ಕುಮಟಾ : ಪ್ರಸ್ತುತ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿಯವರ ಜನಪ್ರಿಯತೆಯನ್ನು ಸಹಿಸದ ರಾಜಕೀಯ ವಿರೋಧಿಗಳು ವಿವಿಧ ರೀತಿಯಲ್ಲಿ ಅಪಪ್ರಚಾರ ಮಾಡುವ ವ್ಯರ್ಥ ಪ್ರಯತ್ನಕ್ಕೆ ಇಳಿದಿದ್ದಾರೆ ಎಂದು ಹೆಗಡೆ ಬಿಜೆಪಿ ಮಹಾಶಕ್ತಿಕೇಂದ್ರದ ಅಧ್ಯಕ್ಷ ಯೋಗೇಶ್ ಪಟಗಾರ ಕಿಡಿಕಾರಿದ್ದಾರೆ. ದಿನಕರ ಶೆಟ್ಟಿಯವರ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋದ ಕುರಿತಾಗಿ ಅವರು ಮಾತನಾಡಿದರು.

ಸುಮಾರು ಎರಡು ತಿಂಗಳ ಹಿಂದೆ ನಮ್ಮ ಹೆಗಡೆ ಗ್ರಾಮಕ್ಕೆ ಶಾಸಕ ದಿನಕರ ಶೆಟ್ಟಿಯವರು ವಿವಿಧ ರಸ್ತೆ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲು ಹೋಗಿದ್ದ ಸಂದರ್ಭದಲ್ಲಿ, ತಾರಿಬಾಗಿಲದಲ್ಲಿ ಕೆಲವು ತಾಯಂದಿರು ಶಾಸಕರ ಜೊತೆ ತಮ್ಮ ಅಳಲು ತೋಡಿಕೊಳ್ಳಲು ನಿಂತಿದ್ದರು. ಅದನ್ನು ಗಮನಿಸಿದ ಶಾಸಕರು ಕಾರು ನಿಲ್ಲಿಸಿ ತಾವೇ ಇಳಿದು ಬಂದು ಅವರ ಮಾತು ಆಲಿಸುತ್ತಿದ್ದರು. ಅಷ್ಟರಲ್ಲಿ ಸ್ಥಳೀಯ ಯುವಕನೊಬ್ಬ ಶಾಸಕರು ತಾಯಂದಿರ ಜೊತೆ ಮಾತನಾಡುವ ದೃಶ್ಯ ವೀಡಿಯೊ ಮಾಡಲು ಶುರು ಮಾಡಿದ್ದ. ಆ ಸಂದರ್ಭದಲ್ಲಿ ಆ ಯುವಕನ ಪೂರ್ವಾಪರ ಅರಿತಿದ್ದ ಅವರು ವಿಡಿಯೋ ಮಾಡುವ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ವಿಡಿಯೋ ಮಾಡುವ ಬದಲು ಸಮಸ್ಯೆ ಹೇಳಿಕೊಳ್ಳಿ ಎಂದಿದ್ದಾರೆ. ವಿಡಿಯೋ ಚಿತ್ರೀಕರಣದ ಬಗ್ಗೆ ಶಾಸಕರು ಗರಂ ಆಗಿದ್ದ ಸಂದರ್ಭದಲ್ಲಿ ಆಡಿದ ಮಾತುಗಳನ್ನು ಇಟ್ಟುಕೊಂಡು, ಬಿಜೆಪಿಯ ಹಾಗೂ ಶಾಸಕರ ಜನಪ್ರಿಯತೆಯನ್ನು ಸಹಿಸದ ಕೆಲವರು, “ಶಾಸಕರು ತಾಯಂದಿರಿಗೆ ಅವಮಾನಿಸಿದರು” ಎನ್ನುವ ರೀತಿಯಲ್ಲಿ ಬಿಂಬಿಸಲು ಹೊರಟಿದ್ದಾರೆ. ಎಲ್ಲ ಕಡೆ ವೀಡಿಯೊ ಹಾಕಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಯೊಗೇಶ್ ಮಾಹಿತಿ ನೀಡಿದ್ದಾರೆ.

