಬಗ್ಗೆ ಅಳುಕಿತ್ತು, ಆದರೆ ಸಭೆಯಲ್ಲಿ ಸೇರಿದ ಜನರನ್ನು ನೋಡಿದರೆ ಶಿವಾನಂದ ಹೆಗಡೆಯವರ ಅಭಿಮಾನಿಗಳಿಂದ ನನ್ನ ಗೆಲುವು ನಿಶ್ಚಿತ ಎಂದೆನಿಸಿದೆ ಎಂದರು.
ಮೋದಿಯವರಿಂದಾಗಿ ದೇಶದ ಜನ ಉತ್ತಮ ಬದುಕು ಕಂಡಿದ್ದಾರೆ. ಕೊರೋನಾದಂತಹ ಸಂಕಷ್ಟದ ಕಾಲದಲ್ಲಿಯೂ ಉಚಿತ ಲಸಿಕೆ ನೀಡಿ ನಮ್ಮ ಜೀವ ಉಳಿಸಿದ್ದಾರೆ ಎಂದರು. ರಾಹುಲ್ ಗಾಂಧಿಯವರು ಪ್ರಜಾಪ್ರಭುತ್ವ ಕಗ್ಗೊಲೆ ಎಂದು ಬೇರೆ ದೇಶದಲ್ಲಿ ಈ ದೇಶ ಗೌರವ ಕಳೆದಿದ್ದಾರೆ. ಅಂತವರು ಪ್ರಧಾನಿಯಾದರೆ ಏನಾಗುತ್ತದೆ ಎಂದು ಚಿಂತಿಸಿ ಎಂದರು.
32 ಸಾವಿರ ಮತಗಳ ಅಂತರದ ಗೆಲುವು ಈ ಹಿಂದೆ ಪಡೆದಿದ್ದೆ, ಶಿವಾನಂದ ಹೆಗಡೆಯವರ ಈ ಅಭಿಮಾನಿಗಳಿಂದ ಈ ವರ್ಷ ಇನ್ನೂ ಹೆಚ್ಚಿನ ಗೆಲುವು ಸಾಧಿಸಲಿದ್ದೇನೆ ಎಂಬ ವಿಶ್ವಾಸ ಬಂದಿದೆ ಎಂದರು. ಶಿವಾನಂದ ಹೆಗಡೆಯವರ ಮಾತಿನಂತೆ ಅಗತ್ಯ ಅಭಿವೃದ್ಧಿ ಮಾಡಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆಯಿತ್ತರು.
ಜಿಲ್ಲಾ ಚುನಾವಣಾ ಸಂಚಾಲಕ ಕೆ.ಜಿ ನಾಯ್ಕ ಮಾತನಾಡಿ, ಈ ಹಿಂದೆಯೂ ಬಿಜೆಪಿಗೆ ಬಂದವರನ್ನು ಪಕ್ಷದೊಳಗೆ ಸೇರಿಸಿಕೊಂಡು ಅವರಿಗೆ ಟಿಕೆಟ್ ಕೊಟ್ಟು ಆಯ್ಕೆಗೆ ಬೆಂಬಲಿಸಿದ್ದೇವೆ. ಇಂದಿನಿಂದ ಶಿವಾನಂದ ಹೆಗಡೆಯವರೂ ನಮ್ಮವರು, ಪಕ್ಷದಲ್ಲಿ ಯಾವುದೇ ಬೇಧವಿಲ್ಲ ಎಂದರು.
ಗೋವಾದ ಶಾಸಕ ಕೃಷ್ಣ ಸಾಲ್ಕರ್ ಮಾತನಾಡಿ, ಈ ಕ್ಷೇತ್ರದಲ್ಲಿ ಓಡಾಡುವಾಗ ಶಿವಾನಂದ ಹೆಗಡೆಯವರ ಬಗ್ಗೆ ಸಾಕಷ್ಟು ಕೇಳಿದ್ದೇನೆ. ಸರಿಯಾದ ವ್ಯಕ್ತಿ ತಪ್ಪಾದ ಪಕ್ಷದಲ್ಲಿ ಇದ್ದರು ಇದೀಗ ಬಿಜೆಪಿ ಗೆ ಬಂದು ಎಲ್ಲವೂ ಸರಿಯಾಗುತ್ತಿದೆ ಎಂದರು.
ಜಿಲ್ಲಾ ಚುನಾವಣಾ ಸಂಚಾಲಕ ಕೆ.ಜಿ ನಾಯ್ಕ, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ಎಂ.ಜಿ ಭಟ್ಟ, ಸುಬ್ರಾಯ ವಾಳ್ಕೆ, ವೆಂಕಟ್ರಮಣ ಹೆಗಡೆ, ನಾಗರಾಜ ನಾಯ್ಕ ತೊರ್ಕೆ ಇತರರು ಹಾಜರಿದ್ದರು. ರಾಜು ಭಂಡಾರಿ ಸ್ವಾಗತಗೈದರು. ಪ್ರಶಾಂತ ಹೆಗಡೆ ನಿರೂಪಿಸಿದರು, ನಾರಾಯಣ ಹೆಗಡೆ ಸಹಕರಿಸಿದರು. ಗ್ರಾಮ ಪಂಚಾಯತ್ ಸದಸ್ಯರುಗಳು ಹಾಗೂ ಹೆಗಡೆಯವರ ಅಭಿಮಾನಿಗಳು ಬಿಜೆಪಿ ಸೇರ್ಪಡೆಯಾದರು.