RELATED ARTICLES  ಉ.ಕ ದ ಪ್ರಮುಖ ಸುದ್ದಿಗಳು - ಎರಡು ಕಾರಿನ ನಡುವೆ ಅಪಘಾತ : ಬೈಕ್ ನಿಂದ ಬಿದ್ದ ವ್ಯಕ್ತಿ ಸಾವು.

ಜನರ ನೀರಿನ‌ ಸಮಸ್ಯೆ ಆಲಿಸಿದ ದಿನಕರ ಶೆಟ್ಟಿಯವರ ಸತತ ಪ್ರಯತ್ನ ಹಾಗೂ ಭಾರತೀಯ ಜನತಾ ಪಾರ್ಟಿಯ ಜನಪರ ಆಡಳಿತದ ಫಲವಾಗಿ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಜನರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುವ ಕಾಲ ಸನ್ನಿಹಿತವಾಗಿದೆ.

RELATED ARTICLES  ಲಾರಿಗೆ ಬೈಕ್ ಡಿಕ್ಕಿ : ಓರ್ವ ಸಾವು

ಹೆಗಡೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ 135ಕೋಟಿ ರೂಪಾಯಿ ಮಂಜೂರಾಗಿದ್ದು ಕಾಮಗಾರಿಗೆ ಟೆಂಡರ್ ಕೂಡ ಆಗಿದೆ. ಇದರಿಂದ ಅಳಕೋಡ, ದೀವಗಿ, ಮಿರ್ಜಾನ, ಕೋಡ್ಕಣಿ, ಹೆಗಡೆ, ಬಾಡ, ಹೊಲನಗದ್ದೆ, ಕಾಗಲ, ದೇವಗಿರಿ, ಕಲಭಾಗ,ಕೂಜಳ್ಳಿ, ವಾಲಗಳ್ಳಿ, ಮುರೂರು, ಕಲ್ಲಬ್ಬೆ ಗ್ರಾಮಪಂಚಾಯತ್ ಗಳ 53 ಗ್ರಾಮಗಳಿಗೆ ಅನುಕೂಲವಾಗಲಿದೆ.

ಕಾಮಗಾರಿ ಈಗಷ್ಟೇ ಪ್ರಾರಂಭಗೊಂಡಿದ್ದು, ಈ ಪ್ರಾಜೆಕ್ಟ್ ಪೂರ್ಣಗೊಳ್ಳಲು ಸಮಯವಕಾಶ ಬೇಕಾಗುತ್ತದೆ. ಹಿಂದೆ ಯಾವ ಶಾಸಕರೂ ಮಾಡದ ಮಹತ್ವಪೂರ್ಣ ಹಾಗೂ ಮುಂದಾಲೋಚನೆಯ ಕಾರ್ಯವನ್ನು ದಿನಕರ ಶೆಟ್ಟಿಯವರು ತಮ್ಮ ಆಡಳಿತಾವಧಿಯಲ್ಲಿ ನೆರವೇರಿಸಿದ್ದಾರೆ ಎಂದ ಅವರು. ವಿರೋಧಿಗಳ ಈ ತರಹದ ಕುಹಕದ ಚಿಂತನೆಗಳು ಯಾವುದೇ ಪರಿಣಾಮ ಬೀರುವುದಿಲ್ಲ. ಬಿಜೆಪಿಯ ಅಭಿವೃದ್ಧಿ ಕಾರ್ಯಗಳಿಗೆ ಮತದಾರರು ಮೇ 10ರಂದು ಬಿಜೆಪಿಗೆ ಮತದಾನ ಮಾಡುವ ಮೂಲಕ ಆಶೀರ್ವದಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದಿದ್ದಾರೆ.